Tuesday, October 31, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-29

Must read

ನಮ್ಮನ್ನಗಲಿಯೂ ಅಗಲದೆ ನಮ್ಮೊಂದಿಗೆ ಚಿರಸ್ಥಾಯಿಯಾಗಿರುವ ಧೀರ್ಘಾಯುಷಿ ಸಿದ್ಧಗ೦ಗಾ ಮಠದ ವರಋಷಿ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಈ ಲೇಖನದ ಮೂಲಕ ಒಂದು ನುಡಿನಮನ.
ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ,ಅನ್ನಾ ಹಜಾರೆ, ಮಹಾವೀರ, ಬುದ್ಧ, ಪೈಗಂಬರರು, ಮದರ್ ತೆರೇಸಾ,ಏಸುಕ್ರಿಸ್ತರು, ಸ್ವಾಮಿ ವಿವೇಕಾನಂದರು.. ಹೀಗೆ ಜನರ ಏಳಿಗೆಗಾಗಿ ಶ್ರಮಿಸುವ ಯಾವ ಮಹಾನ್ ನಾಯಕರನ್ನೂ ಜನ ಜಾತಿ, ಬೇಧ, ಬಡವ-ಬಲ್ಲಿದ, ಪುರುಷ-ಮಹಿಳೆ, ಧರ್ಮ-ದೇಶ ಯಾವುದನ್ನೂ ಲೆಕ್ಕಿಸದೆ, ಪಕ್ಷಾತೀತರಾಗಿ ಅವರ ಒಳ್ಳೆಯ ಗುಣಗಳಿಗಾಗಿ ಅವರನ್ನು ಪ್ರೀತಿಸುತ್ತಾ, ಅವರನ್ನು ಎಲ್ಲಾ ಜನರೂ ತಮ್ಮ ನಾಯಕರಾಗಿ ಸ್ವೀಕರಿಸಿ, ತಮ್ಮ ಮನದಲ್ಲಿ ಅಂಥವರಿಗೆ ಒಂದೊಳ್ಳೆ ಸ್ಥಾನ ಕೊಟ್ಟು ಗಟ್ಟಿಯಾಗಿ ಹೃದಯದಲ್ಲಿ ಪ್ರತಿಷ್ಠಾಪಿಸಿ ಬಿಟ್ಟಿರುತ್ತಾರೆ. ದೇಶದ ಅವರನ್ನರಿತ ಕಟ್ಟ ಕಡೆಯ ವ್ಯಕ್ತಿಗೂ ಸಹ ಅವರ ಬಗ್ಗೆ ನಂಬಿಕೆ, ಪ್ರೀತಿ, ಗೌರವವಿರುತ್ತದೆ. ಇಂಥವರದೇ ಸಾಲಿಗೆ ಸೇರುವ ಧೀಮಂತ ವ್ಯಕ್ತಿ ಡಾ. ಶಿವಕುಮಾರ ಸ್ವಾಮೀಜಿಯವರು.

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ, ಅಕ್ಷರದ ಕಲಿಕೆಯಲ್ಲೂ ಬಡವಾಗಿದ್ದ, ಬಯಲು ಸೀಮೆಯ ತುಮಕೂರಿನಂಥ ನಾಡಿನಲ್ಲಿ ನೆಲೆನಿಂತು, ವಿದ್ಯಾರ್ಥಿಗಳಿಗಾಗಿ ವಿದ್ಯೆ ದಾನ ಮಾಡಿದ ಗುರು, ಬಡವರ ಬಂಧು, ಊಟ, ಕೈತುತ್ತನ್ನಿತ್ತು ಸಾಕಿದ ದೇವರು ಅವರು. ಹೊಟ್ಟೆ ಹಸಿದವನಿಗೆ ಊಟ, ಮನಸ್ಸು ಹಸಿದವನಿಗೆ ವಿದ್ಯೆ ಕೊಡುವ ಕಾರ್ಯ ಸುಲಭದ ಮಾತಲ್ಲ. ಹಲವಾರು ಜನ ಅವರಿಗೆ ಕೈಜೋಡಿಸಿರಬಹುದು, ಅವರ ಕಾರ್ಯವನ್ನು ಹೊಗಳಿ ಬೆಂಗಾವಲಾಗಿ ನಿಂತಿರಬಹುದು, ಆದರೆ ಏನಾದರಾಗಲಿ, ನನ್ನಿಂದ ಇತರರಿಗೆ ಏನಾದರೂ ಸಿಗಬೇಕು ಎಂಬ ಅವರ ಮನದ ತುಡಿತ ಅವರ ನಾಯಕತ್ವವನ್ನು ಪ್ರೇರೇಪಿಸಿರಬಹುದೇನೋ. ನಾನಿದ್ದೇನೆ ಎಂದು ಬಾಯಿ ಮಾತಲ್ಲಿ ಹೇಳುವುದು ಸುಲಭ, ಅದನ್ನು ಪ್ರತಿನಿತ್ಯ ಕೃತಿಯಲ್ಲಿ ಮಾಡಿ ತೋರಿಸಿದವರು ಈ ಮಹಾನುಭಾವರು. ಕೋಟಿ ಹೃದಯಗಳನ್ನು ಗೆಲ್ಲುವುದು ಸುಲಭದ ಮಾತಲ್ಲ, ಇಂದು ಪಟ್ಟಕ್ಕೇರಿಸಿದ ಜನರೇ ನಾಳೆ ನರಕಕ್ಕೂ ದೂಕಬಹುದು! ಆದರೆ ಈಗಿನ ಕಾಲದಲ್ಲೂ ಜನ ಪಟ್ಟದ ಮೇಲೆ ಕೂರಿಸಿರುವರು ಎಂದರೆ ಅವರ ಹೃದಯ ಸಿರಿವಂತಿಕೆ ಎಷ್ಟರ ಮಟ್ಟಿಗೆ ಇತ್ತೆಂಬುದಕ್ಕೆ ಅದೇ ಸಾಕ್ಷಿ.

ಈಗಿನ ಕಲಿಯುಗದಲ್ಲಿ ನ್ಯಾಯ ನೀತಿಗೆ ಬೆಲೆಯಿಲ್ಲ, ಅನ್ಯಾಯ ಎಲ್ಲೆಡೆ ತಾಂಡವವಾಡುತ್ತಿದೆ, ಕೆಟ್ಟದನ್ನು ಮಾಡಿದವನೇ ಮೆರೆಯುವನು ಎಂದೆನ್ನುವ ಜನ ಇವರನ್ನು ನೋಡಿ ಕಲಿಯಬೇಕು. ಭಾರತದಂತಹ ಸಾಂಸ್ಕೃತಿಕ ಪರಂಪರೆಯ ಭವ್ಯ ಐತಿಹ್ಯವಿರುವ ರಾಷ್ಟ್ರದಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹಗಳಿಗೆ ಕೊನೆಯಿಲ್ಲ! ಭಾರತಕ್ಕೆ ಭಾರತವೇ ಸಾಟಿ ಎಂಬುದನ್ನು ಪರ ದೇಶದಲ್ಲಿ ವಾಸಿಸುತ್ತಿರುವ ಯಾವುದೇ ಭಾರತೀಯರನ್ನು ಕೇಳಿನೋಡಿ, ಹೇಳುತ್ತಾರೆ!
ಪ್ರಾಣಿ ಪಕ್ಷಿಗಳೂ,ಮನುಜರೂ ತಲೆಬಾಗುವ ಏಕೈಕ ಗುಣ ಪ್ರೀತಿ. ಅದು ಶಿವಕುಮಾರ ಸ್ವಾಮೀಜಿಗಳ ಮೂಲಮಂತ್ರ. ಹೃದಯ ವೈಶಾಲ್ಯತೆ, ಪರೋಪಕಾರ, ಪರರ ಬಗೆಗಿನ ತುಡಿತ, ಪರ ಹಿತ ಇವನ್ನು ಬಯಸುವ ಮಾನವ ದೈವತ್ವಕ್ಕೇರುವನು. ಅದೇ ರೀತಿ ದೈವತ್ವಕ್ಕೇರಿದ ವ್ಯಕ್ತಿ ಡಾ. ಶಿವಕುಮಾರ ಸ್ವಾಮೀಜಿಗಳು.

ರಾಜಕೀಯದ ಗಂಧ ಗಾಳಿಯನ್ನೂ ಶೋಕಿಸಿಕೊಳ್ಳದೆ, ದುಡ್ಡಿಗಾಗಿ ಕಾವಿ ಧರಿಸಿ ಓಡಾಡುತ್ತಾ ಸನ್ಯಾಸತ್ವಕ್ಕೇ ಕಳಂಕ ತರುವ ಈ ಸಮಯದಲ್ಲಿ, ನಿಜವಾದ ಭಕ್ತಿ, ಪೂಜೆ, ಸನ್ಯಾಸತ್ವದ ಕಳೆಯನ್ನು ಎತ್ತಿ ಹಿಡಿದವರು ಅವರು.
ಸ್ವಾಮಿಗಳ ನಿರ್ಗಮನದಿಂದ ದೇಶ, ರಾಜ್ಯ ತುಂಬಾ ಕಳೆದುಕೊಂಡಿದೆ. ಅಂತಹ ಹಲವಾರು ಹೃದಯಗಳು ಮತ್ತೆ ಮತ್ತೆ ಹುಟ್ಟಿ ಬರಲಿ ಭಾರತದಲ್ಲಿ, ಅಗಲಿದ ಆತ್ಮವು ಶಿವನಲ್ಲಿ ಲಿಂಗೈಕ್ಯವಾಗಲಿ, ಅಲ್ಲಿ ಶಾಂತಿಯಿಂದ ನೆಲೆಸಲಿ ಎಂದು ಶುಭ ಹಾರೈಸೋಣ. ನೀವೇನಂತೀರಿ?

 

@ಪ್ರೇಮ್@

More articles

Latest article