ಲೇಖನ: ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ
ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು

ಶ್ರೀಮಂತಿಕೆಯನ್ನು ಎಲ್ಲರೂ ಆಶಿಸುತ್ತಾರೆ. ತಾವು ಶ್ರೀಮಂತಿಕೆಯನ್ನು ಬಯಸುವಿರಾ? ಎಂಬ ಪ್ರಶ್ನೆಯನ್ನು ಮುಂದಿಟ್ಟು ದೇಶವ್ಯಾಪಿ ಸಮೀಕ್ಷೆ ನಡೆಸಿದಾಗ ಎಲ್ಲಾದರೂ ’ಇಲ್ಲ ಎಂಬ ಉತ್ತರ ಬಂದರೆ ಅದು ಪ್ರಪಂಚದ ಎಂಟನೆಯ ಅದ್ಭುತವಾಗಬಹುದೇನೋ ಎಂದೆನಿಸುತ್ತದೆ. ಬಡತನದ ಕೊಂಪೆಯಲ್ಲೇ ಇರಲಿ, ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲೇ ಇರಲಿ; ಎಲ್ಲರ ಆಸೆ ತಾನು ಪ್ರಪಂಚದ ಅತೀ ದೊಡ್ಡ ಶ್ರೀಮಂತನಾಗಬೇಕೆಂಬುದೇ ಆಗಿರುತ್ತದೆ ಎಂಬುದು ವಾಸ್ತವ.

ತಿರುಕನೊಬ್ಬ ಮುರುಕು ಛತ್ರದಲ್ಲಿ ನಿದ್ದೆಮಾಡುತ್ತಿದ್ದಾಗಲೂ ತಾನು ಮಹಾರಾಜನಾಗಿ ಸುಖಜೀವನ ನಡೆಸಿದನೆಂದು ಹೇಳುವ ‘ತಿರುಕನ ಕನಸು’ ಎಂಬ ಗೀತೆಯನ್ನು ನಾನು ಎಳವೆಯಲ್ಲಿ ಓದಿರುವುದು ಇಂದೂ ನೆನಪಾಗುತ್ತಿದೆ. ಶ್ರೀಮಂತನಾಗಬೇಕೆಂಬ ಆಸೆ ಮತ್ತು ಅದನ್ನು ಹೊಂದಲು ಮಾಡುವ ಸಾಧನೆ ತಪ್ಪಲ್ಲ. ಕೇವಲ ಧನ ಕನಕ ಕಟ್ಟಡಗಳಿಂದ ಓರ್ವ ಶ್ರೀಮಂತನಾದರೆ ಸಾಕೇ? ಆತನಲ್ಲಿ ಹೃದಯ ಶ್ರೀಮಂತಿಕೆ, ವಿಚಾರ ಶ್ರೀಮಂತಿಕೆ, ಆಚಾರ ಶ್ರೀಮಂತಿಕೆಗಳಿರಬೇಡವೇ? ಇದು ಚಿಂತನೆಯ ವಿಚಾರ.

ಭ್ರಷ್ಟಾಚಾರ ಎಂಬ ಪದ ಇಂದು ನಿತ್ಯದ ಜಪಮಂತ್ರವಾಗಿದೆ. ಒಂದು ಕಡೆಯಿಂದ ಭ್ರಷ್ಠಾಚಾರ ನಿರ್ಮೂಲನದ ಬಗ್ಗೆ ಧ್ವನಿಯೇಳುತ್ತಿದ್ದರೆ, ಇನ್ನೊಂದು ಕಡೆಯಿಂದ ನಿರ್ಮೂಲನದ ಧ್ವನಿಗಿಂತ ಮಿಗಿಲಾದ ಧ್ವನಿಯೊಂದಿಗೆ ಭ್ರಷ್ಟಾಚಾರದ ಪೋಷಣೆಯಾಗುತ್ತಿದೆ. ಗಳಿಕೆಗೊಂದು ಆಚಾರವಿರಬೇಕು. ಆಚಾರ ತಪ್ಪಿ ಗಳಿಸಿ ಶ್ರೀಮಂತನಾಗುವುದೆಂದರೆ ಅದು ಭ್ರಷ್ಟಾಚಾರವಾಗುತ್ತದೆ. ಅಂತಹವನ ಶ್ರೀಮಂತಿಕೆಯು ಗೌರವವನ್ನು ಪಡೆಯುವುದಿಲ್ಲ. ಭ್ರಷ್ಟಾಚಾರದ ಗಳಿಕೆಯಿಂದ ಶ್ರೀಮಂತನಾದವನ ಚಿಂತನೆಗಳು ಸಮಾಜದ ಪರವಾಗಿ ಇರಲು ಸಾಧ್ಯವೇ ಇಲ್ಲ. ಅವನು ಸ್ವಹಿತಕ್ಕಾಗಿ ಮಾತ್ರವೇ ತನ್ನ ಸಿರಿತನವನ್ನು ಬೆಳೆಸಿರುತ್ತಾನೆ. ಒಂದೊಮ್ಮೆ ಅವನು ತನ್ನ ಸಂಪತ್ತನ್ನು ಸಮಾಜ ಮುಖಿಯಾದ ಚಟುವಟಿಕೆಗಳಲ್ಲಿ ತೊಡಗಿಸಿದರೂ ಅವನ ಶ್ರೀಮಂತಿಕೆ ಗೌರವಯೋಗ್ಯವೆನಿಸದು.

ಎಲ್ಲರೂ ಶ್ರೀಮಂತರೇ ಆಗಲಿ. ಆ ಶ್ರೀಮಂತಿಕೆಯು ಪ್ರಾಮಾಣಿಕ ದುಡಿಮೆಯ ಫಲವಾಗಿ ಬರಲಿ. ಅಲ್ಲದೆ ಆ ಶ್ರೀಮಂತಿಕೆಯು ನಾಡಿನ ಉದ್ಧಾರಕ್ಕೆ ಬಳಕೆಯಾಗಲಿ. ಕೇವಲ ಸ್ವಹಿತಾಸಕ್ತಿಯಿಂದ ಗಳಿಸುವ ಶ್ರೀಮಂತಿಕೆಯು ಅಪೇಕ್ಷಣೀಯವೆನಿಸದು. ಅಶಕ್ತರು, ದೀನರು, ರೋಗಿಗಳು, ಸ್ವಯಂಸೇವಾ ಸಂಘಟನೆಗಳು ಮತ್ತು ಸಂಸ್ಥೆಗಳನ್ನು ಪೋಷಿಸುವ ಹೃದಯವಂತರಿಗೆ ಬರುವ ಶ್ರೀಮಂತಿಕೆ ಅಪೇಕ್ಷಣೀಯವಾಗುತ್ತದೆ. ಅದೆಷ್ಟೋ ಶ್ರೀಮಂತರು ಆರೋಗ್ಯ ಶಿಬಿರಗಳನ್ನು ನಡೆಸಿ ದುರ್ಬಲರಿಗೆ ನೆರವಾಗುತ್ತಾರೆ. ಇನ್ನೂ ಕೆಲವರು ಬಡ ವಿದ್ಯಾರ್ಥಿಗಳ ಶಿಕ್ಷಣದ ಹೊರೆಯನ್ನು ಹೊರುತ್ತಾರೆ. ಈ ರೀತಿ ನಾನಾ ಬಗೆಯ ಸಮಾಜಮುಖಿಯಾದ ಆಶಯವುಳ್ಳವರ ಶ್ರೀಮಂತಿಕೆಗೆ ನಿಜವಾದ ಗೌರವು ದೊರೆಯುತ್ತದೆ.

ಆದುದರಿಂದ ನಾವೂ ಶ್ರೀಮಂತರಾಗೋಣ. ಆದರೆ ಎಲ್ಲದಕ್ಕೂ ಮೊದಲು ಹೃದಯ ಶ್ರೀಮಂತರಾಗೋಣ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here