• ಯಾದವ ಕುಲಾಲ್

ಬಂಟ್ವಾಳ : ಫರಂಗಿಪೇಟೆ ಮೀನು ಮಾರ್ಕೆಟ್ ಇದು ಜಿಲ್ಲೆಯಲ್ಲೇ ಪ್ರಸಿದ್ಧಿ. ಯಾಕೆಂದರೆ ಇಲ್ಲಿ ತಾಜಾ ಹಾಗೂ ಎಲ್ಲಾ ಬಗೆಯ ಮೀನುಗಳು ಸಿಗುತ್ತದೆ. ಬೆಳಿಗ್ಗೆಯಿಂದ ರಾತ್ರಿಯ ವರೆಗೆ ಇಲ್ಲಿ ಮೀನು ಇರುತ್ತದೆ. ಇದು ಒಂದು ಕಾರಣವಾದರೆ ಮಂಗಳೂರು – ಬೆಂಗಳೂರು ಹೆದ್ದಾರಿ ಬದಿಯಲ್ಲೇ ಇರುವ ಕಾರಣ ಮಂಗಳೂರಿನಿಂದ ಬರುವವರಿಗೆ ಮೀನು ತೆಗೆದುಕೊಳ್ಳುವವರಿಗೆ ತುಂಬಾ ಸುಲಭ. ಮಂಗಳೂರಿನಲ್ಲಿ ಪಡೆಯುವುದಾದರೆ ಮಂಗಳೂರು ದಕ್ಕೆ ಇಲ್ಲವೇ ಸ್ಟೇಟ್ ಬ್ಯಾಂಕ್ ಬಳಿ ತೆರಳಬೇಕು. ಸಿಟಿಯೊಳಗೆ ಹೋಗುವುದೇ ಒಂದು ಸಮಸ್ಯೆ. ಟ್ರಾಫಿಕ್‌ನಲ್ಲಿ ಸಿಕ್ಕಿಕೊಳ್ಳುತ್ತೇವೆ ಎಂಬ ಭಯ. ಆದರೆ ಇಲ್ಲಿ ಅದರ ಸಮಸ್ಯೆ ಇಲ್ಲ. ರಸ್ತೆ ಬದಿಯೇ ವಾಹನ ನಿಲ್ಲಿಸಿ ಮೀನು ತೆಗೆದುಕೊಳ್ಳಬಹುದು.

ಆದರೆ ಮೀನು ಮಾರಾಟಗಾರರಿಗೆ ಈಗ ನೆಲೆ ಇಲ್ಲದಂತಾಗಿದೆ. ಕೆಲವು ವರ್ಷಗಳಿಂದ ಫರಂಗಿಪೇಟೆ ಹಳೆ ರಸ್ತೆಯಯಲ್ಲಿರುವ ಪುದು ಪಂಚಾಯತ್ ಜಾಗದಲ್ಲೇ ಮೀನು ಮಾರುಕಟ್ಟೆ ನಡೆಯುತ್ತಿತ್ತು. ಆದರೆ ಪಂಚಾಯತ್‌ಗೆ ನೂತನ ಕಟ್ಟಡ ಮಾಡುವ ನೆಪದಲ್ಲಿ ಮೀನು ಮಾರ್ಕೆಟನ್ನು ಹೆದ್ದಾರಿ ಬದಿಯಲ್ಲಿರುವ ಬಸ್ಸು ನಿಲ್ದಾಣದ ಬದಿಯಲ್ಲಿ ಪಂಚಾಯತ್ ಸ್ಥಳ ಗುರುತಿಸಿ ಮಾರ್ಕೆಟ್ ಸ್ಥಳಾಂತರಿಸಲಾಯಿತು. ನಂತರ ಜಿಲ್ಲಾಧಿಕಾರಿಯ ಆದೇಶದಂತೆ ಹೆದ್ದಾರಿ ಬದಿಯ ಅಂಗಡಿಗಳನ್ನು ತೆರವುಗೊಳಿಸುವಾಗ ಮಾರಾಟಗಾರರು ಅಲ್ಲಿರುವ ಮೀನು ಮಾರ್ಕೆಟನ್ನು ರಸ್ತೆಯ ಇನ್ನೊಂದು ಬದಿಯಲ್ಲಿ ರೈಲ್ವೇ ಸ್ಥಳ ಖಾಲಿ ಇರುವುದರಿಂದ ಆ ಸ್ಥಳಕ್ಕೆ ಸ್ಥಳಾಂತರಿಸಿದರು.

ಫರಂಗಿಪೇಟೆ ನಗರವೇ ಗಬ್ಬು ವಾಸನೆ : ರೈಲ್ವೇ ಸ್ಥಳದಲ್ಲಿ ಮಾರುಕಟ್ಟೆಯಿಂದ ಮೀನು ಮಾರಾಟಗಾರರರಿಗೆ ಏನೂ ಸಮಸ್ಯೆ ಇಲ್ಲ. ಮೀನು ಮಾರಾಟಗಾರರ ಸಂಖ್ಯೆಯೂ ಜಾಸ್ತಿಯಾಯಿತು. ಅವರೊಟ್ಟಿಗೆ ತರಕಾರಿ, ಫಲವಸ್ತು, ಕೋಳಿ ಅಂಗಡಿ, ಒಣಮೀನು ಅಂಗಡಿ ಹೀಗೆ ಅಂಗಡಿಗಳ ಸಂಖ್ಯೆಯೂ ಜಾಸ್ತಿಯಾಯಿತು. ಆದರೆ ಅದರಿಂದ ಸಾರ್ವಜನಿಕರಿಗೇ ಸಮಸ್ಯೆ ಜಾಸ್ತಿಯಾಯಿತು. ಒಂದೆಡೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಮೀನುಗಳನ್ನು ತೆಗೆದುಕೊಳ್ಳುವ ಗ್ರಾಹಕರ ವಾಹನಗಳ ದಂಡು ಹೆಚ್ಚಾಯಿತು. ಮೀನು ಮಾರಾಟಗಾರರ ಸಂಖ್ಯೆ ಹೆಚ್ಚಾಯಿತು. ಮೀನು ತ್ಯಾಜ್ಯದ ನೀರು ತೆರೆದ ಮೈದಾನದಲ್ಲೇ ಹೋಗುತ್ತಿರುವುದರಿಂದ ಫರಂಗಿಪೇಟೆ ನಗರ ಗಬ್ಬು ವಾಸನೆಯಿಂದ ಕೂಡಿರುತ್ತದೆ. ಅದೇ ಮಾರ್ಕೆಟ್ ಹಿಂದುಗಡೆ ಮೀನಿನ ತ್ಯಾಜ್ಯ ನೀರು ರೈಲ್ವೇ ಸ್ಥಳದಲ್ಲಿ ಸಂಪೂರ್ಣ ವ್ಯಾಪಿಸಿರುವುದು. ಮತ್ತೊಂದು ಕಡೆ ತ್ಯಾಜ್ಯಗಳ ರಾಶಿಗಳು ಪಕ್ಕದಲ್ಲಿರುವ ದೇವಸ್ಥಾನದ ವರೆಗೂ ವ್ಯಾಪಿಸಿತು. ಈ ಪ್ರದೇಶದಲ್ಲಿ ಬೀದಿನಾಯಿಗಳು, ಹದ್ದುಗಳೂ, ಕಾಗೆಗಳ ಸಂಖ್ಯೆಯೂ ಹೆಚ್ಚಾಯಿತು.

ಜನವರಿ 15 ಗಡುವು : ರೈಲ್ವೇ ಇಲಾಖೆಗೆ ಸೇರಿದ್ದ ಜಮೀನಿನಲ್ಲಿ ಮೀನು ಮಾರುಕಟ್ಟೆ ನಡೆಯುತ್ತಿದೆ ಎಂಬ ಕಾರಣ ಮೀನು ಮಾರುಕಟ್ಟೆಯನ್ನು ತೆರವುಗೊಳಿಸಲು ರೈಲ್ವೇ ಇಲಾಖೆ ಪುದು ಗ್ರಾ.ಪಂ.ಗೆ ಸೂಚನೆ ನೀಡಿತ್ತು. ಆದರೆ ಸೂಚನೆ ಪತ್ರ ರವಾನಿಸಿ ಎರಡು ವರ್ಷ ಕಳೆದರೂ ಮೀನು ಮಾರುಕಟ್ಟೆ ತೆರವಾಗದ ಕಾರಣ ಇತ್ತೀಚೆಗೆ ರೈಲ್ವೇ ಇಲಾಖೆ ಪೊಲೀಸರ ಸಹಕಾರ ಪಡೆದು ಮೀನು ಮಾರುಕಟ್ಟೆ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿತ್ತು. ಪರ್ಯಾಯ ವ್ಯವಸ್ಥೆ ಕಲ್ಪಿಸಲು  ಪುದು ಗ್ರಾ.ಪಂ. ಒಂದೂವರೆ ತಿಂಗಳ ಕಾಲಾವಕಾಶ ಕೇಳಿದ ಹಿನ್ನಲೆಯಲ್ಲಿ ತೆರವು ಕಾರ್ಯಚರಣೆ ಅರ್ಧಕ್ಕೆ ಮೊಟಕುಗೊಂಡಿತ್ತು. ರೈಲ್ವೇ ಸ್ಥಳದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುವ ಮೀನು ಮಾರ್ಕೆಟಿನಿಂದ ಸಾರ್ವಜನಿಕರಿಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಮಾರ್ಕೆಟ್ ಸ್ಥಳಾಂತರಿಸಲು ಜನವರಿ ೧೫ ಗಡುವು ನೀಡಿದೆ.

ನೂತನ ಸ್ಥಳ : ಮೀನು ಮಾರುಕಟ್ಟೆಗೆ ಸ್ಥಳಗುರುತಿಸುವ ನಿಟ್ಟಿನಲ್ಲಿ ಫರಂಗಿಪೇಟೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಇಲ್ಲಿನ ಹತ್ತನೇ ಮೈಲುಕಲ್ಲು ಬಳಿ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ ಮೀನು ಮಾರುಕಟ್ಟೆಗೆ ಶಾಶ್ವತ ಜಮೀನು ಲಭ್ಯವಾಗದ ಕಾರಣ ಈಗಿರುವ ಮೀನು ಮಾರುಕಟ್ಟೆಯ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಜಮೀನಿನಲ್ಲಿ ತಾತ್ಕಲಿಕ ಮೀನು ಮಾರುಕಟ್ಟೆ ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರೆ ಅದು ಮೀನು ಮಾರಾಟಗಾರರಿಗೆ ಶಾಶ್ವತವಾದ ಸ್ಥಳವಲ್ಲ. ಅದು ಕೂಡ ಹೆದ್ದಾರಿಗೆ ಸೇರಿದ ಸ್ಥಳ. ಈಗ 17 ಫೀಟ್ ಅಗಲ ಮತ್ತು 140 ಫೀಟ್ ಉದ್ದದ ಹೊಸ ಮಾರ್ಕೆಟ್ ನಿರ್ಮಾಣಗೊಳ್ಳುತ್ತಿರುವ ಮೀನು ಮಾರುಕಟ್ಟೆಯ ಮುಂಭಾಗದಲ್ಲಿ ಖಾಸಗಿ ಆಸ್ಪತ್ರೆ, ವಿದ್ಯಾಲಯ ಹಾಗೂ ಸಭಾಗೃಹ ಇದ್ದು ಇಲ್ಲಿ ಮೀನು ಮಾರುಕಟ್ಟೆ ಆರಂಭಗೊಂಡರೆ ಇವುಗಳಿಗೂ ತೊಂದರೆ ತಪ್ಪಿದ್ದಲ್ಲ. ಅಲ್ಲದೆ ದಿನದ ೨೪ ಗಂಟೆಗಳ ಕಾಲ ವಾಹನ ಸಂಚಾರವಿರುವ  ರಾಷ್ಟ್ರೀಯ ಹೆದ್ದಾರಿಗೆ ತಾಕಿಕೊಂಡೇ ಅವೈಜ್ಞಾನಿಕವಾಗಿ ಮೀನು ಮಾರುಕಟ್ಟೆ ನಿರ್ಮಿಸುತ್ತಿರುವುದು ಅಪಾಯಕಾರಿ. ಆದರೆ ಆ ಊರಿನ ಸಮಸ್ಯೆಗೆ ಯಾವುದೇ ಪರಿಹಾರ ದೊರೆತಿಲ್ಲ. ಮೀನು ತ್ಯಾಜ್ಯ ನೀರು ಹೋಗುವ ವ್ಯವಸ್ಥೆಯ ಗೊಡವೆಗೇ ಹೋಗಿಲ್ಲ. ಇದೀಗ ಮೀನು ಮಾರುಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಿದ್ದು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೆ ಕೆಲಸ ನಿರ್ವಹಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಪುದು ಗ್ರಾಮ ಪಂಚಾಯತ್ ಕಾರ್ಯಪ್ರವೃತ್ತವಾಗಬೇಕಾಗಿದೆ. ಮೀನು ಮಾರಾಟಗಾರರ ಬದುಕು ಅವರ ವ್ಯಾಪಾರ. ಹೀಗಿರುವಾಗ ಅವರನ್ನು ಪದೇ ಪದೇ ಸ್ಥಳಾಂತರ ಮಾಡಿಸುವ ಬದಲು ಅವರಿಗೆ ಒಂದು ಶಾಶ್ವತ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿದೆ. ಜೊತೆಗೆ ಅವರ ವ್ಯಾಪಾರದಿಂದಾಗಿ ಬೇರೆ ಯಾರಿಗೂ ತೊಂದರೆಯಾಗದಂತೆ ನೋಡಬೇಕಾಗಿದೆ. ಹೀಗಾಗಿ ವ್ಯವಸ್ಥಿತ ರೀತಿಯಲ್ಲಿ ಮೀನು ಮಾರ್ಕೆಟನ್ನು ನಿರ್ಮಾಣ ಮಾಡಬೇಕಾಗಿದೆ. ತ್ಯಾಜ್ಯ ವಿಲೇವಾರಿಯನ್ನೂ ಸೂಕ್ತ ರೀತಿಯಲ್ಲಿ ಮಾಡಬೇಕಾಗಿದೆ. ಇದಕ್ಕಾಗಿ ಪಂಚಾಯತ್ ಜವಾಬ್ದಾರಿಯನ್ನು ತೆಗೆದುಕೊಂಡು ಅದರ ನಿರ್ವಹಣೆಯನ್ನು ಮಾಡಬೇಕಾಗಿದೆ.

****

ಪುದು ಪಂಚಾಯತ್‌ನಲ್ಲಿ ಸರಕಾರಿ ಜಾಗವನ್ನು ಹುಡುಕುತ್ತಾ ಇದ್ದೇವೆ. ಈಗ ನಿರ್ಮಾಣವಾಗುವ ಮೀನಿನ ಮಾರ್ಕೆಟ್‌ನಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಬಂದಂತಹ ವಾಹನಗಳಿಗೆ ೧೦ ಫೀಟ್‌ನಷ್ಟು ವಾಹನ ಪಾರ್ಕಿಂಗ್‌ಗೆ ಬಿಟ್ಟು, ಮೀನು ಮಾರಾಟ ಮಾಡಲು ಸೂಚಿಸಿದ್ದೇವೆ. ಮೀನಿನ ತ್ಯಾಜ್ಯಗಳು ತೆರೆದ ಚರಂಡಿಯಲ್ಲಿ ಹೋಗದಂತೆ ಪಿವಿಸಿ ಪೈಪ್ ಮುಖಾಂತರ ಡ್ರೈನೇಜ್‌ಗೆ ಸಂಪರ್ಕಿಸಲಾಗುವುದು. ಮುಂದಿನ ದಿನಗಳಲ್ಲಿ ಪಂಚಾಯತ್‌ನ ಮುಖಾಂತರ ಸುಸಜ್ಜಿತವಾದ ಮೀನಿನ ಮಾರ್ಕೆಟ್ ಮಾಡಿ ಜನತೆಗೆ ಅನುಕೂಲಕರವಾಗುವಂತೆ ಮಾಡಲಾಗುವುದು. ಅದರಿಂದ ಪಂಚಾಯತ್‌ಗೂ ಸಹಕಾರಿಯಾಗುವುದು.
– ರಮ್ಲಾನ್ ಮಾರಿಪಲ್ಲ, ಅಧ್ಯಕ್ಷರು, ಪುದು ಗ್ರಾ.ಪಂ.

*****

ಪುದು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮೀನು ಮಾರ್ಕೆಟ್ ನಿರ್ಮಿಸಲು ಸ್ಥಳವಾಶ ಮಾಡಿಕೊಂಡರೆ ಸುಸಜ್ಜಿತವಾದ ಮಾರ್ಕೆಟ್ ನಿರ್ಮಿಸಲು ಜಿಲ್ಲಾ ಪಂಚಾಯತ್‌ನಿಂದ ಅದಕ್ಕೆ ಬೇಕಾಗುವ ಅನುದಾನ ಬಿಡುಗಡೆ ಮಾಡಲಾಗುವುದು. ಈಗಾಗಲೇ ಫರಂಗಿಪೇಟೆಯಲ್ಲಿ ಮೀನು ಮಾರ್ಕೆಟ್ ನಿರ್ಮಾಣಕ್ಕೆ ಪ್ರಸ್ತಾವನೆ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಲಾಗಿದೆ.
– ರವೀಂದ್ರ ಕಂಬಳಿ, ಜಿಲ್ಲಾ ಪಂಚಾಯತ್ ಸದಸ್ಯರು
*******
ಪ್ರಾರಂಭದಲ್ಲಿ ಎಲ್ಲರೂ ಸುವ್ಯವಸ್ಥಿತವಾಗಿ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕ್ರಮೇಣ ಮೀನಿನ ಮಾರ್ಕೆಟ್ ಚಿತ್ರಣವೇ ಬದಲಾಗುತ್ತದೆ. ಹೆದ್ದಾರಿ ಬದಿಯಲ್ಲಿ ಇರುವುದರಿಂದ ಫರಂಗಿಪೇಟೆಯ ಪರಿಸರವೇ ಗಬ್ಬು ವಾಸನೆ ಬರುತ್ತಿದೆ. ಇನ್ನು ನಿರ್ಮಾಣವಾಗಲಿರುವ ಮೀನು ಮಾರ್ಕೆಟ್‌ನ ಎದುರು ಆಸ್ಪತ್ರೆ, ಸಭಾಭವನ ಇದೆ. ಇದರಿಂದ ಪರಿಸರದವರಿಗೆ ತೊಂದರೆ ಆಗುವ ಸಾಧ್ಯತೆ ಇದೆ.
– ಫರಂಗಿಪೇಟೆ ಪರಿಸರದವರು
*****
ನಮ್ಮದು ಬಡಕುಟುಂಬ. ನಮ್ಮ ಅಜ್ಜಂದಿರ ಕಾಲದಿಂದಲೂ ಇದೇ ವ್ಯಾಪಾರ ಮಾಡಿಕೊಂಡು ಬಂದು ನಮ್ಮ ಜೀವನ ನಡೆಸುತ್ತಿದ್ದು ಈಗ ನಾನು ಮತ್ತು ನನ್ನ ತಂದೆ ಮೀನಿನ ವ್ಯಾಪಾರ ಮಾಡುತ್ತಾ ಇದ್ದೇವೆ. ಜಿಲ್ಲಾಧಿಕಾರಿ ಮತ್ತು ಪಂಚಾಯತ್ ಸೂಚಿಸಲ್ಪಟ್ಟ ಸ್ಥಳವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾವು ನಮ್ಮ ಮಾರ್ಕೆಟನ್ನು ಸ್ಥಳಾತರಿಸಲಿದ್ದೇವೆ. ಇಲ್ಲಿ ಅನೇಕ ಹಿರಿಯ ನಾಗರಿಕರಿಗೂ ಇದೇ ಕಸುಬಾದ ಕಾರಣ ನಮಗೆ ಶಾಶ್ವತವಾದ ಮಾರ್ಕೆಟ್ ನಿರ್ಮಾಣವಾದರೆ ಒಳ್ಳೆಯದು.
– ರಿಯಾಜ್, ಫರಂಗಿಪೇಟೆ
********

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here