ಉಜಿರೆ: ಧರ್ಮವು ಸಕಲ ಜೀವಿಗಳಿಗೂ ಹಿತಕರವಾಗಿದ್ದು ಸುಖ-ಶಾಂತಿಯನ್ನು ನೀಡುತ್ತದೆ. ಧರ್ಮದ ಅನುಷ್ಠಾನದಿಂದ ಆತ್ಮಕಲ್ಯಾಣವಾಗುತ್ತದೆ ಎಂದು ಆಚಾರ್ಯ ಶ್ರೀ ವರ್ಧಮಾನಸಾಗರ ಮುನಿಮಹಾರಾಜರು ಹೇಳಿದರು.
ಧರ್ಮಸ್ಥಳಕ್ಕೆ ಗುರುವಾರ ಪುರಪ್ರವೇಶ ಮಾಡಿದ ಪೂಜ್ಯರನ್ನು ಹಾಗೂ ಮುನಿ ಸಂಘವನ್ನು ಸ್ವಾಗತಿಸಿ ಮುಖ್ಯ ಪ್ರವೇಶ ದ್ವಾರದಿಂದ ಬಸದಿ ವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು.
ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ದರ್ಶನ ಮಾಡಿ, ಪೂಜೆ ವೀಕ್ಷಿಸಿದ ಬಳಿಕ ಅವರು ಮಂಗಲ ಪ್ರವಚನ ನೀಡಿದರು.
ಧರ್ಮಸ್ಥಳವು ಧರ್ಮದ ನೆಲೆವೀಡಾಗಿದ್ದು ಇಲ್ಲಿ ಸರ್ವಧರ್ಮೀಯರಿಗೂ ಸಮಾನ ಮಾನ್ಯತೆ, ಗೌರವ ಇದೆ. ಸಕಲ ಧರ್ಮಗಳಲ್ಲಿ ಧಾರ್ಮಿಕ ಕ್ರಿಯೆ ವಿಭಿನ್ನವಾಗಿದ್ದರೂ ಅಹಿಂಸಾ ಧರ್ಮ ಶ್ರೇಷ್ಠ ಧರ್ಮವಾಗಿದ್ದು ಎಲ್ಲರೂ ಅಹಿಂಸೆಗೆ ಮಾನ್ಯತೆ ನೀಡುತ್ತಾರೆ. ಭಗವಾನ್ ಮಹಾವೀರ ಸ್ವಾಮಿ ಅನೇಕಾಂತದ ಮೂಲಕ ಎಲ್ಲಾ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ನೀಡಿದರು.

                
ಧರ್ಮಸ್ಥಳದಲ್ಲಿ ಮಾತೃಶ್ರೀ ರತ್ನಮ್ಮನವರ ಆಶಯದಂತೆ ಡಿ. ವೀರೇಂದ್ರ ಹೆಗ್ಗಡೆಯವರು ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮಹಾಮಸ್ತಕಾಭಿಷೇಕವನ್ನು ಸಂಪ್ರದಾಯದಂತೆ 12 ವರ್ಷಕ್ಕೊಮ್ಮೆ ವ್ಯವಸ್ಥಿತವಾಗಿ ನೆರವೇರಿಸುತ್ತಿರುವುದು ಭುವನದ ಭಾಗ್ಯವಾಗಿದೆ. ಅದನ್ನು ನೋಡಿ ಪುಣ್ಯ ಸಂಚಯ ಮಾಡಿಕೊಳ್ಳುವುದು ನಮ್ಮೆಲ್ಲರ ಭಾಗ್ಯವಾಗಿದೆ.
ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಧರ್ಮಸ್ಥಳವು ಉತ್ತರೋತ್ತರ ಪ್ರಗತಿ ಸಾಧಿಸಿ ಇನ್ನೂ ಹೆಚ್ಚಿನ ಯಶಸ್ಸು ಪಡೆಯಲೆಂದು ಅವರು ಪ್ರಾರ್ಥಿಸಿದರು.
ಮುನಿಸಂಘವನ್ನು ಭಕ್ತಿಪೂರ್ವಕ ಸ್ವಾಗತಿಸಿ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮುನಿಸಂಘದ ಆಗಮನದಿಂದ ಧರ್ಮಸ್ಥಳ ಕ್ಷೇತ್ರವೇ ಪಾವನವಾಗಿದೆ. ಇದೇ ನಿಜವಾದ ಮಹೋತ್ಸವ ಎಂದು ಬಣ್ಣಿಸಿದರು.
ಪೂಜ್ಯ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರು ಕಳೆದ ಎರಡು ಮಹಾಮಸ್ತಕಾಭಿಷೇಕಗಳಲ್ಲಿ ನೇತೃತ್ವ ಮತ್ತು ಪಾವನ ಸಾನ್ನಿಧ್ಯ ವಹಿಸಿ ಮಾರ್ಗದರ್ಶನ ನೀಡಿದ್ದು ಇದೀಗ ಮೂರನೇ ಮಹಾಮಸ್ತಕಾಭಿಷೇಕದ ನೇತೃತ್ವ ವಹಿಸಬೇಕೆಂದುಹೆಗ್ಗಡೆಯವರು ಮುನಿಗಳಲ್ಲಿ ವಿನಂತಿಸಿಕೊಂಡರು.
ಮುನಿಗಳು ತಾಳ್ಮೆ, ಸಂಯಮ ಮತ್ತು ಸಹನಾಶಕ್ತಿಯ ಪ್ರತೀಕವಾಗಿದ್ದು ಪೂಜ್ಯರ ಆಶೀರ್ವಾದ ಮತ್ತು ಮಾರ್ಗದರ್ಶನ ಸಮಾಜಕ್ಕೆ ಸದಾ ದೊರಕಲೆಂದು ಕೋರಿದರು.
ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್, ಮಾಣಿಲದ ಮೋಹನದಾಸ ಸ್ವಾಮೀಜಿ, ಮೂಡಬಿದ್ರೆಯ ಆನಡ್ಕ ದಿನೇಶ್ ಕುಮಾರ್ ಮತ್ತು ಸುಧೇಶ್ ಕುಮಾರ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here