ಲೇಖಕರು: ರಮೇಶ ಎಂ ಬಾಯಾರು ಎಂ.ಎ, ಬಿ.ಇಡಿ;
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಒಂದು ವಸ್ತುವಿನ ಸೌಂದರ್ಯವು ನೋಡುವ ಕಣ್ಣಿನಲ್ಲಿರುತ್ತದೆ. ಕಣ್ಣು ಮಬ್ಬಾದವನಿಗೆ ಚಂದದ ಹೂವೂ ಶೋಭಿಸದು, ಹಾಗೆಯೇ ಕಣ್ಣಿನ ದೃಷ್ಟಿಯು ಅತೀ ಉತ್ತಮವಾಗಿರುವವನಿಗೂ ಅವನ ಒಳ ದೃಷ್ಟಿಯು ಚೆನ್ನಾಗಿಲ್ಲದೇ ಹೋದರೆ ಆ ಹೂವು ಸುಂದರ ಅನ್ನಿಸದು. ಲೋಕ ರೂಢಿಯೇ ಹಾಗೆ. ತನ್ನ ದೃಷ್ಟಿಯ ನೇರದಲ್ಲೇ ಪ್ರಪಂಚವನ್ನು ಗಮನಿಸುವವರು ಸರಿಯಾದುದರಲ್ಲೂ ಡೊಂಕನ್ನೇ ಗುರುತಿಸುತ್ತಾರೆ. ಅಂತಃದೃಷ್ಟಿಯು ಉತ್ತಮವಾಗಿದ್ದವರು ದೋಷ ಪೂರಿತವಾದವುಗಳಲ್ಲೂ ಅಂದವನ್ನೇ ಕಾಣುತ್ತಾರೆ.

ಹಸಿದು ಕಂಗಾಲಾದವನಿಗೆ ಮುಷ್ಟಿ ಅನ್ನವೂ ಮೃಷ್ಟಾನ್ನ ಭೊಜನಕ್ಕೆ ಸಮಾನ. ಬಾಯಾರಿ ಬಳಲಿದವನಿಗೆ ತೋಡಿನ ನೀರೂ ತೀರ್ಥಪ್ರಾಯವಾಗಿರುತ್ತದೆ. ಉಡುಪಿಲ್ಲದವನಿಗೆ ಹರಕು ಚಿಂದಿಯೂ ಆಪ್ತವೇ ಹೌದು. ಮನೆಯಿಲ್ಲದ ಬಾಡಿಗೆ ಕೊಡಲು ಹಣವಿಲ್ಲದ ಕಡು ಬಡವನು ಡೇರೆಯಲ್ಲೂ ಸಂತಸ ಕಾಣುತ್ತಾನೆ. ಬಡ ಭಿಕ್ಷುಕನಿಗೆ ಬಸ್ ನಿಲ್ದಾಣದ ಕಟ್ಟೆಯೇ ಹಾಸಿಗೆ. ಶ್ರೀಮಂತಿಕೆಯಲ್ಲಿ ಮೆರೆಯುವವನಿಗೆ ಮೃದುವಾದ ಹಾಸಿಗೆಯೂ ಮುಳ್ಳಿನ ಹಾಸಾಗಬಹುದು.

ಕೆಲವರಿಗೆ ತನಗಾದವರು ಮಾಡಿದುದೆಲ್ಲವೂ ಅತೀ ಶೇಷ್ಠವಾಗಿ ಕಾಣುತ್ತದೆ. ಅವರ ತಪ್ಪುಗಳನ್ನೂ ಒಪ್ಪುಗಳನ್ನಾಗಿ ವಾದಿಸುತ್ತಾರೆ. ಆದರೆ ತನಗಾಗದವರು ಎಷ್ಟೇ ಒಳಿತಾದುದನ್ನು ಮಾಡಿದರೂ ದೋಷಗಳನ್ನು ಕುಟುಕಿ ಕುಟುಕಿ ಹೆಕ್ಕಿ ತೆಗೆದು ಕಡ್ಡಿಯನ್ನೇ ಗುಡ್ಡವಾಗಿ ಕಲ್ಪಿಸಿ ಪ್ರಚಾರ ಕೊಡುತ್ತಾರೆ. ಒಳ್ಳೆಯ ಕೆಲಸಗಳನ್ನು ಮಾಡಿದವರು ಯಾರೇ ಇರಲಿ ಅದನ್ನು ಮೆಚ್ಚುವ ಮತ್ತು ಅದಕ್ಕೆ ಮಹತ್ವ ದೊರಕಿಸುವ ದೃಷ್ಟಿಯುಳ್ಳವರು ನಾವಾಗಬೇಕು. ಅಲ್ಲದೆ ತನ್ನವರೇ ಆದರೂ, ಅವರು ಮಾಡಿದ ತಪ್ಪುಗಳನ್ನು ತೋರಿಸಿಕೊಟ್ಟು ಅವುಗಳನ್ನು ಸರಿಪಡಿಸುವುದರೊಂದಿಗೆ ಅವರು ಜನಮನ್ನಣೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸುವುದರಿಂದ ಸಮಾಜಕ್ಕೆ ಹಿತವಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಕಪ್ಪು ಬಣ್ಣದ ಕನ್ನಡಕ ಹಾಕಿ ನೋಡುವವರಿಗೆ ಸುತ್ತಲಿರುವುದೆಲ್ಲವೂ ಕಪ್ಪಾಗಿಯೇ ಕಾಣುವುದೆಂಬ ಲೋಕ ರೂಢಿಯ ಮಾತಿದೆ. ಸಂಪೂರ್ಣ ಪಾರದರ್ಶಕ ದೃಷ್ಟಿಯುಳ್ಳವರಿಗೆ ಒಳಿತು ಕೆಡುಕುಗಳು ತಿರುವು ಮುರುವಾಗಿ ಕಾಣಿಸುವುದಿಲ್ಲ. ನಮಗೆ ಪಾರದರ್ಶಕ ದೃಷ್ಟಿಯೇ ಬೇಕಲ್ಲದೆ ಮುಖಸ್ತುತಿ ಮಾಡುವ, ವಸ್ತು ಸ್ಥಿತಿಯನ್ನು ಮರೆಮಾಚಿ ತನ್ನನ್ನು ಯಾ ತನ್ನವರನ್ನು ಸಮರ್ಥಿಸುವ, ಒಳ್ಳೆಯವರನ್ನು ಹಿಂದಿನಿಂದ ಕತ್ತು ಹಿಚುಕುವ ಅಥವಾ ಅವರನ್ನು ಕಾಲೆಳೆಯುವ ದೃಷ್ಟಿಗಳು ಬೇಡವೇ ಬೇಡ.

ಮಾತಿನಿಂದ ವ್ಯಕ್ತಿಯ ನಿಜ ಬಣ್ಣ ಬಯಲಾಗುತ್ತದೆ. ಯಾವುದೋ ಸಂದರ್ಭದಲ್ಲಿ ಹೇಳಿದ ವಿಷಯಕ್ಕೂ ಇನ್ನಾವುದೋ ಸಂದರ್ಭದಲ್ಲಿ ಹೇಳುವ ವಿಷಯಕ್ಕೂ ನಡುವೆ ಅಜಗಜಾಂತರವಿರುವುದನ್ನು ಕಾಣುತ್ತೇವೆ. ರಾಜಕೀಯ ರಂಗದಲ್ಲಂತೂ ಇದು ನಿತ್ಯ ಕಾಣಬಹುದಾದ ವಿಚಾರ. ಮನುಷ್ಯನು ಸ್ವಹಿತಕ್ಕಾಗಿ ತನ್ನತನವನ್ನು ಕಳೆದುಕೊಳ್ಳುವ ಮತ್ತು ತನಗೆ ಹಿತವಾಗುವಂತಹ ಪರಿಸ್ಥಿತಿಗೆ ಪೂರಕವಾಗಿ ತೂರಿಕೊಳ್ಳುವುದರಿಂದಾಗಿ ಅವನ ವ್ಯಕ್ತಿತ್ವದ ವಿನಾಶವಾಗುತ್ತದೆ. ನಮ್ಮ ದೃಷ್ಟಿ ಇತರಿರಿಗೆ ಮಾರ್ಗದರ್ಶಕವಾಗುವಂತೆ ಸ್ಥಾಯಿಯಾಗಿರಬೇಕು, ದಿಟ್ಟ ನೇರ ದೃಷ್ಟಿಯುಳ್ಳವರು ಎಂದೆಂದಿಗೂ ತಮ್ಮ ಮಾನ್ಯತೆಯು ನಶಿಸುವಂತಹ ತಪ್ಪು ಕೆಲಸಗಳನ್ನು ಮಾಡುವುದಿಲ್ಲ.

ಸಮಾಜವೂ ತನ್ನ ದೃಷ್ಟಿಕೋನವನ್ನು ನೇರವಾಗಿರಿಸಿಕೊಂಡು, ಒಂದು ನೀತಿಸಂಹಿತೆಯಡಿ ಬಾಳುವ ಮೌಲ್ಯವನ್ನು ರೂಢಿಸಿಕೊಳ್ಳಬೇಕು. ಹನಿ ಹನಿಗಳು ಕೂಡಿ ಸಾಗರವಾಗುವಂತೆ ಚಾರಿತ್ರ್ಯವನ್ನು ರೂಢಿಸಿಕೊಳ್ಳುವವರ ಸಂಖ್ಯೆ ಅಧಿಕವಾದಂತೆ ಸಮುದಾಯವೂ ಆದರ್ಶ ಹಾಗೂ ಮಾಲ್ಯಾಧಾರಿತವಾಗುವುದು. ಸೃಷ್ಟಿಯ ನೈಜತೆಗೆ ಬದ್ಧತೆಯಿರುವ, ಸೃಷ್ಟಿಯ ಎಲ್ಲವನ್ನೂ ಧನಾತ್ಮಕವಾಗಿ ಕಾಣುವ ವ್ಯಕ್ತಿಗಳ ನಿರ್ಮಾಣ ಇಂದಿನ ಅನಿವಾರ್ಯತೆ. ತೊರೆಯೆಡೆಗೆ ಕುದುರೆಯನ್ನು ಒಯ್ಯಬಹುದು. ನೀರು ಕುಡಿಯಲು ಕುದುರೆಯೇ ಮನಸ್ಸು ಮಾಡಬೇಕು. ಬಲವಂತದಿಂದ ಕುದುರೆಗೆ ನೀರು ಕುಡಿಸಲು ಹೊರಟರೆ ನಮ್ಮ ಕೈಕಾಲು ಮುರಿದೀತೇ ವಿನಹ ಕುದುರೆ ಒಂದು ತೊಟ್ಟೂ ನೀರು ಕುಡಿಯದು. ಅಂತೆಯೇ ವ್ಯಕ್ತಿಗೆ ಮಾರ್ಗದರ್ಶನ ಮಾಡಬಹುದು, ನೀತಿ ಹೇಳಬಹುದು, ಸರಿ-ತಪ್ಪುಗಳನ್ನು ವಿವರಿಸಬಹುದು. ಬದುಕಿನಲ್ಲಿ ಸರಿಯಾದ ವಿಚಾರಗಳ ಹತ್ತಿರಕ್ಕೆ ಒಯ್ಯಬಹುದು. ಅವುಗಳನ್ನು ಬದುಕಿನಲ್ಲಿ ಅಳವಡಿಸಲು ಅವನೇ ಮನಸ್ಸು ಮಾಡಬೇಕಲ್ಲದೆ, ಒತ್ತಾಯ ಪಡಿಸಿ ಹೇರುವುದು ಅಸಾಧ್ಯವೇ ಸರಿ. ಒಳಿತುಗಳನ್ನೇ ನಮ್ಮ ಹೃದಯದಲ್ಲಿ ಸಂಕಲಿಸಿಕೊಂಡು ಸರಿ ತಪ್ಪುಗಳನ್ನು ಸರಿಯಾಗಿ ವಿಮರ್ಶೆಮಾಡುತ್ತಾ ಸರಿಯಾದವುಗಳಿಗೆ ಬೆಂಬಲ ನೀಡುವ ಪುಣ್ಯವಂತರು ನಾವಾಗೋಣ. ಸುಸಂಗತವಾದ ಸೃಷ್ಟಿಯತ್ತವೇ ನಮ್ಮ ದೃಷ್ಟಿಯಿರಲಿ, ಸುಸಂಗತಿಯಲ್ಲಿಯೇ ನಮ್ಮ ಒಲವಿರಲಿ, ಅಸಂಗತವಾದವುಗಳನ್ನು ಬಹಳಷ್ಟು ದೂರವಿಡುವುದರ ಮೂಲಕ ಬದುಕಿನಲ್ಲಿ ಗೆಲುವು ಕಾಣುತ್ತಾ ನಲಿಯುತ್ತಿರೋಣ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here