


ರಾತ್ರಿ ಹಗಲಾಗಲಿಲ್ಲ
ಹಾಗೆ ಮುಸುಕು
ಹಾಕಿ ಮಲಗಿದ್ದು
ಎಚ್ಚರವಾಗಲೂ ಇಲ್ಲ..!
ಹಿಂದಿನ ನೋವುಗಳ
ಪಾಠವಾಗಿಸಿ
ನಾಳೆಗಳ ನೆನೆಯುತ್ತ
ಮಲಗಿದ್ದು ಖಾಲಿ ಹೊಟ್ಟೆಗೆ
ನಿದ್ದೆಯ ಕಟ್ಟಿ…
ಬರೀ ಕನಸುಗಳು
ಇಲ್ಲದನ್ನು ಇದೆಯೆಂದು ಭಾವಿಸಿ
ಮೂರು ಹೊತ್ತು ಬಿರಿಯಾನಿ ತಿಂದಂತೆ
ಕೈಗೊಂದು ಕಾಲಿಗೊಂದು ಆಳಿದ್ದಂತೆ
ಮೈಸೂರು ಪ್ಯಾಲೇಸ್ ನಂತ ಮನೆಯ ಮುಂದೆ
ಆಡಿ ಫೆರಾರಿಯಂತ ಕಾರು..!
ಮುಗಿಯದ ಮುಗಿಲೆತ್ತರದ ಆಸೆಗಳಿಗೆ
ಕನಸೊಂದು ಸಹಕಾರ ನೀಡುತ್ತಿತ್ತು.
ಕನಸ ಬೆನ್ನತ್ತಿ ಹೋದವನಿಗೆ
ನಿದ್ದೆಯ ಮೊರೆ ಹೋಗುವುದೇ
ಖುಷಿ ಎನಿಸಿತು..
ಬಾರದಿರಲಿ ಹಗಲೊಂದು
ಕನಸುಗಳ ಕಟ್ಟುವ ರಾತ್ರಿಗೆ
ಹಸಿವು ಮರೆತು ಹೋಗಲಿ
ಕಣ್ಣಿಗೆ ಕತ್ತಲೆಯೊಂದೇ ಉಳಿಯಲಿ….
✍ಯತೀಶ್ ಕಾಮಾಜೆ


