Sunday, April 7, 2024

ಖ್ಯಾತ ನಾಮ

ಲೇಖನ: ರಮೇಶ ಎಂ. ಬಾಯಾರು, ಎಂ.ಎ; ಬಿ.ಇಡಿ
ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ನಂದನ-ಕೇಪು

ಪಂಡಿತ್ ಪುಟ್ಟರಾಜ ಗವಾಯಿಯವರು ವೈದ್ಯಕೀಯ ಶುಶ್ರೂಷೆಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರ ಅರೋಗ್ಯ ಸುಧಾರಿಸಲಿ ಎಂದು ಲಕ್ಷಾಂತರ ಜನರು ಮಠ ಮಂದಿರಗಳಲ್ಲಿ ಅರ್ಚನೆ ಮಾಡಿದರು. ಉರುಳು ಸೇವೆ ಮಾಡಿದರು. ದೇವರಿಗೆ ದೀರ್ಘ ದಂಡ, ಸಾಷ್ಟಾಂಗ ನಮಸ್ಕಾರಗಳನ್ನು ಹಾಕಿದರು. ತಮ್ಮ ಆಯುಷ್ಯವನ್ನು ಗವಾಯಿಯವರಿಗೆ ಕೊಟ್ಟಾದರೂ ಅವರನ್ನು ರಕ್ಷಿಸಬೇಕು, ಅವರನ್ನು ಚೇತೋಹಾರಿಯನ್ನಾಗಿ ಮಾಡಬೇಕೆಂದು ಆ ಭಗವಂತನನ್ನು ಯಾಚಿಸಿದರು.
ಈ ಎಲ್ಲಾ ಪ್ರಾರ್ಥನೆ, ಪೂಜೆ, ಹೋಮ, ಹವನ, ದಕ್ಷಿಣೆ, ಪ್ರದಕ್ಷಿಣೆಗಳ ಪರಿಣಾಮ ಏನಾಯಿತೆಂಬುದನ್ನು ವಿಮರ್ಶೆ ಮಾಡುವುದು ನಮ್ಮ ಆಶಯವಲ್ಲ. ಒಬ್ಬ ಸಮಾಜ ಹಿತೈಷಿಯ ಹಿಂದೆ, ಓರ್ವ ಸಮುದಾಯ ಹಿತ ಶ್ರಮಿಕನ ಹಿಂದೆ ಅದೆಷ್ಟು ಕೋಟಿ ಜನರ ಭಾವನೆಗಳು ಮಿಳಿತಗೊಂಡಿರುತ್ತವೆ ಎಂಬುವುದನ್ನು ವಿಮರ್ಶಿಸುವುದೇ ನಮ್ಮ ಆಶಯವಾಗಿದೆ.
ಮನುಷ್ಯನ ಹುಟ್ಟು ಉಸಿರಿನಿಂದ ಆರಂಭಗೊಳ್ಳುತ್ತದೆ. ಉಸಿರು ಸ್ಥಬ್ಧಗೊಂಡಾಗ ಅವನ ಆಯಷ್ಯವೂ ಕೊನೆಗೊಳ್ಳುತ್ತದೆ. ತನ್ನ ಹುಟ್ಟಿನೊಂದಿಗೆ ಮನುಷ್ಯನು ಹೆಸರನ್ನು ಹೊತ್ತುಕೊಂಡು ಬರುವುದಿಲ್ಲ. ಉಸಿರನ್ನು ಮಾತ್ರ ಹೊತ್ತುಕೊಂಡು ಬರುತ್ತಾನೆ. ಅದೇ ರೀತಿಯಲ್ಲಿ ಸಾಯುವಾಗ ಆತನಿಗೆ ಹೆಸರಿರುತ್ತದೆ. ಉಸಿರು ಮಾತ್ರ ಹೊರಟು ಹೋಗಿರುತ್ತದೆ. ಉಸಿರು ಮತ್ತು ಹೆಸರುಗಳ ನಡುವಣ ಬದುಕಿನ ಶೈಲಿ ಮನುಷ್ಯನ ನಾಮವು ಪ್ರಖ್ಯಾತ ಯಾ ಕುಖ್ಯಾತವಾಗಲು ಹೇತುವಾಗುತ್ತದೆ, ಅವನ ಜನಪ್ರಿಯತೆಯನ್ನು ಜಾಹೀರು ಪಡಿಸುತ್ತದೆ, ಅವನ ಬಗ್ಗೆ ಜನರಿಗಿರುವ ಅಗಾಧವಾದ ಪ್ರೇಮವನ್ನು ರುಜುವಾತು ಪಡಿಸುತ್ತದೆ.
ಒಬ್ಬ ವ್ಯಕ್ತಿ ದುಃಖ ಯಾ ಕಷ್ಟದ ಸಂದರ್ಭಗಳಿಗೆ ಸಿಲುಕಿದಾಗ, ಅವನಿಗೆ ಹಾಗೇ ಆಗಬೇಕು ಎಂದು ಯಾರೂ ಭಾವಿಸುವಂತಾಗಬಾರದು. ನಮ್ಮ ಜೀವನ ಶೈಲಿ ಸರ್ವತ್ರ ಅಪೇಕ್ಷಣೀಯವಾದ ರೀತಿಯಲ್ಲಿದ್ದರೆ ಮಾತ್ರ ನಮ್ಮ ದು:ಖ, ದುಗುಡಗಳಿಗೆ ಸಮುದಾಯದ ಅನುಕಂಪ ದೊರೆಯುತ್ತದೆ. ವೀರಪ್ಪನ್ ಗುಂಡೆಟಿಗೆ ಈಡಾಗಿ ಸಾವು ಪಡೆದಾಗ ಎಲ್ಲೂ ಶೋಕಾಚರಣೆ ನಡೆಯಲಿಲ್ಲ. ಆದರೆ ರಾಜಕುಮಾರ್ ಅವರ ಸಾವು ಜಗತ್ತನ್ನೇ ಮೂಕಗೊಳಿಸಿತು, ದುಃಖದ ಮಡುವನ್ನೇ ಹರಿಯಿಸಿತು.
ಅನೇಕ ಖ್ಯಾತನಾಮರು ನಮ್ಮ ಹಿಂದೆ ಮತ್ತು ನಮ್ಮ ನಡುವೆಯಿದ್ದಾರೆ. ಮುಂದೆ ಜನಿಸುವವರೂ ಇರಬಹುದು. ಖ್ಯಾತನಾಮರು ಸತ್ತು ಸಹಸ್ರ ಸಹಸ್ರ ವರ್ಷಗಳು ಸಂದರೂ ಅವರ ಜಯಂತಿ, ತಿಥಿಗಳನ್ನು ಆಚರಿಸುತ್ತಾರೆ. ಅವರ ಬದುಕನ್ನು ಸರ್ವರೂ ಸ್ಮರಿಸುತ್ತಾರೆ. ಕುಖ್ಯಾತನೊಬ್ಬನು ಮೊನ್ನೆ ಮೊನ್ನೆವರೆಗೆ ಬದುಕಿದ್ದರೂ ಅವನ ಸಾವಿನೊಂದಿಗೆ ಅವನನ್ನು ಸಂಪೂರ್ಣವಾಗಿ ಮರೆಯುತ್ತಾರೆ.. ಹುಟ್ಟಿದ ಪ್ರತಿಯೊಬ್ಬನೂ ಖ್ಯಾತನಾಮನಾಗಲು ಅಸಾಧ್ಯ. ಆದರೆ ಕುಖ್ಯಾತ ನಾಮನಾಗದಂತೆ ಇರಲು ಸಾಧ್ಯವಿದೆ.
ಮುಂದಿನಿಂದ ನಡೆಯುವ ಎತ್ತನ್ನು ನೋಡಿಕೊಢು ಹಿಂದಿನಿಂದ ಸಾಗುವ ಎತ್ತು ತನ್ನ ಹೆಜ್ಜೆಗಳನ್ನು ಇರಿಸುತ್ತದೆ. ಮುಂದೆ ನಡೆಯುವ ಎತ್ತಿನ ತಪ್ಪು ಹೆಜ್ಜೆಗಳು ಹಿಂದಿನಿಂದ ಅನುಸರಿಸುವ ಎತ್ತುಗಳನ್ನು ಪ್ರಪಾತಕ್ಕೆ ಬೀಳಿಸುತ್ತವೆ. ನಮ್ಮನ್ನು ಅನುಸರಿಸಿ ಮುನ್ನಡೆಯುವ ಕೆಲವು ಜೀವಗಳಾದರೂ ಇದ್ದೇ ಇರುತ್ತವೆ. ಅವು ತಪ್ಪು ದಾರಿಯಲ್ಲಿ ಕ್ರಮಿಸದಂತಿರಲು ಹಿರಿಯನೆಂಬ ಕಾರಣಕ್ಕೆ ಮುಂದೆ ನಿಂತಿರುವ ನಾವು ಎಚ್ಚರಿಕೆಯಿಂದಿರಬೇಕು. ಇಂತಹ ಜಾಗೃತ ಸ್ಥಿತಿ ಪ್ರತಿಯೊಬ್ಬನಲ್ಲೂ ಇದ್ದರೆ ಪ್ರತಿಯೊಬ್ಬರೂ ಪ್ರಖ್ಯಾತ ನಾಮರಲ್ಲದಿದ್ದರೂ ಪ್ರಿಯನಾಮಿಗಳಾಗುವುದಂತೂ ಖಂಡಿತ.
ನಾವು ಜನಪ್ರಿಯರಾಗಬೇಕು. ಎಲ್ಲರ ಆಸೆ ಆಶಯಗಳಿಗೆ ಪೂರಕವಾಗಿ ಬದುಕನ್ನು ಸವೆಸಬೇಕು.

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....