ಲೇ: ರಮೇಶ ಎಂ ಬಾಯಾರು ಎಂ.ಎ;                                                                                                  ಬಿಎಡ್ ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು                                                                                        ಇಮೇಲ್: rameshbayar@gmail.com

ಬೇಸಗೆಯ ರಜೆ ಕಳೆದು ಹೊಸ ಶೈಕ್ಷಣಿಕ ವರ್ಷಾರಂಭಗೊಂಡಿದೆ. ಮಕ್ಕಳೆಲ್ಲ ಶಾಲಾ ಕಾಲೇಜುಗಳತ್ತ ಗಮನ ಹರಿಸುವ ಸಂಭ್ರಮದ ದಿನಗಳು ಆರಂಭವಾಗಿವೆ. ಹಳ್ಳಿಯ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದರಿಂದಾಗಿ ನಮ್ಮೂರ ಮಕ್ಕಳು ನಮ್ಮೂರ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಸಂಭ್ರಮಿಸುವಂತಿಲ್ಲ. ಬೆಳಗಾದೊಡನೆ ಶಾಲೆಗೆ ಮಕ್ಕಳನ್ನು ಸಾಗಿಸಲು ಹತ್ತಾರು ಮೈಲು ದೂರದ ಊರುಗಳಿಂದ ಶಾಲಾ ವಾಹನಗಳು ಎಲ್ಲ ಹಳ್ಳಿಗಳಿಗೂ ಬರುತ್ತವೆ. ಮಕ್ಕಳು ಊರ ಶಾಲೆಯನ್ನು ಬಿಟ್ಟು ಪರ ಊರಿನ ಶಾಲೆಗೆ ಹೋಗುತ್ತಾರೆ. ಊರಿನಲ್ಲಿರುವ ಶಾಲೆಯ ಗತಿ!
ಸಾಮಾಜಿಕ ಕಾಳಜಿಯಿರುವ ದೇಶಪ್ರೇಮೀ ನಾಗರಿಕರು ಚಿಂತನೆ ಮಾಡಲೇ ಬೇಕಾದ ಕಾಲ ಬಂದಿದೆ. ಪೇಟೆಯಲ್ಲಿ ಶಿಕ್ಷಣವು ಹಣ ಸಂಗ್ರಹಿಸುವ ದಂಧೆಯಾಗಿ ಮಾರ್ಪಾಡಾಗುತ್ತಿವೆ. ಆದರೆ ಹಳ್ಳಿಯ ಶಾಲೆಗಳು ಸಮಾಜಮುಖಿಯಾದ ಚಿಂತನೆಯೊಂದಿಗೆ ತ್ಯಾಗ ಸಂಪನ್ನತೆಯನ್ನು ನೆಚ್ಚಿಕೊಂಡಿವೆ. ಉಳ್ಳವರು ತಮ್ಮ ಮಕ್ಕಳನ್ನು ಎಷ್ಟು ದೂರಕ್ಕಾದರೂ ಕಳುಹಿಸಲಿ ಎಂದೂ ಹೇಳುವ ಜನರಿದ್ದಾರೆ. ಆದರೆ ಇದರಿಂದಾಗಿ ಎಲ್ಲ ಊರುಗಳು ಸಮಸ್ಯೆಗಳನ್ನು ಕಾಲಿಗೆಳೆದುಕೊಂಡಾತಾಗುವುದಿಲ್ಲವೇ?
ಕಲಿಯುವ ಮಕ್ಕಳ ಹರಿವು ಪೇಟೆಯತ್ತ ಹೆಚ್ಚಿದಂತೆ ಊರಲ್ಲಿರುವ ಶಾಲೆಗಳ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತದೆ. ಸರಕಾರದ ನೀತಿಯಂತೆ ಮಕ್ಕಳ ಸಂಖ್ಯೆಗಣುಗುಣವಾಗಿ ಅಧ್ಯಾಪಕರ ಸಂಖ್ಯೆ ಕಡಿಮೆಯಾಗ ತೊಡಗುತ್ತದೆ. ಹತ್ತು ತರಗತಿಯಿರುವ ಶಾಲೆಯಲ್ಲಿ 350 ವಿದ್ಯಾರ್ಥಿಗಳಿದ್ದರೆ ಅಧ್ಯಾಪಕರೂ ತರಗತಿಗೊಬ್ಬರಂತೆ ಇರುತ್ತಾರೆ. ಮಕ್ಕಳ ಸಂಖ್ಯೆ 175 ಕ್ಕಿಳಿದರೆ ಒಂದು ತರಗತಿಗೆ ಅರ್ಧ ಅಧ್ಯಾಪಕನಿರುತ್ತಾನೆ. ಇನ್ನು ಈ ಸಂಖ್ಯೆ 80ಕ್ಕಿಳಿದರೆ ಅಧ್ಯಾಪಕರ ಸಂಖ್ಯೆನ್ನು ಸರಕಾರ ಇನ್ನೂ ಇಳಿಸಿ ದಿನದಲ್ಲಿ ಎರಡು ಅವಧಿ ಮಾತ್ರ ಕಲಿಸಬಹುದಾದಷ್ಟು ಅಧ್ಯಾಪಕರಿರುವಂತಾಗುತ್ತದೆ. ಇದರಿಂದಾಗಿ ಆ ಶಾಲೆಯಲ್ಲಿ ಕಲಿಯುವ ಮಕ್ಕಳ ಕಲಿಕಾ ಗುಣ ಮಟ್ಟ ಇಳಿಯತೊಡಗುತ್ತದೆ. ಮಕ್ಕಳು ಕಲಿಕೆಯಲ್ಲಿ ಹಿಂದಿದ್ದಾರೆ, ಶಾಲೆಗೆ ಹೋಗಿ ಪ್ರಯೋಜನವಿಲ್ಲ ಎಂದು ಹೆತ್ತವರು ಮಕ್ಕಳನ್ನು ಶಾಲೆ ಬಿಡಿಸುವತ್ತ ಗಮನ ಕೊಡುತ್ತಾರೆ. ಮಕ್ಕಳ ಸಂಖ್ಯೆ ವಿಪರೀತ ಮಟ್ಟದಲ್ಲಿ ಇಳಿಕೆಯಾದಾಗ ಆರ್ಥಿಕವಾಗಿ ನಷ್ಟಕರವಾಗಿದೆ ಎಂಬ ಸಬೂಬು ನೀಡಿ ಶಾಲೆ ಮುಚ್ಚಲಾಗುತ್ತದೆ. ಊರ ಶಾಲೆ ಮುಚ್ಚಿದರೆ ಬಡ ಮಕ್ಕಳು ಏನು ಕಲಿಯಬೇಕು? ಹೇಗೆ ಕಲಿಯಬೇಕು? ಎಲ್ಲಿ ಕಲಿಯಬೇಕು?
ಓದದ ಬಾಯಿ ಬಿಲದ ಬಾಯಿ ತಾನೇ? ಕಲಿಕೆಯ ಅವಕಾಶ ವಂಚಿತರು ಸುಜ್ಞಾನಿ ನಾಗರಿಕರಾಗುವುದಿಲ್ಲ. ಅನಾಗರಿಕ ಅಜ್ಞಾನಿಗಳಾಗುತ್ತಾರೆ. ಈ ಅನಾಗರಿಕತೆ ಹಳ್ಳಿಯನ್ನು ನುಂಗಲಾರಂಭಿಸುತ್ತದೆ. ಊರು ಕೇರಿಗಳಲ್ಲಿ ನಡೆಯುವ ದೊಂಬಿ, ದರೋಡೆ, ಕಳ್ಳತನ, ಮೋಸ, ದಗೆ, ವಂಚನೆ, ಜಗಳ, ಬಲಾತ್ಕಾರ ಮುಂತಾದ ಅನಿಷ್ಠಗಳಿಗೆ ಅನಾಗರಿಕತೆಯೇ ಕಾರಣ. ಮೌಲ್ಯವಂತ ಸಮಾಜದಲ್ಲೆಂದೂ ಇಂತಹ ಹೇಯ ಕೃತ್ಯ ಇರದು. ಊರು ಕೇರಿಗಳ ಮಾನಸಿಕ ನೆಮ್ಮದಿ ಹದಗೆಡುತ್ತದೆ. ಮಾನಸಿಕ ಖಿನ್ನತೆಯೋ, ಸದಾ ಭಯಾನ್ವಿತ ಬದುಕೋ ಇದಿರಾಗುತ್ತದೆ. ನಮ್ಮೂರ ಶಾಲೆಯನ್ನು ಬಹಳ ಸೊಗಸಾಗಿ ಬೆಳೆಸುವ ಪ್ರಯತ್ನ ಮಾಡಿರುತ್ತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಕರುಬುವ ಕಾಲ ಬಂದೇ ಬರುತ್ತದೆ. ಸಾಮಾಜಿಕ ಅನಿಷ್ಠಗಳಿಂದ ದೂರವಾಗಲು ನಾವು ಊರು ಬಿಡುವುದು ಪರ್ಯಾಯವಾಗದು. ಯಾಕೆಂದರೆ ಈ ಅನಿಷ್ಠ ಸಾರ್ವತ್ರಿಕ. ನಮ್ಮೂರ ಶಾಲೆಯನ್ನು ಬೆಳೆಸುವ ಚಿಂತನೆಯೊಂದೇ ಸಮಾಜವನ್ನು ನೆಮ್ಮದಿಯತ್ತ ಒಯ್ಯಲಿರುವ ಖಚಿತ ಪರಿಹಾರ. ಆಂಗ್ಲ ಮಾಧ್ಯಮದ ಆಗ್ರಹಿಗಳು ಊರ ಶಾಲೆಯಲ್ಲೇ ಪೂರಕ ವ್ಯವಸ್ಥೆಗಳನ್ನು ಅಲ್ಪ ವೆಚ್ಚದಲ್ಲಿ ಪಡೆಯುವ ಸಾಧ್ಯತೆಯನ್ನು ಕಂಡುಕೊಳ್ಳಬೇಕು. ಆದರೆ ಆಂಗ್ಲ ಮಾಧ್ಯಮ ಎಂದಿಗೂ ಮಾತೃ ಭಾಷೆಗೆ ಸರಿಸಾಟಿಯಾಗದು. ಹೆಸರಾಂತ ಹಾಸ್ಯ ಋಷಿ ಪ್ರಾಣೇಶ ಅವರು ಹಾಸ್ಯ ಸಂಜೆಯೊಂದರಲ್ಲಿ ಆಂಗ್ಲ ಮಾಧ್ಯಮದ ಬಗ್ಗೆ ಮಾತನಾಡುತ್ತಾ, ನಿಮಗೆ ಕನಸು ಯಾವ ಭಾಷೆಯಲ್ಲಿ ಬೀಳುತ್ತದೆ? ಎಂದು ಪ್ರಶ್ನಿಸಿದರು. ಕನಸುಗಳೆಲ್ಲವೂ ಮಾತೃ ಭಾಷೆಯಲ್ಲೇ ಬೀಳುತ್ತವೆ. ಮನಸ್ಸಿನಲ್ಲಿ ಭಗವಂತನನ್ನು ಪ್ರಾರ್ಥನೆ ಮಾಡುವುದು ಮಾತೃ ಭಾಷೆಯಲ್ಲಿ ತಾನೇ? ಒಂದೆಡೆ ಕುಳಿತಾಗ ನಮ್ಮ ತಲೆಯೊಳಗೇಳುವ ಯೋಚನೆಗಳು, ಚಿಂತನೆಗಳು ಕಲಿಕಾ ಮಾಧ್ಯಮದಲ್ಲಿರುವುದಿಲ್ಲ. ಮಾತೃಭಾಷೆಯಲ್ಲೇ ಯೋಚಿಸುತ್ತೇವೆ. ಆದುದರಿಂದ ಮಾತೃ ಭಾಷೆಗೆ ಮಹತ್ವ ನೀಡೋಣ, ನಮ್ಮೂರ ಶಾಲೆಗಳನ್ನು ಉಳಿಸಿ ಬೆಳೆಸುವ ಬದ್ಧತೆ ಹೊಂದೋಣ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here