Thursday, September 28, 2023

*ಗಜಲ್*- *ಅಪರೂಪದ ಸಮಾಗಮ*

Must read

ಸಂಗಾತಿಯ ವಿಷಯದಲ್ಲಿ ಉಂಟು ನೂರಾಸೆ ಕನಸುಗಳು ಅಂದು ಇಂದು ಎಂದೂ/
ಇರಬೇಕು ಇಚ್ಛೆಗಳಿಗೆ ತಕ್ಕ ಹಾಗೆ ಪೂರೈಸುವಂತೆ ಆಕಾಂಕ್ಷೆಗಳ ಅದು ಇದು ಎಂದೂ//

ಕಾಲವೊಂದಿತ್ತು ಅಪ್ಪ ಹಾಕಿದ ಆಲದ ಮರಕ್ಕೆ ತಪ್ಪಿಸಲಾಗದೆ ನೇಣು ಹಾಕಿಕೊಳ್ಳಲೆಂದು/
ಯಾರು ಬೀಳುವರು ಇನ್ನೂ ಹಗಲು ಕಂಡ ಬಾವಿಗೆ ನೋಡದೆ ಹಿಂದೂ ಮುಂದು ಎಂದೂ//

ಹಾಗೆ ಬಂದ ಪರಿಚಿತರಲ್ಲಿ ಇಷ್ಟ ಆಗಿ ಯಾರೋ ಒಬ್ಬರು ಮೊಳಕೆಯೊಡೆಯುವುದು ಪ್ರೀತಿ/
ಇರದೇ ಯಾರ ಒತ್ತಾಯ ಸ್ವೀಕಾರ ಯೋಗ್ಯ ಪರಸ್ಪರ ಆಯ್ಕೆ ನಡೆದು ನುಡಿದು ಎಂದೂ//

ನೇರ ಮದುವೆ ಎಷ್ಟು ವ್ಯವಸ್ಥಿತ ಅಲ್ಪವಾದರೂ ಅರಿತವರಾರು ಮುಂಚೆ ಒಬ್ಬರನ್ನೊಬ್ಬರು/
ಭಿನ್ನ ಅಭಿಪ್ರಾಯ ಹೊಂದಾಣಿಕೆ ಕೊರತೆ ಎಂದೋ ಮಾಯ ಮೊಗೆದು ತಿಳಿದು ಎಂದೂ//

ಗೊಡ್ಡು ಸಂಪ್ರದಾಯಗಳ ಹಿರಿಯರ ಗೊಡವೆ ಮುಗ್ಧ ಮನಸ್ಸುಗಳ ಮೊದಲ ತಲ್ಲಣ/
ಇದ್ದರೇನು ತೊಟ್ಟರೆ ಪಣ ಎದುರಿಸಿ ನಿಲ್ಲುವ ಛಾತಿ ಆಗ ಕರಗತ ನೊಂದು ಬೆಂದು ಎಂದೂ//

ನನಗೆ ನೀನು ನಿನಗೆ ನಾನು ಆಗಿ ಹೊಣೆ ಕಂಡುಕೊಳ್ಳುವ ತುಮುಲ ಜೀವನ ಪಥ/
ಇಷ್ಟ ಕಷ್ಟಗಳ ಸ್ಪಷ್ಟ ಅರಿವು ಸಾಗಲು ಜೊತೆಗೆ ತೊಡಕಿಲ್ಲದಂತೆ ಎದ್ದು ಬಿದ್ದು ಎಂದೂ//

ಕಠಿಣ ನಿರ್ಬಂಧಗಳಿಲ್ಲದ ಆತ್ಮೀಯ ಸಲಹೆಗಳ ಪರಿಪಾಠ ಗೌರವಿಸುತ್ತಾ ಒಬ್ಬರನ್ನೊಬ್ಬರು/
ನಿವಾರಿಸಿಕೊಂಡು ಎಲ್ಲ ಸಮಸ್ಯೆ ಬಾರದಂತೆ ಬಿರುಕು ನಡೆಯುವ ಗೆದ್ದು ಜಿದ್ದು ಎಂದೂ//

ಸುಳಿಯದಂತೆ ಕೊಂಕು ಬಿಂಕು ಅಕ್ಕರೆ ಕಾಳಜಿಯ ಸಮಾಗಮವಿದೂ ಒಲವ ಸೇತುವೆ/
ಪೂರ್ಣ ಅರ್ಥದ ಪ್ರೇಮ ವಿವಾಹ ಅಪೂರ್ವ ಬಾಂಧವ್ಯವಿದೂ ನಂದು ನಿಂದು ಎಂದೂ//

 

*ಬಸವರಾಜ ಕಾಸೆ*

More articles

Latest article