ವಿಟ್ಲ: ಪ್ರಾಚೀನವಾಗಿರುವ ಒಕ್ಕಲಿಗ ಸಂಪ್ರದಾಯದೊಂದಿಗೆ ಒಕ್ಕಲಿಗ ಸಮಾಜ ಹೆಮ್ಮರವಾಗಿ ಬೆಳೆಯುತ್ತಲಿದೆ. ಸಮಾಜಮುಖೀ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಸಮಾಜದ ಸಮಸ್ಯೆಗಳನ್ನು ಎದುರಿಸಿ, ಚರ್ಚಿಸಿ, ಸಂಘರ್ಷಕ್ಕೆಡೆಯಾಗದಂತೆ ವ್ಯವಹರಿಸಿ, ಸಮಾಲೋಚಿಸಿ, ಸದೃಢ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಶಾಂತಿನಗರ ಅಕ್ಷಯ ಸಮುದಾಯ ಭವನದಲ್ಲಿ ಗಣಪತಿ ಹೋಮ, ಸತ್ಯನಾರಾಯಣ ಪೂಜೆ, ವಾರ್ಷಿಕ ಸಮಾವೇಶ, ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. 10 ಸಾವಿರಕ್ಕೂ ಅಧಿಕ ಸದಸ್ಯರಿರುವ ಜಿಲ್ಲಾ ಸಂಘವನ್ನು ಸ್ಥಾಪಿಸಬೇಕು. ಯುವ ವೇದಿಕೆ ಮತ್ತು ಮಹಿಳಾ ಸಂಘವನ್ನು ನಿರ್ಮಾಣ ಮಾಡಬೇಕು. ಎಲ್ಲರೂ ಒಂದೇ ಎನ್ನುವ ಭಾವದಿಂದ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಭಾಗವಹಿಸಿ, ಮಾತನಾಡಿ, ಸಮಾಜದ ಮುಂದಿನ ಪೀಳಿಗೆಗೆ ಸಂಪ್ರದಾಯವನ್ನು ಪರಿಚಯಿಸಬೇಕಾಗಿದೆ. ಒಕ್ಕಲಿಗರು ನಾಯಕತ್ವ ಗುಣವನ್ನು ಹೊಂದಿದ್ದಾರೆ. ಸಂಘದ ಅಭಿವೃದ್ಧಿ ಕಾರ್ಯಗಳಿಗೆ 5 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಎಸ್.ಎಲ್. ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನ ಸ್ವೀಕರಿಸಿ, ಮಾತನಾಡಿದ ಅವರು ಸಮುದಾಯದವರು ಬೇರೆ ಬೇರೆ ಕಾರ್ಯಗಳಲ್ಲಿ ಗುರುತಿಸುವಂತಾಗಬೇಕಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಭೇಟಿ ಮಾಡಿ, ಸಂಘದ ಅಭಿವೃದ್ಧಿ ಕಾಮಗಾರಿಗಳಿಗೆ 25 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಮೋಹನ ಗೌಡ ಕಾಯರ್ಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ, ನಿವೃತ್ತ ಅಧ್ಯಾಪಕ ಮುತ್ತಪ್ಪ ಗೌಡ ಉಳಿ, ಕೊಳ್ನಾಡು ಗ್ರಾ.ಪಂ.ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ ಬರ್ಕಳ, ಜಿಲ್ಲಾ ಒಕ್ಕಲಿಗ ಯುವ ವೇದಿಕೆ ಸಂಘಟನ ಸಂಚಾಲಕ ಮೋಹನ ಗೌಡ ಕಲ್ಮಂಜ, ಯುವ ವೇದಿಕೆ ಅಧ್ಯಕ್ಷ ವಿನಯ ಎಸ್.ಸಂಕೇಶ ಅವರು ಉಪಸ್ಥಿತರಿದ್ದರು.
ಇದೇ ಸಂದರ್ಭ ನೇತ್ರಾಧಿಕಾರಿ ಎಸ್.ಶಾಂತರಾಜ್, ಕಬಡ್ಡಿಪಟುಗಳಾದ ಗಾಯತ್ರಿ, ವೀಕ್ಷಿತಾ ಗೌಡ ಮುದೂರು, ಕರಾಟೆ ಪ್ರತಿಭೆ ಎಂ.ಕಾವ್ಯಾ ಮಣ್ಣಗುಳಿ ಅವರನ್ನು ಸಮ್ಮಾನಿಸಲಾಯಿತು. ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಗೌಡ ಅಳಿಕೆ ಸ್ವಾಗತಿಸಿದರು. ಮಹಿಳಾ ಘಟಕಾಧ್ಯಕ್ಷೆ ಜಲಜಾಕ್ಷೀ ಬಿ.ಗೌಡ ಪೊನ್ನೆತ್ತಡಿ ವಂದಿಸಿದರು. ಕಾರ್ಯದರ್ಶಿ ಮೋನಪ್ಪ ಗೌಡ ಶಿವಾಜಿನಗರ ಮನವಿ ವಾಚಿಸಿದರು. ಕೋಶಾಧಿಕಾರಿ ವಿಶ್ವನಾಥ ಗೌಡ ಕುಳಾಲು ಮತ್ತು ಯತೀಶ್ ಪಾದೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here