ಬಂಟ್ವಾಳ: ತೀವ್ರಗಾಮಿಗಳಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡುತ್ತಿದೆ. ಅನಂತ್ ಕುಮಾರ್, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ ಇದರ ಬ್ರಾಂಡ್‌ಗಳು. ಕಲ್ಲು ಒಡೆಯುವ, ಬೆಂಕಿ ಹಚ್ಚುವ ಮೂಲಕ ಕೋಮು ಸೌಹಾರ್ದತೆಯನ್ನು ಹಾಳು ಮಾಡುವುದೇ ಇವರ ಉದ್ದೇಶ. ಇವರಿಗೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಬೇಕಾಗಿಲ್ಲ ಎಂದು ಎಐಸಿಸಿಯ ಸದಸ್ಯ ಅಮೃತ್ ಶೆಣೈ ಹೇಳಿದ್ದಾರೆ.
ಹಾಸನ- ಗುಂಡ್ಯ- ಬಿ.ಸಿ.ರೋಡ್ ಅಪೂರ್ಣ ಹೆದ್ದಾರಿಯ ಅಸ್ಥವ್ಯಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಸೋಮವಾರ ನಡೆದ ಕಾಲ್ನಡಿಗೆ ಜಾಥಾವು ಮಂಗಳವಾರ ಸಂಜೆ ಮಾಣಿ ಜಂಕ್ಷನ್‌ಗೆ ಆಗಮಿಸಿದ್ದು, ಬಳಿಕ ಇಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.


ಮೋದಿ ಎರಡನೆ ಬಾರಿ ಪ್ರಧಾನಿಯಾಗುವ ಸಾಧ್ಯತೆಯೇ ಇಲ್ಲ. ಈ ಬಾರಿ ಭಾಜಪ ಸರಕಾರವನ್ನು ಜನರು ಮನೆಗೆ ಕಳುಹಿಸುತ್ತಾರೆ. ದೇಶವನ್ನು ಆಳುವ ಅರ್ಹತೆ ಕಾಂಗ್ರೆಸ್‌ಗೆ ಮಾತ್ರ ಇದೆ ಎಂದ ಅವರು, ನಾವೆಲ್ಲರೂ ಹಿಂದು-ಒಂದು ಹೇಳುವವರು ಮೊದಲು ಒಟ್ಟಿಗೆ ಕುಳಿತು ಊಟ ಮಾಡಲಿ. ಕಾಂಗ್ರೆಸ್‌ನದ್ದು ಒಂದೇ ನಿಲುವು. ಬಿಜೆಪಿಯದ್ದು ದ್ವಂದ ನಿಲುವು. ಆಯ ರಾಜ್ಯಗಳಲ್ಲಿ ಒಂದೊಂದು ನೀತಿ ಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದ ಅವರು, ನಮಗೆ ಇಷ್ಟವಾದ ಆಹಾರ ಸೇವಿಸುವುದು ನಮ್ಮ ಹಕ್ಕು. ಇದನ್ನು ಸಂವಿಧಾನವೇ ಎತ್ತಿ ಹಿಡಿದಿದೆ ಎಂದರು.
ಬಿಜೆಪಿ ದೇಶದ ಸಂಪತ್ತು ಮತ್ತು ಸೌಹಾರ್ದವನ್ನು ನಾಶ ಮಾಡಿದೆ. ಇಡೀ ಬ್ಯಾಂಕ್ ವ್ಯವಸ್ಥೆಯೇ ನಷ್ಟದಲ್ಲಿದ್ದು, ಸುಮಾರು ೨೭ ಮಂದಿ ಬ್ಯಾಂಕ್ ಲೂಟಿ ಮಾಡಿ ವಿದೇಶಕ್ಕೆ ಓಡಿಹೋಗಿದ್ದು, ಕೇಂದ್ರ ಸರಕಾರ ಇದರ ಪಾಲುಪಾರ ಎಂದ ಅವರು, ಆಡಂಬರದ ಜೀವನವನ್ನು ಅನುಭವಿಸುತ್ತಿರುವ ನರೇಂದ್ರ ಮೋದಿ ಆಧುನಿಕ ಭಾರತದ ಹಿಟ್ಲರ್ ಎಂದು ವಿಶ್ಲೇಷಿಸಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಹಾಸನ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯು ಇಂದು ಅವ್ಯವಸ್ಥೆಯಿಂದ ಕೂಡಿ ಮೃತ್ಯುಕೂಪವಾಗಿ ಮಾರ್ಪಾಡಾಗಿದೆ. ಅದಿರು ಲಾರಿಯ ಅಡಿಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಭಯದಿಂದಲೇ ಸಂಚರಿಸಬೇಕಾದ ಸ್ಥಿತಿ ಬಂದೊದಗಿದೆ ಎಂದು ಹೇಳಿದರು.
ಎಲ್‌ಎನ್ಟಿ ಕಂಪೆನಿಗೆ ವಹಿಸಲಾಗಿದ್ದ ರಸ್ತೆ ಕಾಮಗಾರಿ ಕೆಲವು ದಿನಗಳಿಂದ ದಿಢೀರ್ ನಿಂತಿದೆ.. ರಸ್ತೆ ಅಗೆತದ ಕೆಲಸ, ಜಲ್ಲಿ ಶೇಖರಣೆ ಆಗಿದೆ. ಆದರೆ. ಕೆಲಸ ನಿಲ್ಲಲು ಮುಖ್ಯಕಾರಣ ಕೇಂದ್ರ ಸರಕಾರ ನೀಡಬೇಕಾದ ಅನುದಾನ ಗುತ್ತಿಗೆ ಕಂಪೆನಿಗೆ ನೀಡಿಲ್ಲ. ರಸ್ತೆಯ ಭೀಕರ ದುರ್ವ್ಯವಸ್ಥೆ ಆಗಿದೆ. ಮಳೆಗಾಲಕ್ಕೆ ಮುನ್ನ ಈ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಪ್ರಾಣಹಾನಿ ಖಂಡಿತ ಎಂದರು.
ಒಬ್ಬರ ಮುಖವನ್ನು ನೋಡಲಾಗದ ಧೂಳು, ಎಲ್ಲರೂ ಕೆಂಪು ಕೆಂಪಾಗಿ ಧೂಳಿನಿಂದ ಮುಳುಗಿ ಹೋದ ಸ್ಥಿತಿ ಬಳ್ಳಾರಿಯಲ್ಲಿತ್ತು. ಬಳ್ಳಾರಿಗೆ ಗಣಿಧಣಿಗಳಿಂದ ಮುಕ್ತಿ ನೀಡಿ ಹೊಸ ಬದುಕು ನೀಡಿದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಹೇಳಿದರು.
೩೦ ವರ್ಷಗಳಿಂದ ಮಂಗಳೂರು ಲೋಕಸಭಾ ಸದಸ್ಯರಾದವರ ಸಾಧನೆ ಏನೆಂದು ಪ್ರಶ್ನೆ ಮಾಡಿದರೆ ಸಿಗುವ ಉತ್ತರ ಶೂನ್ಯ. ಕಾಂಗ್ರೆಸ್ ಲೋಕಸಭಾ ಸದಸ್ಯರ ಕಾಲದಲ್ಲಿ ಅವಕಾಶ ಸಿಕ್ಕಿದಷ್ಟು ಉತ್ತಮ ಕೆಲಸಗಳು ಆಗಿವೆ. ಜಿಲ್ಲೆಗೆ ಬಂದರು, ವಿಮಾನ ನಿಲ್ದಾಣಗಳು ಬಂದಿದ್ದರೆ ಅದು ಶ್ರೀನಿವಾಸ ಮಲ್ಯರ ಕಾಲದಲ್ಲಿ. ಜಿಲ್ಲೆಯ ಸಂಸದರಾಗಿ ಜವಹರಲಾಲ್ ನೆಹರೂ ಆತ್ಮೀಯರಾಗಿ ಅನೇಕ ಕೆಲಸಗಳು ಆಗಿದೆ. ಮಾತ್ರವಲ್ಲದೆ ಅನೇಕ ಕೆಲಸ ಕಾರ್ಯಗಳು ಜಿಲ್ಲೆಯ ಕಾಂಗ್ರೆಸ್ ಸಂಸದರ ಕಾಲದಲ್ಲಿ ಆಗಿದೆ. ಭಾಜಪಕ್ಕೆ ಮತ ಹಾಕಿದ ಮತದಾರರು ಇದ್ದಾರೆ, ಆದರೆ ಜಿಲ್ಲೆಗೆ ಬಿಜೆಪಿಯ ಕೊಡುಗೆ ಏನು? ಪ್ರಶ್ನಿಸಿದ ಅವರು, ಕೆಲಸ ಮಾಡದೇ ಇದ್ದರೂ, ಹಿದುತ್ವದ ಆಧಾರದಲ್ಲಿ ಗೆಲ್ಲುವ ಹಗಲು ಕನಸು ಕಾಣುತ್ತಿದ್ದಾರೆ. ಜನರ ಸಮಸ್ಯೆಯ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಹೇಳಿದರು.
ಲೋಕಪಾಲ್ ರಚನೆ, ಬೇರೆಯವರಿಗೆ ಬುದ್ಧಿ ಹೇಳುವ ಮೋದಿ ಸಾಹೇಬರ ಊರು ಗುಜರಾತ್‌ನಲ್ಲಿ ಲೋಕಾಯುಕ್ತವೇ ಇಲ್ಲ. ಸಿಬಿಐಯ ಮುಖ್ಯಸ್ಥರನ್ನು ಬದಲಾಯಿಸುವ ಮೂಲಕ ದೇಶದ ಜನತೆ ಅತೀ ವಿಶ್ವಾಸ ಹೊಂದಿದ ಸಿಬಿಐಯ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದೆ. ಯುದ್ಧ ವಿಮಾನ ನಿರ್ಮಾಣ ಕುರಿತಾದ ಗುತ್ತಿಗೆಯನ್ನು ಯಾವುದೇ ಅನುಭವ ಇಲ್ಲದ ರಿಲಯನ್ಸ್‌ಗೆ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದರೆ ತನಿಖೆಗೆ ಬಿಜೆಪಿ ತಯಾರಿಲ್ಲ ಎಂದರು.
ದೇಶಕ್ಕಾಗಿ ಪ್ರಾಣ ತೆತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಬಿಜೆಪಿಯ ಸಂಪ್ರದಾಯ. ನಂಬರ್ ೧ ಎಂಪಿ ಇದ್ರೆ ಶ್ರೀನಿವಾಸ ಮಲ್ಯರು ಮಾತ್ರ. ನಳಿನ್ ಕುಮಾರ್ ಕಟೀಲು ಮೈನಸ್ ನಂಬರ್‌ವನ್ ಎಂದು ಗೇಲಿ ಮಾಡಿದ ಅವರು, ರಾಮನ ಹೆಸರಿನಲ್ಲಿ ಮತ್ತೆ ಮೋಸ ಮಾಡುತ್ತಿದ್ದಾರೆ. ನಾನು ೪೦ ದಿನಗಳ ಕಾಲ ವ್ರತದಾರಿಯಾಗಿ ೧೮ ಬಾರಿ ಶಬರಿಮಲೆಗೆ ಹೋಗಿದ್ದೇನೆ. ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಅವರು ಎಷ್ಟರವರೆಗೆ ಶಬರಿಮಲೆಗೆ ಹೋಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ನನ್ನನ್ನು ಹಿಂದುವೋ ಅಲ್ಲವೋ ಎಂದು ಪ್ರಶ್ನಿಸುವವರಿಗೆ ಇದು ಉತ್ತರ. ನಾನು ಸನಾತನ ಹಿಂದೂ ಧರ್ಮದ ಕಾರ್ಯಕರ್ತ ಎಂದರು
ದೇವರ ಹೆಸರಿನಲ್ಲಿ ಮತದ ಭಿಕ್ಷೆ ಬೇಡುವವರು ಬಿಜೆಪಿಯವರು. ನಾನು ನಾಗಮಂಡಲ, ಬ್ರಹ್ಮಕಲಶ, ದೀಪೋತ್ಸವ ವನ್ನು ಮಾಡುತ್ತಾ ದೇವರು ಮೆಚ್ವುವಂತಹ ಕಾರ್ಯ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ರಾಮನಿಗೆ ಯಾವಾಗಲೂ ಗೌರವ ಇದೆ. ಆದರೆ, ಬಿಜೆಪಿಯ ನಾಟಕದ ರಾಮನನ್ನು ನಾವು ನಂಬುವುದಿಲ್ಲ ಎಂದು ಆವೇಶದಿಂದ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸದಸ್ಯ ಡಾ. ರಘು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ, ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಎಂ.ಬಿ ಸದಾಶಿವಾ, ಅಮೃತ ಶೆಣೈ, ಹರೀಶ್ ಬಾಬು, ಮಾದವ ಮಾವೆ, ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ವಕ್ಪ್ ಅಧ್ಯಕ್ಷ ಕಣಚೂರು ಮೋಣು, ಶಶಿಧರ ಹೆಗ್ಡೆ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಶಾಹುಲ್ ಹಮೀದ್, ಅನಿತಾ ಹೇಮನಾಥ ಶೆಟ್ಟಿ, ಪದ್ಮಶೇಖರ ಜೈನ್, ಶೇಖರ ಕುಕ್ಕೇರಿ, ಮಂಜುಳಾ ಮಾಧವ ಮಾವೆ, ಎಂ.ಎಸ್.ಮುಹಮ್ಮದ್ ಮಾಧವ ಮಾವೆ, ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಗಣೇಶ್, ಮುರಳೀಧರ ರೈ, ಬೇಬಿ ಕುಂದರ್, ಪ್ರಮುಖರಾದ ಹೇಮನಾಥ ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯರಾದ ಆಶಾ ಡಿಸಿಲ್ವ, ಪ್ರತಿಭಾ ಕುಳಯಿ, ಅಬ್ದುಲ್ ಲತೀಫ್, ಮೂಡಬಿದಿರೆ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಐಡಾ ಸುರೇಶ್, ಉಲ್ಲಾಸ್ ಕೋಟ್ಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ಮತ್ತಿತರರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here