ಮಹಾನ್ ಅಪ್ಪುಗಾತಿಯೇ ನಿನಗೆ ನಮೋ ನಮಃ

ಬಿರುಗಾಳಿಯ ಮೈ ಸವರಿ ತಂಗಾಳಿ ಬಾಚಿ ತಬ್ಬಿಕೊಂಡು ತಂಪೆರೆಯುವಂತೆ ನೀನು ಅಂದು ತಬ್ಬಿಕೊಂಡ ಕ್ಷಣವೇ ನನ್ನ ಎದೆಯ ಒಳಗೂಡಿನಲ್ಲಿ ಭೋರ್ಗರೆವ ಭಾವನೆಗಳ ಭೀಕರ ಪ್ರವಾಹವೇ ಹರಿದು ಬಂತು. ಹೊರನಾಡಿನ ಒಣ ಮೈ ಒಮ್ಮೆಲೇ ತತ್ತರಿಸಿ ಅರೆಕ್ಷಣ ಕಂಪಿಸಿ ಸ್ತಬ್ದವಾಯಿತು. ಆಗಲೇ ಅನಿಸಿತು ನನಗೆ ಆಲಿಕಲ್ಲು ಸಹಿತ ನರನಾಡಿಯ ಅಣು ಕಣದಲ್ಲಿಯೂ ಜೋರು ಸುರಿಮಳೆ ಸುರಿಯುವುದೆಂದು. ಆದರೆ ಅಂದೊಕೊಂಡಿರಲಿಲ್ಲ ತಿಳಿ ಹವೆ ಆವರಿಸಿಕೊಂಡು ನಾನು ಹೀಗೆ ಸಂತ್ರಸ್ತನಾಗುವೆನೆಂದು. ಯಾರು ಸೇರಿಸದೆ ಹೋದರೂ ಬದುಕುವ ದುರಾಸೆಯಿಂದ ತುರ್ತು ಚಿಕಿತ್ಸೆಗಾಗಿ ಸ್ಥಳಿಯ ಆಸ್ಪತ್ರೆಗೆ ಸೇರಿದೆ. ಆದರೆ ಅಲ್ಲಿ ಅವರು ನನಗೆ ಸರಿಯಾಗಿ ಪುನರ್ವಸತಿ ಕಲ್ಪಿಸಲೇ ಇಲ್ಲ. ಹೃದಯ ಬಡಿತದ ರೋಗಕ್ಕೆ ಏನೆಲ್ಲಾ ಮದ್ದು ನೀಡಿದರೂ ಅರೆ ಪ್ರಜ್ಞೆಯಲ್ಲೂ ಬೇಡವೆಂದು ಧೃಡವಾಗಿ ನಿರಾಕರಿಸಿದೆ. ಒಮ್ಮೊಮ್ಮೆ ಸ್ಪರ್ಶದ ಸಂವೇದನೆಯನ್ನೂ ಕಳೆದುಕೊಳ್ಳುತ್ತಿದ್ದ ನನಗೆ ಹಗಲಿರುಳು ಆರೈಕೆ ಮಾಡಿದರೂ ಹತ್ತಿರದವರು ರೋಗದ ಮೂಲ ತಿಳಿಯಲೇ ಇಲ್ಲ.
ಆತ್ಮೀಯತೆಯಿಂದ ಎಲ್ಲಾ ಬಗೆಯಲ್ಲೂ ಪ್ರಯತ್ನಿಸಿ ತಿಳಿದುಕೊಳ್ಳಲು ನನ್ನ ಮೌನವೊಂದೇ ಅವರಿಗೆ ಉತ್ತರವಾಗಿತ್ತು. ಸಮ್ಮೋಹಿನಿ ತಜ್ಞರು, ಅರವಳಿಕೆ ಪಂಡಿತರೂ ಬಂದಂತೆ ಸುಮ್ಮನಾಗಿ ಹೋದರು. ಆದರೆ ಅದೊಂದು ದಿನ ಆಸ್ಪತ್ರೆಯಲ್ಲಿ ನನ್ನ ಅಪ್ಪ ಅಮ್ಮನನ್ನು ತಬ್ಬಿಕೊಂಡು ಮಗನಿಗೆ ಏನು ಆಗಲ್ಲ ಎಂದು ಸಂತೈಸುತ್ತಿದ್ದ ಪರಿಯ ಕಂಡು ನಾನು ಉದ್ವೇಗಕ್ಕೆ ಒಳಗಾದೆ.
ಇದನ್ನು ಗಮನಿಸಿದ ಹಿರಿಯ ವೈದ್ಯರು ರಾತ್ರಿ ಪೂರ್ತಿ ನಿದ್ರೆಗೆಟ್ಟು ಚಿಂತಿಸಿ ಬೆಳಿಗ್ಗೆ ಎದ್ದು ಅರೆ ಬೆತ್ತಲೆಯಲ್ಲಿ ಓಡಿ ಬಂದ ವಿಷಯ ನನಗೆ ಮಧ್ಯಾಹ್ನ ತಲುಪಿತು. ಅಂದು ನನ್ನ ಕೋಣೆಯೊಳಗೆ ಬಂದು ಯಾರು ಯಾರಾರನ್ನೋ ಅಪ್ಪಿಕೊಂಡಂತೆ ನಟಿಸುವ ಪ್ರಯೋಗ ಮಾಡಿದರು. ಆಗ ನನ್ನ ಒದ್ದಾಟ, ಸ್ಪಂದಿಸಿದ ರೀತಿ ನೋಡಿ ಯಾವ ಕಾಯಿಲೆ ಎಂದು ಖಚಿತ ಪಡಿಸಿಕೊಂಡ ವೈದ್ಯರು ಗುಣಪಡಿಸಲು ನಿರ್ಧರಿಸಿದರು.
ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಹೃದಯ ಒತ್ತಡ, ಬಿಪಿ, ಮೈ ಬೇನೆ, ತಲೆ ನೋವು ಹೀಗೆ ಏನೇನೋ ಬಂದಿದೆ ಎಂದು ದೊಡ್ಡ ಪಟ್ಟಿಯನ್ನೇ ಮಾಡಿದ ಅವರು ಅಪ್ಪುಗೆಯ ಸಾಮರ್ಥ್ಯ ಕುರಿತು ದೊಡ್ಡ ಉಪನ್ಯಾಸವನ್ನೇ ನೀಡಿದರಂತೆ.
ಮರುದಿನ ನೋಡಿದರೆ ತಾಯಿ ಗಟ್ಟಿಯಾಗಿ ಅಪ್ಪಿಕೊಂಡು ತಲೆ ನೇವರಿಸಿ “ನನ್ನ ಮಗನೇ” ಎಂದು ಮುದ್ದಾಡಿ ಮಡಿಲಲ್ಲಿ ಮಲಗಿಸಿಕೊಂಡರು. ಆದರೆ ನನಗ ಆಗಲೂ ಮಮತೆಯ ಹಿತ ಆನುಭವ ಆಗಲೇ ಇಲ್ಲ. ನಂತರ ತಂದೆ ನನ್ನ ಕಂದ ಹಣ್ಣು ತಿಂತೀಯಾ ಎಂದು ಬಾಚಿ ಅಪ್ಪುಗೆ ಬಿಗಿಗೊಳಿಸಿದರೂ ನಾನು ಭದ್ರತೆಯ ಭಾವದಲ್ಲಿ ಮುಳುಗಲೇ ಇಲ್ಲ. ನೋಡ ನೋಡುತ್ತಿದಂತೆ ಅಣ್ಣ ತಂಗಿ, ಅಕ್ಕ ತಮ್ಮ ಒಬ್ಬರ ನಂತರ ಒಬ್ಬರು ಅಪ್ಪಿದರೂ ಪ್ರಯೋಜನವಾಗಲೇ ಇಲ್ಲ. “ಇವರಲ್ಲಿ ಇರದ ಅಂತಹ ಗುಣ ಏನಿತ್ತೆ ನಿನ್ನ ಅಪ್ಪುಗೆಯಲ್ಲಿ” ಇದು ನನ್ನನ್ನು ಇಂದಿಗೂ ಕಾಡುವ ಪ್ರಶ್ನೆ.
ಮತ್ತೆ ಮರುದಿನ ನೋಡಿದರೆ ಸಾಲಾಗಿ ನಿಂತ ಹರೆಯದ ತುಂಬು ಸುಂದರಿಯರು ಅನುಕಂಪದಿಂದ ನನ್ನ ಅಪ್ಪಿ ರೋಗ ಗುಣಪಡಿಸಲು ಸಿದ್ದರಾಗಿದ್ದರು. ಕೊನೆಗೆ ಇದು ಯಾವುದು ಫಲ ನೀಡದೆ ಹೈರಣಾದ ವೈದ್ಯರು ಇದಕ್ಕೆ ಅವಳೇ ಬರಬೇಕು ಎಂದರು. ಆದರೆ, ಯಾರವಳು??? ಯಾರಿಗೂ ಗೊತ್ತೇ ಆಗದ ಮಿಲಿಯನ್ ಡಾಲರ್ ಪ್ರಶ್ನೆ ಅವರಿಗೆ. ಪರಿಹಾರ ಸಿಗದೇ ಕಂಗೆಟ್ಟು “ನಮ್ಮಿಂದ ಇನ್ನೂ ಆಗಲ್ಲ, ನೀವೇ ಬದುಕಿಸಿಕೊಳ್ಳಿ” ಅಂತ ಹೇಳಿ ಮನೆಗೆ ಕಳಿಸಿ ಕೊಟ್ಟರು.
ಕೃತಕ ಬಿತ್ತನೆಗೆ ಬಗ್ಗದ ಅಪ್ಪುಗೆಗೆ ಕಪ್ಪು ಮೋಡ, ಬಿಳಿ ಮೋಡ ಪರಸ್ಪರ ಡಿಕ್ಕಿ ಹೊಡೆದರೆ ಸಾಲದಂತೆ, ಮಳೆಯಾಗಲು ಭೂಮಿಯ ಕಾವು, ಸಾಗರದ ನೀರು ಆವಿಯಾದಾಗ ಮಾತ್ರ ಮತ್ತೆ ಜಿಟಿ ಜಿಟಿ ಮಳೆ ಹನಿಯಲು ಸಾಧ್ಯ ಎಂದು ಈಗ ತಾನೇ ಹವಾಮಾನ ಕುರಿತು ಸುದ್ದಿ ನೇರ ಪ್ರಸಾರವಾಯಿತು. ಅಂತೆಯೇ ನನ್ನ ಮೈ ಮನದ ವಾತಾವರಣ ನಿನ್ನ ಅಪ್ಪುಗೆಯ ಬೆಚ್ಚನೆ ಬೆಸುಗೆ ಇರದೇ ಹೆಪ್ಪುಗಟ್ಟುತ್ತಾ ದಿನದಿಂದ ದಿನಕ್ಕೆ ತಳದಲ್ಲಿ ಹುದುಗುತ್ತಿದೆ. ಈಗಲಾದರೂ ನಿನ್ನ ಆ ಅಪ್ಪುಗೆಯ ಬಹು ದೊಡ್ಡ ಅಡ್ಡ ಪರಿಣಾಮವನ್ನು ಆರಿತು ಬಂದು ಗುಣಪಡಿಸಿ ಹೋಗು ನನ್ನ, ಇರು ಎಂದು ಕೇಳಲಾರೆ. ಆದರೆ ಇದು ಜೀವಿತಾವಧಿಯಲ್ಲಿ ವಾಸಿಯಾಗದ ಅತಿ ಸೂಕ್ಷ್ಮ ಭಾವನೆಗಳ ಮಿಡಿತವಂತೆ. ಆಗಾಗ ಬಾಂಧವ್ಯ ಬೆಸೆಯುವ ನಿನ್ನ ಅಪ್ಪುಗೆ ಔಷದಿಯಾಗಿ ನೀಡುತ್ತಿದ್ದರೆ ಕ್ರಮೇಣವಾಗಿ ನಿಯಂತ್ರಿಸಬಹುದಂತೆ… ಇರಲಿ, ಯಾವುದಕ್ಕೂ ಏನು ಅನ್ನೋದು ಒಮ್ಮೆ ಯೋಚಿಸು…
ನಿನ್ನ ಅಪ್ಪುಗೆಯ ಸಂತ್ರಸ್ತ

ಬಸವರಾಜ ಕಾಸೆ