Wednesday, October 18, 2023

ಸಿಲ್ಕ್ ರೂಟ್

Must read

ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪನವರ ‘ಸಾರ್ಥ’ ಕಾದಂಬರಿ ಓದಿದವರಿಗೆ ಪ್ರಾಚೀನ ಕಾಲದ ವಾಣಿಜ್ಯ ವ್ಯವಹಾರಗಳ ರೀತಿನೀತಿಗಳ ಒಂದು ಮಟ್ಟಿನ ಕಲ್ಪನೆ ಸಿಕ್ಕುತ್ತದೆ. ‘ಸಾರ್ಥ’ ಎಂದರೆ ವ್ಯಾಪಾರಿಗಳ ಸಂಚಾರಿ ಗುಂಪು. ಆನೆ, ಕುದುರೆ, ಒಂಟೆ ಮುಂತಾದ ಪ್ರಾಣಿಗಳೊಡನೆ ವ್ಯಾಪಾರಿಗಳು ತಮ್ಮ ವಾಣಿಜ್ಯ ಸರಕುಗಳನ್ನು ಗಾಡಿಗಳಲ್ಲಿ ಹೇರಿಕೊಂಡು ರಕ್ಷಕ ಭಟರನ್ನೂ ಒಳಗೊಂಡು ದೇಶದ ಉದ್ದಗಲಕ್ಕೆ ಮಾತ್ರವಲ್ಲದೆ ಕೆಲವೊಮ್ಮೆ ಪರದೇಶಗಳಿಗೂ ಹೋಗಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಇಂಥಾ ಸಾರ್ಥದ ಗುಂಪುಗಳಲ್ಲಿ ವಿವಿಧ ವೃತ್ತಿಗಳಿಗೆ ಸೇರಿದ ಜನರು, ತೀರ್ಥ ಯಾತ್ರೆ ಮಾಡುವ ಸಾಧು ಸಂತರು, ಬೇರೆ ಬೇರೆ ಸ್ಥಳಗಳಿಗೆ ಹೋಗುವ ಯಾತ್ರಾರ್ಥಿಗಳು, ವಿದ್ಯಾರ್ಜನೆಗಾಗಿ ಹೋಗುವ ವಿದ್ಯಾರ್ಥಿಗಳು.. ಹೀಗೆ ವಿವಿಧ ನಮೂನೆಯ ಜನರೂ ಇರುತ್ತಿದ್ದರು. ಕಳ್ಳರ ದರೋಡೆಕೋರರ ಭಯದಿಂದ ಮಕ್ಕಳ ಮಹಿಳೆಯರ ರಕ್ಷಣೆಗಾಗಿ ಜನರು ಇಂಥ ಸಾರ್ಥದ ಹಿಂದೆ ಪಯಣಿಸಿ ಊರು ಸೇರುವ ಪರಿಪಾಠವನ್ನು ಇರಿಸಿಕೊಂಡಿದ್ದರು. ಹಗಲಿಡೀ ನಡೆದು, ರಾತ್ರಿಯಾದ ಕೂಡಲೆ ನೀರಿನ ಸೌಲಭ್ಯವಿರುವಲ್ಲಿ ತಂಗಿ ತಮ್ಮ ಆಹಾರವನ್ನು ಬೇಯಿಸಿಕೊಂಡು, ಮರುದಿನ ಬೆಳಗ್ಗೆ ಪುನಃ ಪಯಣವನ್ನು ಮುಂದುವರೆಸುವ ನಮ್ಮ ದೇಶದೊಳಗಿನ ಇಂಥ ಸಾರ್ಥದ ಗುಂಪುಗಳಲ್ಲಿ ಮಿನಿ ಭಾರತವನ್ನೇ ಕಾಣಬಹುದಿತ್ತು. ಈ ಗುಂಪುಗಳು ವಸ್ತುಗಳ ಜೊತೆಗೆ ಧರ್ಮ, ರಾಜಕೀಯ, ಕಲೆ-ಸಂಸ್ಕೃತಿಗಳ ವಿನಿಮಯವನ್ನೂ ಮಾಡುತ್ತಿತ್ತು. ಇವುಗಳಿಗೆ ಸಾಗಲು ನಿರ್ದಿಷ್ಟ ದಾರಿಗಳೂ ಇರುತ್ತಿದ್ದವು. ಇಂಥಾ ಗುಂಪುಗಳಿಗೆ ಇಂಗ್ಲಿಷಿನಲ್ಲಿ ಕ್ಯಾರಾವಾನ್‌ಗಳು ಎನ್ನುತ್ತಾರೆ.
ಇಂಥದ್ದೇ ಒಂದು ಪ್ರಾಚೀನ ವಾಣಿಜ್ಯ ಮಾರ್ಗವಾಗಿ ನಾವು ’ಸಿಲ್ಕ್ ರೂಟ್’ ಅಥವಾ ’ಸಿಲ್ಕ್ ರೋಡ್’ನ್ನು ಗುರುತಿಸುತ್ತೇವೆ. ಇದು ಪೂರ್ವ ಪಶ್ಚಿಮ ದೇಶಗಳನ್ನು ಒಂದುಗೂಡಿಸುವ, ಹಾಗೆಯೇ ಭಾರತದ ಮೂಲಕ ಹಾದುಹೋಗುವ ಅಂತಾರಾಷ್ಟ್ರೀಯ ವಾಣಿಜ್ಯ ಮಾರ್ಗವಾಗಿದೆ. ಈ ಪ್ರಾಚೀನ ಮಾರ್ಗ ಕ್ರಿಸ್ತಪೂರ್ವ ಎರಡನೆಯ ಶತಮಾನದಿಂದ ಕ್ರಿಸ್ತಶಕ ಹದಿನಾಲ್ಕನೇ ಶತಮಾನದವರೆಗೆ ಚಾಲ್ತಿಯಲ್ಲಿತ್ತು ಎಂದು ತಿಳಿದುಬರುತ್ತದೆ. ಜರ್ಮನಿಯ ಖ್ಯಾತ ಭೂಗೋಳ ಶಾಸ್ತ್ರಜ್ಞ ಫರ್ಡಿನಾಂಡ್ ವೋನ್ ರಿಚ್‌ತೋಫನ್ ಈ ಮಾರ್ಗವನ್ನು’ಸಿಲ್ಕ್ ರೂಟ್’ ಎಂಬ ಹೆಸರಿನಿಂದ ಗುರುತಿಸುತ್ತಾನೆ. ಈ ವಾಣಿಜ್ಯ ಮಾರ್ಗವು ಚೀನಾದಿಂದ ಪ್ರಾರಂಭವಾಗಿ ಭಾರತದ ಮೂಲಕ ಹಾದು, ಏಷ್ಯಾ, ಈಜಿಪ್ಟ್‌ಗಳ ಮೂಲಕ ಆಫ್ರಿಕಾ ಖಂಡವನ್ನು ಪ್ರವೇಶಿಸಿ, ಗ್ರೀಸ್, ರೋಮ್ ಹಾಗೂ ಬ್ರಿಟನ್ನನ್ನು ಸಂಪರ್ಕಿಸುತ್ತಿತ್ತು. ಇದು ಈ ದೇಶಗಳ ನಾಗರಿಕತೆಯ ಅಭಿವೃದ್ಧಿಯಲ್ಲಿ ಅಂದರೆ ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಕಲೆ, ಭಾಷೆ.. ಇವುಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎನ್ನಬಹುದು. ಚೀನಾದ ರೇಶ್ಮೆಯ ಪ್ರಸಿದ್ಧಿಯಿಂದಾಗಿ ಹಾಗೂ ಅದುವೇ ಈ ಮಾರ್ಗದ ಅತ್ಯಂತ ದೊಡ್ಡ ವಾಣಿಜ್ಯ ಉತ್ಪನ್ನವಾದುದರಿಂದ ಈ ಮಾರ್ಗಕ್ಕೆ ’ಸಿಲ್ಕ್ ರೂಟ್’ ಎಂಬ ಹೆಸರಾಗುತ್ತದೆ. ಈ ಮಾರ್ಗದಲ್ಲಿ ವಸ್ತುಗಳು ಮಾತ್ರ ವಿನಿಮಯವಾಗಲಿಲ್ಲ, ಬದಲಿಗೆ ವೈಭವಯುತವಾದ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳೂ, ತಂತ್ರಜ್ಞಾನಗಳೂ, ವಿವಿಧ ವಿಚಾರಧಾರೆಗಳು ಹಾಗೆಯೇ ಅನೇಕ ರೋಗಗಳ ವಿನಿಮಯವೂ ಬಾರತ, ಪರ್ಷಿಯಾ, ಅರೇಬಿಯಾ, ಗ್ರೀಕ್, ರೋಮ್ ಈ ದೇಶಗಳ ನಡುವೆ ನಡೆಯಿತು. ರೇಶ್ಮೆ ಚೀನಾದಿಂದ ಪಶ್ಚಿಮಕ್ಕೆ ರಫ್ತಾದರೆ ತುಪ್ಪಳ, ಚಿನ್ನ, ಬೆಳ್ಳಿಗಳು ಪೂರ್ವದೆಡೆಗೆ ಬಂದವು. ಕ್ರಿಶ್ಚಿಂiiನ್ ಹಾಗೂ ಬೌದ್ಧ ಧರ್ಮಗಳೂ ವಿನಿಮಯಗೊಂಡವು. ಚೀನಾ ಹಾಗೂ ಮೆಡಿಟರೇನಿಯನ್ ಸಾಗರವನ್ನು ಸಂಪರ್ಕಿಸುವ ಈ ಮಾರ್ಗ ಸುಮಾರು ೬೪೪೦ ಕಿಲೋ ಮೀಟರ್‌ಗಳಷ್ಟು ಉದ್ದಕ್ಕೆ ಚಾಚಿಕೊಂಡಿದೆ. ಚೀನಾ ತನ್ನ ಉತ್ಪನ್ನಗಳ ರಕ್ಷಣೆಯ ಬಗ್ಗೆ ವಿಪರೀತ ಆಸಕ್ತಿವಹಿಸಿ ತನ್ನ ಮಹಾಗೋಡೆಯ ಉದ್ದವನ್ನು ಹೆಚ್ಚಿಸಿತು ಎನ್ನಲಾಗುತ್ತದೆ. ಜಗತೀಕರಣದ ಮೊದಲ ಹೆಜ್ಜೆಯಾಗಿ ಈ ಸಿಲ್ಕ್ ರೋಡು ಚರಿತ್ರೆಯಲ್ಲಿ ದಾಖಲಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ವಣಿಜರಿಗೆ ಅನೇಕ ತೊಂದರೆಗಳಿದ್ದವು. ಇದು ಮರುಭೂಮಿಯಲ್ಲಿ ಸಂಚರಿಸುವ ಅತ್ಯಂತ ದೂರವಾದ ಮಾರ್ಗವನ್ನು ಹೊಂದಿತ್ತು, ಇದರಿಂದ ಉಸುಕಿನ ಬಿರುಗಾಳಿಯಂತಹ ಅಪಾಯಕಾರಿ ವಿಕೋಪಗಳು ಜೊತೆ ಜೊತೆಗೇ ಹಸಿವು, ಬಾಯಾರಿಕೆಗಳೂ ಪ್ರಯಾಣಕ್ಕೆ ದೊಡ್ಡ ಮಟ್ಟಿನ ತೊಂದರೆಗಳನ್ನು ತಂದೊಡ್ಡುತ್ತಿದ್ದವು. ಹಾಗೆಯೇ ದರೋಡೆಕೋರರ ಹಾವಳಿಯೂ ಪ್ರಯಾಣಿಕರನ್ನು ಸತಾಯಿಸುತ್ತಿತ್ತು. ಹದಿನೈದನೇ ಶತಮಾನದಲ್ಲಿ ಯೂರೋಪಿನಿಂದ ಏಷ್ಯಾ ಖಂಡಕ್ಕೆ ಕಂಡುಹಿಡಿದ ಜಲಮಾರ್ಗವು ಕಡಿಮೆ ಖರ್ಚು ಹಾಗೂ ಕಡಿಮೆ ಅಪಾಯಕಾರಿಯಾದದ್ದರಿಂದ ಹೆಚ್ಚಿನ ವಾಣಿಜ್ಯ ಅದೇ ಮಾರ್ಗದಿಂದ ನಡೆಯುವಂತಾಯ್ತು. ಇದರ ಜೊತೆಗೆ ಈ ಮಾರ್ಗವು ಪ್ಲೇಗ್ ಬ್ಯಾಕ್ಟೀರಿಯಾಗಳನ್ನು ಹರಡಿ 14ನೇ ಶತಮಾನದ ಯೂರೋಪಿನ ’ಬ್ಲ್ಯಾಕ್ ಡೆಥ್’ಗೆ ಕಾರಣವಾಯಿತೆಂದೂ ತಿಳಿಯಲಾಗಿದೆ. ’ಒನ್ ಬೆಲ್ಟ್ ಒನ್ ರೋಡ್’ (ಒಬಿಒಆರ್) ಎಂಬ ಹೆಸರಿನಲ್ಲಿ ಚೀನಾ ಇದನ್ನು ಈಗ ಅಪಾರ ವೆಚ್ಛದೊಂದಿಗೆ ಅಭಿವೃದ್ಧಿಪಡಿಸಿದ್ದರಿಂದ ಅದಕ್ಕೆ ಸುಮಾರು ಅರುವತ್ತಕ್ಕಿಂತಲೂ ಹೆಚ್ಚು ದೇಶಗಳೊಂದಿಗೆ ಸಂಪರ್ಕಹೊಂದಲು ಸಾಧ್ಯವಾಗಿದೆ.

************


*- ರೇಶ್ಮಾ ಭಟ್

More articles

Latest article