ಬಂಟ್ವಾಳ, ಜ. ೩೦: ಗೌರಿ, ಪನ್ಸಾರೆ, ದಾಭೋಲ್ಕರ್, ಕಲ್ಬುರ್ಗಿ ಸಹಿತ ಇತರ ವಿಚಾರವಾದಿಗಳ ಕೊಲೆಗೆಡಕರು ನೀವು. ತಾಕತ್ತಿದ್ದರೆ ನಮ್ಮನ್ನು ಸೈದ್ಧಾಂತಿಕ ಸೋಲಿಸಿ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ಕೇರಳದ ರಾಜ್ಯ ಸಭಾ ಸದಸ್ಯ ಬಿನೊಯ್ ವಿಶ್ವಂ ಸವಾಲು ಹಾಕಿದರು.
ದುಷ್ಕರ್ಮಿಗಳಿಂದ ಹಾನಿಗೀಡಾದ ಬಂಟ್ವಾಳದ ಸಿಪಿಐ ಪಕ್ಷದ ಕಚೇರಿ ಎ.ಶಾಂತಾರಾಂ ಪೈ ಸ್ಮಾರಕ ಭವನವನ್ನು ಬುಧವಾರ ಮರುಉದ್ಫಾಟಿಸಿ, ಬಳಿಕ ಬಂಟ್ವಾಳ ಚಲೋ ಕಾರ್ಯಕ್ರಮದಡಿ ಪ್ರತಿಭಟನಾ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
ಇಟಲಿ, ಜರ್ಮನಿಯ ಫ್ಯಾಶಿಸಂ ಸಿದ್ಧಾಂತವನ್ನು ಮೈಗೂಡಿಸಿಕೊಂಡು ದೇಶದಲ್ಲಿ ಬಲವಾಗಿ ಜಾರಿ ಮಾಡಲು ಹೊರಟಿರುವ ಆರೆಸ್ಸೆಸ್ ನೇತೃತ್ವದ ಬಿಜೆಪಿಯು ಜಾತ್ಯತೀತ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ವಿಶ್ವಂ ಹೇಳಿದ್ದಾರೆ.
ಆರೆಸ್ಸೆಸ್‌ಗೆ ಸಿದ್ಧಾಂತ ಎಂಬುವುದೇ ಇಲ್ಲ. ಇಟಲಿ, ಜರ್ಮನ್‌ನಲ್ಲಿದ್ದ ಜನಾಂಗೀಯ ದ್ವೇಷ ಸಿದ್ಧಾಂತವನ್ನು ಆಮದು ಮಾಡಿಕೊಂಡಿದೆ. ಅಲ್ಲಿನ ಜನಾಂಗೀಯ ದ್ವೇಷದ ಸಂಸ್ಕೃತಿಯನ್ನು ದೇಶದ ಮೇಲೆ ಹೇರಲಾಗುತ್ತಿದೆ. ಆರೆಸ್ಸೆಸ್ ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದೇ ಬಾಂಬ್, ಶಸ್ತ್ರಾಸ್ತ್ರಗಳ ಮೂಲಕ ದಾಳಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಗೋಡ್ಸೆಯ ಸಂತತಿಗಳು ನೀವು. ಸಾಮಾಜಿಕ ಹೋರಾಟದ ಸಂಗಾತಿಗಳು. ನಾವು ನಿಮ್ಮಿಂದ ದೇಶ ಪ್ರೇಮ ಕಲಿಯಬೇಕಾಗಿಲ್ಲ. ನಿಮ್ಮ ಹಿಂದುತ್ವ, ನಕಲಿ ರಾಷ್ಟ್ರವಾದ ಜನರ ವಿರೋಧಿಯಾಗಿದೆ. ಅದು ಈ ನೆಲದ ಸಂಸ್ಕೃತಿಗೆ ಮಾರಕವಾಗಿದ್ದು, ಅದನ್ನು ಈ ನೆಲದಲ್ಲಿ ಅನುಷ್ಠಾನ ಮಾಡಲು ನಾವು ಎಂದಿಗೂ ಬಿಡುವುದಿಲ್ಲ ಎಂದರು.
ಇತ್ತೀಚೆಗೆ ರಾಹುಲ್ ಗಾಂಧೀ ಅವರು ಕಾರ್ಮಿಕ, ಶ್ರಮಿಕ, ಬಡವರ ಬಗ್ಗೆ ಮಾತನಾಡಿದ್ದು, ಇದನ್ನು ಸಿಪಿಐ ಸ್ವಾಗತಿಸುತ್ತದೆ. ಕಾಂಗ್ರೆಸ್ ಪಾಠವನ್ನು ಕಲಿತಿದೆ. ಗಾಂಧಿ ಮತ್ತು ನೆಹರೂ ಅವರ ಕಲ್ಪನೆಯ ಸಮಾಜವಾದಿ ಪರಂಪರೆಯನ್ನು ಎಂದಿಗೂ ಬಿಡಬೇಡಿ ಕಿವಿಮಾತು ಹೇಳಿದರು.
ಶಬರೀಮಲೆ ಹೆಸರಿನಲ್ಲಿ ಕಮ್ಯೂನಿಷ್ಟರ ಮೇಲೆ ದಾಂಧಲೆ ಮಾಡಲು ನಿಮಗೆ ಅಯ್ಯಪ್ಪ ಸ್ವಾಮಿ ಹೇಳಿದ್ದಾರೆಯೇ? ಇದೆನಾ ನಿಮ್ಮ ಹಿಂದೂ ಧರ್ಮ?. ಎಂದು ಪ್ರಶ್ನಿಸಿದ ಅವರು, ಹಿಂದೂ ಧರ್ಮ ಎಲ್ಲಿಯೂ  ಅನ್ಯಾಯ ಮಾಡಲು ಹೇಳುವುದಿಲ್ಲ. ನಿಮ್ಮದು ನಕಲಿ ಹಿಂದುತ್ವ ಎಂದ ಅವರು, ಉತ್ತರ ಭಾರತದಲ್ಲಿ ಶ್ರೀರಾಮ, ದಕ್ಷಿಣದಲ್ಲಿ ಅಯ್ಯಪ್ಪ ಸ್ವಾಮಿ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ದೇವರವನ್ನು ದೇವರಾಗಿ ಕಾಣಿ, ಅವರನ್ನು ಯಾವ ಪಕ್ಷಕ್ಕೆ ಸೀಮಿತ ಮಾಡಬೇಡಿ, ಅವರನ್ನು ಅವರಷ್ಟಕ್ಕೆ ಬಿಡಿ ಎಂದು ಹೇಳಿದರು.
ಮಾಜಿ ಸಚಿವ ರಮಾನಾಥ ರೈ, ಸಿಪಿಐ ರಾಷ್ಟ್ರೀಯ ಮಂಡಲಿಯ ಮಾಜಿ ಸದಸ್ಯ ಡಾ. ಸಿದ್ಧನಗೌಡ ಪಾಟೀಲ ಮಾತನಾಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎ.ಶಾಂತಾರಾಂ ಪೈ ಅವರ ಪುತ್ರ ಕಿಶೋರ್ ಎಸ್. ಪೈ, ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ, ಡಾ. ಸಿದ್ದನಗೌಡ ಪಾಟೀಲ, ಪಿ.ವಿ.ಲೋಕೇಶ್, ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಎಐಟಿಯುಸಿ ರಾಜ್ಯ ಅಧ್ಯಕ್ಷ ಅನಂತ ಸುಬ್ಬರಾವ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಅಧ್ಯಕ್ಷೆ ಜ್ಯೋತಿ ಎ., ಪಕ್ಷ, ವಿವಿಧ ಸಂಘಟನೆಗಳ ಮುಖಂಡರಾ ಎಸ್.ಕೆ. ರಾಮಚಂದ್ರ, ಜನಾರ್ದನ್, ಪ್ರಸನ್ನ ಕುಮಾರ್, ಶಿವಣ್ಣ, ಸಂತೋಷ್, ಕೆ.ವಿ.ಭಟ್, ಜ್ಯೋತಿ, ಪ್ರಭಾಕರ್ ರಾವ್, ರಮೇಶ್ ನಾಯ್ಕ್, ಜಾಫರ್ ಶರೀಫ್ ಉಪಸ್ಥಿತರಿದ್ದರು.
ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸೀತರಾಮ ಬೇರಿಂಜ ವಂದಿಸಿ, ಸದಸ್ಯ ಸುರೇಶ್ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here