ಬಂಟ್ವಾಳ, ಜ. ೧೫: ಕಾಂಗ್ರೆಸ್‌ನಿಂದ ಆಯ್ಕೆಯಾದ ಸಂಸದರು ಜಿಲ್ಲೆಯಲ್ಲಿ ನಂ.೧ ಆಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಸ್ವಯಂಘೋಷಿತ ನಂ.೧ ಸಂಸದ. ಜಿಲ್ಲೆಯಲ್ಲಿ ಅಭಿವೃದ್ಧಿಯನ್ನೇ ಮಾಡದ ನಳಿನ್‌ಗೆ ನಂ.೧ ಪಟ್ಟ ಕೊಡುವುದಾದರೆ ಉಳಿದ ಬಿಜೆಪಿ ಸಂಸದರ ಗತಿಯೇನು? ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.
ಹಾಸನ- ಗುಂಡ್ಯ- ಬಿ.ಸಿ.ರೋಡ್ ಅಪೂರ್ಣ ಹೆದ್ದಾರಿಯ ಅಸ್ಥವ್ಯಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಸೋಮವಾರ ನಡೆದ ಕಾಲ್ನಡಿಗೆ ಜಾಥಾವು ಬುಧವಾರ ಬಿ.ಸಿ.ರೋಡ್‌ನಲ್ಲಿ ಸಮಾಪ್ತಿಗೊಂಡಿದ್ದು, ಬಳಿಕ ಬಿ.ಸಿ.ರೋಡ್ ನಾರಾಯಣಗುರು ವೃತ್ತದ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಕೇಂದ್ರ ಸರಕಾರ ಮತ್ತು ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ವೈಫಲ್ಯವನ್ನು ಜನರಿಗೆ ತೋರಿಸುವ ಕೆಲಸವನ್ನು ಇಂದು ಪಾದಯಾತ್ರೆ ಮೂಲಕ ಕಾಂಗ್ರೆಸ್ ಮಾಡಿದೆ. ನಾವು ಪಾದೆಯಾತ್ರೆ ಮಾಡುವುದು ಚರ್ಬಿ ಇಳಿಸಲು ಎಂದ ಇಲ್ಲಿನ ಸಂಸದರ ಚರ್ಬಿ ಇಳಿಸಬೇಕಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಉದ್ದಿಮೆದಾರರ ಸಾಲ ಮನ್ನಾ ವಿಚಾರದಲ್ಲಿ ಹುಂ ಎನ್ನುತ್ತಾರೆ.ಆದರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಉಹೂಂ ಎನ್ನುತ್ತಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ಜಿಲ್ಲೆಯ ಜನ ಸಾಮಾನ್ಯರ ಪಾದಯಾತ್ರೆ. ಇದು ಕೇಂದ್ರ ವೈಫಲ್ಯಗಳನ್ನು ಎಚ್ಚರಿಸುವ ಕರೆ ಗಂಟೆಯಾಗಿದೆ ಎಂದವರು, ಹುತಾತ್ಮ ಸೈನಿಕರ ಮನೆಗೆ ತೆರಳಿ ಸಾಂತ್ವನ ಹೇಳುವ ಸೌಜನ್ಯ ಪ್ರಧಾನಿ ದೇಶದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಮುಂದಿನ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಈ ದೇಶದ ಪ್ರಜಾಪ್ರಭುತ್ವ ನಾಶಗೊಂಡು ಫ್ಯಾಶಿಸ್ಟ್ ಆಡಳಿತ ಜಾರಿಯಾಗುತ್ತದೆ ಎಂದ ಅವರು, ಬಿಎಸ್ಸೆನ್ನೆಲ್ ಬಂದ್ ಮಾಡಿ ಜಿಯೋಗೆ ಪ್ರಚಾರ ನೀಡಿದವರು ಯಾರು ಎಂದು ಪಾರ್ಲಿಮೆಂಟ್‌ನಲ್ಲಿ ನಳಿನ್ ಟೆಲಿಕಮ್ಯೂನಿಕೇಶನ್ ಮಂತ್ರಿಯನ್ನು ಕೇಳಲಿ ಎಂದರು.
ರಾಜ್ಯ ಸರಕಾರ ಸುಭದ್ರವಾಗಿದೆ. ಬಿಬಿಎಂಪಿಯ ನಾಲ್ಕು ಕಾರ್ಪೊರೇಟರ್ ತರಿಸಲಾಗದವರು ಸರಕಾರ ಉರುಳಿಸುತ್ತಾರೆ ಎಂದ ಅವರು, ಬಿಜೆಪಿ ಟೆಸ್ಟ್ ಮ್ಯಾಚ್ ಆಡಲಿ, ನಾವು ಒನ್ ಡೇ ಮ್ಯಾಚ್ ಆಡ್ತೇವೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಮಾತನಾಡಿ, ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ನಮ್ಮ ಸರಕಾರ ೫ ವರ್ಷ ಆಡಳಿತ ನಡೆಸಲಿದೆ ಎಂದ ಅವರು, ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ಮಾತನಾಡಿ, ಬಿಜೆಪಿ ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುವ ಜನರ ಅಭಿವೃದ್ಧಿ ಮಾಡಲಿಲ್ಲ. ಬಡವರಿಗೆ ನಳಿನ್ ಅವರ ಕಾಳಜಿ ಇಲ್ಲ. ಜನರ ಮನಸ್ಸು ಕೆಡಿಸಲು ಅವರು ಮುಂದಾಗುತ್ತಿದ್ದಾರೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಐಸಿಸಿ ಸದಸ್ಯ ಅಮೃತ್ ಶೆಣೈ,ಮಾಜಿ ಶಾಸಕ ಮೊಯ್ದೀನ್ ಬಾವ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಂಗಳೂರು ಮೇಯರ್ ಭಾಸ್ಕರ್ ಕೆ., ಕೆಪಿಸಿಸಿ ಸದಸ್ಯ ಡಾ. ರಘು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಬಿ.ಎಚ್.ಖಾದರ್, ಇಬ್ರಾಹಿಂ ಕೋಡಿಜಾಲ್, ವಕ್ಪ್ ಅಧ್ಯಕ್ಷ ಕಣಚೂರು ಮೋಣು, ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಶಾಹುಲ್ ಹಮೀದ್, ಅನಿತಾ ಹೇಮನಾಥ ಶೆಟ್ಟಿ, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ಎಂ.ಎಸ್.ಮುಹಮ್ಮದ್, ಮಮತಾಗಟ್ಟಿ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮುಹಮ್ಮದ್ ಬಡಗನ್ನೂರು ಹಾಗೂ ಬ್ಲಾಕ್ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here