ಬಂಟ್ವಾಳ, ಜ. ೪: ಬಂಟ್ವಾಳ ಎ. ಶಾಂತರಾಮ್ ಪೈ ಸ್ಮಾರಕ ಭವನದಲ್ಲಿ ಕಾರ್ಯಾಚರಿಸುತ್ತಿದ್ದ ಸಿಪಿಐ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಸಿಪಿಐ ಬಂಟ್ವಾಳ ಸಮಿತಿ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಶುಕ್ರವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಇದು ವಿದೇಶಿ ಕಂಪೆನಿಗಳ ದೇಣಿಗೆಯಿಂದ ಕಟ್ಟಿದ ಕಟ್ಟಡ ಅಲ್ಲ. ತ್ಯಾಗ, ಬಲಿದಾನದಿಂದ ಕಟ್ಟಿದ ಕಟ್ಟಡ. ಕ್ಷೇತ್ರದ ಬಡವರಿಗೆ ನ್ಯಾಯ, ಅವರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ಹಾಗೂ ಶಾಂತಾರಾಮ ಪೈ ಅವರ ಹೆಸರು ಶಾಸ್ವತವಾಗಿರಲು ಕಟ್ಟಲಾಗಿದೆ ಎಂದರು.”ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಕೇವಲ ಸಿಪಿಐ ಕಚೇರಿಗೆ ಅಲ್ಲ. ಈ ಭಾಗದ ಆದಿವಾಸಿಗಳ, ಮಹಿಳೆಯರ, ಮಕ್ಕಳ, ದಮನಿತ, ಶೋಷಿತ, ಬೀಡಿ-ಕಟ್ಟಡ ಕಾರ್ಮಿಕರ ದೇವಾಲಯಕ್ಕೆ ಬೆಂಕಿ ಹಚ್ಚಲಾಗಿದೆ. ಈ ದುಷ್ಕಕೃತ್ಯವನ್ನು ಯಾರು ಮಾಡಿದ್ದು? ಎಂದು ನಮಗೆ ಚೆನ್ನಾಗಿ ತಿಳಿದಿದೆ ಎಂದ ಅವರು, ರಾತ್ರೋ ರಾತ್ರಿ ಕಚೇರಿಯ ಹಿಂಬಾಗಿಲಿನಿಂದ ಬಂದು ಬೆಂಕಿ ಹಾಕಿ ಹೆಡಿಗಳ ಹಾಗೆ ಓಡಿ ಹೋಗುವುದಲ್ಲ. ತಾಕತಿದ್ದರೆ ಸೈದ್ಧಾಂತಿಕವಾಗಿ ನಮ್ಮನ್ನು ಎದರಿಸಿ” ಎಂದು ಸವಾಲು ಹಾಕಿದರು.ದಲಿತ, ಅಲ್ಪಸಂಖ್ಯಾತ ಹಾಗೂ ಸಿಪಿಐ(ಎಂ) ಅವರನ್ನು ಮಟ್ಟಹಾವುದೇ ಆರೆಸ್ಸೆಸ್‌ನ ಹಿಡನ್ ಅಜೆಂಡವಾಗಿದ್ದು, ನಿಮ್ಮ ಯಾವುದೇ ಬೆದರಿಕೆಗೆ ನಾವು ಬೆದರುವುದಿಲ್ಲ ಎಂದ ಅವರು, ಕೇರಳದಲ್ಲಿ ಸಂವಿಧಾನದ ಪರ ಹಾಗೂ ವಿರೋಧಿಗಳ ನಡುವೆ ಹೋರಾಟ ನಡೆಯುತ್ತಿದೆ. ಇದನ್ನೇ ಬಂಡವಾಳನ್ನಾಗಿಸಿದ ಆರೆಸ್ಸೆಸ್ ಸುಪ್ರೀಂ ಕೋರ್ಟ್‌ನ ತೀರ್ಮಾಣದ ವಿರುದ್ಧವೇ ಗಲಭೆಯನ್ನು ಸೃಷ್ಠಿಸುವ ಮೂಲಕ ಸಮಾಜದ ಅಶಾಂತಿಗೆ ಕಾರಣವಾಗಿದೆ ಎಂದರು.ಬಿಜೆಪಿ ಕಳೆದ ಚುನಾವಣೆಯಲ್ಲಿ ರಾಮಮಂದಿರದ ಹೆಸರಿನಲ್ಲಿ ಗೆದ್ದಿದ್ದು, ಈ ಬಾರಿ ಕೋಮುವಾದವನ್ನೇ ಚುನಾವಣಾ ಪ್ರಚಾರದ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಇಂತಹ ಕೃತ್ಯಕ್ಕೆ ಆದಿವಾಸಿ, ದಲಿತ ಸಮುದಾಯವನ್ನು ಬಳಸಿಕೊಳ್ಳುವ ಮೂಲಕ ಬಿಜೆಪಿ ರಾಜಕೀಯ ಲಾಭ ಗಳಿಸುತ್ತಿದೆ ಎಂದವರು, ಅಸಮಾನತೆ, ಮನುವಾದ, ಜನವಿರೋಧಿ ನೀತಿ ಹಾಗೂ ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಟ ಇಂದಿನ ಅನಿವಾರ್ಯ ಎಂದರು.ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಕಾಂಗ್ರೆಸ್ ಮುಖಂಡರಾದ ವಾಸು ಪೂಜಾರಿ, ಸದಾಶಿವ ಬಂಗೇರ, ಅಬ್ಬಾಸ್ ಅಲಿ ಮಾತನನಾಡಿ, ಘಟನೆಯ ಬಗ್ಗೆ ಖಂಡಿಸಿದರು.ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ವಿ.ಎಸ್.ಬೇರಿಂಜ, ಆರ್.ಡಿ. ಸೋನ್ಸ್, ಎ.ಪ್ರಭಾಕರ್ ರಾವ್, ಎಚ್.ವಿ.ರಾವ್,  ಬಿ.ಕೆ.ಕೃಷ್ಣಪ್ಪ, ಕರುಣಾಕರ ಎಂ, ಬಾಬು ಭಂಡಾರಿ, ಸರಸ್ವತಿ ಕೆ., ವಿಠಲ ಬಂಗೇರ, ಸಿಪಿಐಎಂ ಜಿಲ್ಲಾ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ರಾಮಣ್ಣ ವಿಟ್ಲ, ವಾಸು ಗಟ್ಟಿ, ಕಾಂಗ್ರೆಸ್‌ನ ಮುಖಂಡರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಲುಕ್ಮಾನ್, ಸಾಮಾಜಿಕ ನ್ಯಾಯ ಪರ ಸಮಿತಿ ಪರವಾಗಿ ರಾಜಾ ಚಂಡ್ತಿಮಾರ್, ಪ್ರಭಾಕರ್ ದೈವಗುಡ್ಡೆ, ರಿಯಾಝ್, ವೆಂಕಪ್ಪ ಪೂಜಾರಿ ಭಾಗವಹಿಸಿದ್ದರು. ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿ, ಸುರೇಶ್ ಕುಮಾರ್ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here