Friday, October 27, 2023

ಕಾರ್ಕಳದಲ್ಲಿ ಜರುಗಿದ ದಶವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ

Must read

 (ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಸಾಹಿತ್ಯವು ಬದುಕಿನ ಚಿತ್ರಣ ರೂಪಿಸಿ ಜೀವನಶೈಲಿಯನ್ನೇ ದಲಾಯಿಸಬಲ್ಲದು. ಇಂದು ವೈಜ್ಞಾನಿಕವಾಗಿ ಬದುಕು ಬದಲಾಯಿಸಿ ಕೊಂಡಿರುವ ಜನತೆ ಸಾಹಿತ್ಯದಿಂದ ದೂರ ಸರಿಯುತ್ತಿರುವುದು ದುರಂತ. ಇಂದು ಗಗನಚುಂಬಿ ಕಟ್ಟಡಗಳಿಂದ ತುಂಬಿರುವ ನಗರಗಳಲ್ಲಿ ಜನತೆ ಕರೆಂಟ್ ಹೋದಾಗಲೇ ಹುಣ್ಣಿಮೆಚಂದ್ರನನ್ನು ಕಾಣುವಂತಾಗಿದ್ದರೆ ಗ್ರಾಮೀಣ ಜನತೆ ಮಾಸಿಕವಾಗಿ ಬೆಳದಿಂಗಳ ಚಂದ್ರನನ್ನು ಕಂಡು ಬಾಳನ್ನು ಬೆಳಗಿಸುತ್ತಿದ್ದಾರೆ. ಬಹಳಷ್ಟು ಕವಿಗಳಿಗೆ ಇಂತಹ ಬೆಳದಿಂಗಲು ಜೀವ ತುಂಬಿಸಿದೆ. ಸಾವಿರಾರು ಚಲನಚಿತ್ರಗಳು ಬೆಳದಿಂಗಳನ್ನು ವಸ್ತುಸ್ಥಿತಿಯಾಗಿಸಿದರೆ, ಗಂಡಹೆಂಡಿರ ಒಲವನ್ನು ಇಂತಹ ಚಂದಿರನು ಇಮ್ಮಡಿಗೊಳಿಸಿ ಬಾಳು ಬೆಳಗಿಸಲು ಪೂರಕವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕಾದಂಬರಿಕಾರ ಮತ್ತು ಬರಹಗಾರ ಡಾ| ನಾ.ಡಿಸೋಜ ತಿಳಿಸಿದರು.

ಇಂದಿಲ್ಲಿ ಭಾನುವಾರ ಸಂಜೆ ಕಾರ್ಕಳದಲ್ಲಿನ ಬಾಹುಬಲಿ ಬೆಟ್ಟದಲ್ಲಿನ ಶ್ರೀ ಗೋಮಟೇಶ್ವರ ಸನ್ನಿಧಿಯಲ್ಲಿ ಕಾರ್ಕಳದ ಕೀರ್ತಿ ಶೇಷರ ದ್ವಾರಗಳೊಂದಿಗೆ ರಚಿತ ಮಹಾಕವಿ ಮುದ್ದಣ್ಣ-ರತ್ನಕರವರ್ಣಿ ಸಮಭಾವ ವೇದಿಕೆಯಲ್ಲಿ ಮಹಾ ಕಾವ್ಯಗಳ ಮಹಾ ಕವಿ ಡಾ| ಪ್ರದೀಪ್‌ಕುಮಾರ್ ಹೆಬ್ರಿ ಸರ್ವಾಧ್ಯಕ್ಷತೆಯಲ್ಲಿ ಜರುಗಿಸಿದ ದಶವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಾರಂಭವನ್ನು ಹಾಸನದ ಅರೆಮಾದೇನಹಳ್ಳಿಯ ಶ್ರೀ ಶಿವ ಸಜ್ಞಾನ ತೀರ್ಥ ಸ್ವಾಮೀಜಿ ಅವರಿಗೆ ‘ಭಾರತ ಧರ್ಮ ವಿಭೂಷಣ’ ಪುರಸ್ಕಾರ ಪ್ರದಾನಿಸಿ ಉದ್ಘಾಟಿಸಿ ನಾ.ಡಿಸೋಜ ಮಾತನಾಡಿದರು.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸ್ಥಳಿಯ ಹತ್ತಾರು ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಸಮ್ಮೇಳನದ ವೇದಿಕೆಯಲ್ಲಿ ಅತಿಥಿ ಅಭ್ಯಾಗತರುಗಳಾಗಿ ಐಡಬ್ಲ್ಯುಜೆಯು (ದೆಹಲಿ) ರಾಷ್ಟ್ರಾಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಮ್ಮೇಳನದ ಗೌರವಾಧ್ಯಕ್ಷರೂ ನಾಗೇಶ್ವರ ಸಿನಿ ಕ್ರಿಯೇಷನ್ಸ್‌ನ ಆಡಳಿತ ನಿರ್ದೇಶಕ, ಚಲನಚಿತ್ರ ನಿಮಾಪಕ ಕಡಂದಲೆ ಸುರೇಶ್ ಎಸ್.ಭಂಡಾರಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಕಾರ್ಕಳ ಮತ್ತು ರೋಟರಿ ಕ್ಲಬ್ ಅಧ್ಯಕ್ಷ ಶೈಲೇಂದ್ರ ಕುಮಾರ್, ಹೆಚ್.ಡುಂಡಿರಾಜ್ ಉಪಸ್ಥಿತರಿದ್ದರು.

ಡಾ| ಪ್ರದೀಪ್‌ಕುಮಾರ್ ಅಧ್ಯಕ್ಷೀಯ ನುಡಿಗಳನ್ನಾಡಿ ಸಾಹಿತ್ಯವೆಂದರೆ ಸಂವಾದ, ಸಂಪರ್ಕ, ಅನುಬಂಧ, ಸಹೃದಯತೆ, ಸದ್ವಿಚಾರವಾಗಿದೆ. ಹಾಗಾಗಿ ರವಿ ಕಾಣದ್ದನ್ನು ಕವಿ ಕಾಣುತ್ತಾನೆ. ಕವಿ ಕಾಣದ್ದನ್ನು ವಿಮರ್ಶಕ ಕಾಣುವನು. ಆದುದರಿಂದಲೇ ಸಾಹಿತಿ ಒಂದು ರೀತಿಯ ಜೀವನ ಸೃಷ್ಠಿಕರ್ತನಾಗಿದ್ದಾನೆ. ಸಾಹಿತಿಗಳಾದವರು ವಿದ್ವತ್ತಿನ ಬೀಗುವಿಕೆಯಲ್ಲಿ ಬರಿದೇ ಉಪದೇಶ ಮಾಡುವ ಮೊದಲು ನಮ್ಮ ನಡೆನುಡಿಯಲ್ಲಿ ಶುದ್ಧತೆ ರೂಢಿಸಿ ಕೊಳ್ಳಬೇಕಾಗಿದೆ. ಅವಾಗಲೇ ಬದುಕು ಬಹುಸುಂದರೆ ಆಗಬಲ್ಲದು ಎಂದರು.

ಸಮಾರಂಭದಲ್ಲಿ ಅತಿಥಿಗಳು ಮುಂಬಯಿ ಮಹಾನಗರದಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಸಂಸ್ಥೆಗೆ ಸೇರಿದಂತೆ ಹತ್ತಾರು ‘ಕರ್ನಾಟಕ ಸಂಘ ರತ್ನ’, ಮತ್ತು ಬೈಲೂರು ಬಾಲಚಂದ್ರ ರಾವ್ (ರಂಗಭೂಮಿ), ಮುದ್ರಾಡಿ ದಿವಾಕರ ಶೆಟ್ಟಿ (ಉದ್ಯಮ ಮತ್ತು ಸಮಾಜ ಸೇವೆ) ನಾರಾಯಣ ಶೆಟ್ಟಿ ನಂದಳಿಕೆ, ಡಾ| ಎನ್.ಕೆ ಬಿಲ್ಲವ (ಶಿಕ್ಷಣ) ಮತ್ತು ಗುಣಪಾಲ ಉಡುಪಿ (ಹೊರನಾಡ ಸೇವೆ) ಸೇರಿದಂತೆ ೨೮ ಸಾಧಕರಿಗೆ ‘ಕರ್ನಾಟಕ ಸಾಧನ ರತ್ನ’, ಕು| ಸುಪ್ರಿಯಾ ಎಸ್.ಉಡುಪ, ಸೇರಿದಂತೆ 37 ಪ್ರತಿಭೆಗಳಿಗೆ ‘ಕರ್ನಾಟಕ ಪ್ರತಿಭಾ ರತ್ನ’, ರಾಜೇಶ್ ಗೌಡ ನವಿಮುಂಬಯಿ ಸೇರಿದಂತೆ 42 ಪ್ರತಿಭೆಗಳಿಗೆ ‘ಕರ್ನಾಟಕ ಯುವ ರತ್ನ’ ಗೌರವ, ಶ್ರೀ ಆದಿಶಕ್ತಿ ಕ್ಷೇತ್ರ ನಾಟ್ಕದೂರು ಮುದ್ರಾಡಿ ಕಮಲಾ ಮೋಹನ್.ಪಿ ಇವರಿಗೆ ‘ಕರ್ನಾಟಕ ದಂಪತಿ ರತ್ನ’ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು. ಪ್ರತಿಭಾನ್ವಿತ ಚಿತ್ರಕಲಾವಿದ ಸುನೀಲ್ ಜೆ.ಚಿತ್ರಗಾರ ರಚಿತ ಕಲಾಕೃತಿಯನ್ನು ಸಮ್ಮೇಳನಾಧ್ಯಕ್ಷರಿಗೆ ನೀಡಿ ಗೌರವಿಸಿ ಅಭಿನಂದಿಸಿದರು.

ಸಮ್ಮೇಳನದಲ್ಲಿ ಡಾ| ಪ್ರದೀಪ್‌ಕುಮಾರ್ ಹೆಬ್ರಿ ಅಧ್ಯಕ್ಷತೆಯಲ್ಲಿ ಅನುಭವಗೋಷ್ಠಿ, ರಾಧಾಕೃಷ್ಣ ಉಳಿಯತಡ್ಕ (ಕಾಸರಗೋಡು) ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಬೆಳದಿಂಗಳ ಕವಿಗೋಷ್ಠಿಯನ್ನು ಜ್ಯೋತಿ ಗುರುಪ್ರಸಾದ್ ಕಾರ್ಕಳ ಉದ್ಘಾಟಿಸಿದ್ದು ಮುಂಬಯಿನ ಕವಿ ಗೋಪಾಲ ತ್ರಾಸಿ ಪ್ರಾರಂಭೋತ್ಸವ ಕವಿತೆಯನ್ನಾಡಿದರು. ಸಾ.ದಯಾ, ಅಶೋಕ್ ವಳದೂರು ಸೇರಿದಂತೆ ಇಪ್ಪತ್ತೆರಡು ಕವಿಗಳು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಗಂಗಾದರ್ ಪಣಿಯೂರು (ಕಾರ್ಕಳ) ಕವಿಗೋಷ್ಟಿ ನಿರ್ವಹಿಸಿದರು.
ಪೂರ್ಣಪ್ರಜ್ಞ ವೇದಿಕೆಯಲ್ಲಿ ರಾಜ್ಯ ಕಲಾಶ್ರೀ ಪುರಸ್ಕೃತೆ ಪ್ರದ್ಯುಮ್ನಮೂರ್ತಿ ಕಡಂದಲೆ ಅಧ್ಯಕ್ಷತೆಯಲ್ಲಿ ಜರುಗಿದ ‘ಕರ್ನಾಟಕ ಪ್ರತಿಭೋತ್ಸವ’ವನ್ನು ರಾಷ್ಟ್ರೀಯ ಬಾಲ ಕಲಾವಿದೆ ರೆಮೊನಾ ಈವೆಟ್ ಪಿರೇರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಥೆಗಾರ ಗೋಪಾಲ ತ್ರಾಸಿ (ಮುಂಬಯಿ) ಅವರ ಅಂಕಣ ಬರಹ ‘ಈ ಪರಿಯ ಕಥೆಯ’ ಕೃತಿಯನ್ನು ಪುನರೂರು ಬಿಡುಗಡೆ ಗೊಳಿಸಿದರು.

ಬೊಮ್ಮರಬೆಟ್ಟು ಎ.ನರಸಿಂಹ, ನಗಸೇವಕಿ ವಿನಾಕ್ಷಿ ಜಿ.ಪಣಿಯೂರು, ಅನಿಲ್ ಸಸಿಹಿತ್ಲು (ಮುಂಬಯಿ) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ರಾಜಗುರು ದಾನ ಶಾಲಾ ಮಠದಲ್ಲಿ ಶ್ರೀ ಲಲಿತಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಸ್ವಾಮೀಜಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮೆರವಣಿಗೆಗೆ ಚಾಲನೆಯನ್ನಿತ್ತರು. ನಾಡಗೀತೆ ಮತ್ತು ರೈತಗೀತೆಯೊಂದಿಗೆ ಸಮಾರಂಭ ಆದಿಗೊಂಡಿತು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಪತ್ರಕರ್ತ, ಲೇಖಕ, ಶೇಖರ ಅಜೆಕಾರು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮಕ್ಕಳು ಪ್ರಾರ್ಥನೆಯನ್ನಾಡಿದರು. ಪ್ರೊ. ಶ್ರೀನಿವಾಸ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪತ್ರಕರ್ತ ವಿಜಯಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ ಪುರಸ್ಕೃತರನ್ನು ಪರಿಚಯಿಸಿದರು. ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

More articles

Latest article