ಭಾರತೀಯರು ತತ್ತ್ವಶಾಸ್ತ್ರ ಪ್ರಪಂಚಕ್ಕೆ ಕೊಟ್ಟ ಒಂದು ಅತ್ಯಮೂಲ್ಯವಾದ ಚಿಂತನೆಯೇ ಈ ‘ಸತ್ಯಂ ಶಿವಂ ಸುಂದರಂ’. ಮೇಲ್ನೋಟಕ್ಕೆ ಇದು ಯಾವ ಅರ್ಥವನ್ನು ಬಿಟ್ಟುಕೊಡದೆ ಬಿಡಿ ಬಿಡಿಯಾದ ಪದಗಳಾಗಿ ಉಳಿದುಬಿಡುತ್ತದೆ. ಆದರೆ ನಮ್ಮ ಅನೇಕ ತತ್ತ್ವಶಾಸ್ತ್ರಜ್ಞರು, ಸಂತರು ಇದರೊಳಗಿನ ಅರ್ಥವನ್ನು ಬಿಡಿಸಿ ತೋರಿಸಿದ್ದಾರೆ. ಹಾಗೆ ಬಿಡಿಸಿ ನೋಡಿದಾಗ ಇವುಗಳಿಗೆ ಇರುವ ಆಂತರಿಕ ಸಂಬಂಧದ ಅರಿವಾಗುತ್ತದೆ. ಹಾಗಿದ್ದರೆ ಒಂದೊಂದಾಗಿ ಈ ಮೂರು ಶಬ್ಧಗಳ ಅರ್ಥ ವಿವರಣೆಯನ್ನು ನೋಡೋಣ. ನಾನು ಇದಕ್ಕೆ ಓಶೋ ರಜನೀಶರ ಸರಳ ಸುಂದರ ವಿಶ್ಲೇಷಣೆಯನ್ನು ಆಯ್ದುಕೊಂಡಿದ್ದೇನೆ.
ಓಶೋರ ಪ್ರಕಾರ, ಮೊದಲನೆಯ ಪದ ‘ಸತ್ಯಂ’ ಎಂದರೆ ಸತ್ಯ (ಟ್ರುಥ್). ಇದು ನಾವೆಲ್ಲ ತಿಳಿದಿರುವ, ಮನುಷ್ಯನಿಂದ ಮನುಷ್ಯನಿಗೆ ಭಿನ್ನವಾಗಿರುವ ಅವರವರು ಕಂಡುಕೊಂಡ ಸತ್ಯವಲ್ಲ. ಬದಲಿಗೆ ಇದು ತನ್ನಿಂದ ತಾನೇ ಸತ್ಯವಾಗಿರುವಂಥದ್ದು (ರಿಯಾಲಿಟಿ). ಅಂ
ದರೆ ಓಶೋರ ಪ್ರಕಾರ ಈ ಸತ್ಯವನ್ನು ತಿಳಿದುಕೊಳ್ಳಲು ನಾವು ಮೊದಲಿಗೆ ಪೂರ್ತಿಯಾಗಿ ಶೂನ್ಯವಾಗಿರಬೇಕು(ಅಟ್ಟರ್ಲೀ ಆಬ್ಸೆಂಟ್). ಅಂದರೆ ನಾವು ಎಷ್ಟೋ ಪೂರ್ವಗ್ರಹಗಳಿಂದ ಪೀಡಿತವಾಗಿರುತ್ತೇವೆ…ಅದು ನಮ್ಮ ಮತ, ಪಂಥ, ಕುಲ, ಕುಟುಂಬ, ಧರ್ಮ ಇವೆಲ್ಲ ನಮ್ಮ ತಲೆಯಲ್ಲಿ ತುಂಬಿದ ವಿಚಾರಗಳಾಗಿರಬಹುದು ಅಥವಾ ನಮ್ಮ ಸಮಾಜ ನಮ್ಮಲ್ಲಿ ಬೆಳೆಸಿದ ವಿಷಯಗಳಿರಬಹುದು, ಅಥವಾ ನಮ್ಮ ಶಿಕ್ಷಣ ನಮಗೆ ಕಲಿಸಿದ ದೃಷ್ಟಿಕೋಣವಿರಬಹುದು. ಮೊದಲು ಇವುಗಳನ್ನೆಲ್ಲ ತಲೆಯಿಂದ ತೆಗೆದು ನಾವು ಸಂಪೂರ್ಣ ಖಾಲಿಯಾಗಬೇಕು. ಖಾಲಿಯಾಗುವುದು ಅಂದರೆ ಎಲ್ಲ ರೀತಿಯ ಪೂರ್ವಗ್ರಹಗಳಿಂದ ಮುಕ್ತನಾಗುವುದು. ಈಗ ನೀವು ಯಾವ ಧರ್ಮಕ್ಕೆ ಸೇರಿದವರೂ ಅಲ್ಲ ಯಾವ ಜಾತಿಗೆ ಸೇರಿದವರೂ ಅಲ್ಲ ಯಾವ ಸಮಾಜ- ದೇಶ- ಕಾಲಗಳಿಗೆ ಸೇರಿದವರೂ ಅಲ್ಲ. ಬೇರೆ ಕಡೆಯಿಂದ ತೆಗೆದುಕೊಂಡ ಯಾವ ಜ್ಞಾನಗಳೂ ಈಗ ನಮ್ಮಲ್ಲಿಲ್ಲ. ಈ ರೀತಿ ನಾವು ಖಾಲಿಯಾದ ನಂತರ ನಮಗೆ ಕಾಣುವ ನೋಟವಿದೆಯಲ್ಲ ಅದುವೇ ‘ಸತ್ಯ’. ಈಗ ನೀವು ನೀಲ ಆಕಾಶದಂತೆ, ಪೂರ್ತಿಯಾಗಿ ಶೂನ್ಯವಾಗಿರುವುದು ಅಥವಾ ಖಾಲಿಯಾಗಿರುವುದು ಅಂದರೆ ಅದುವೇ ನಮ್ಮ ನಿಜವಾದ ಇರುವಿಕೆಯಾಗುತ್ತದೆ ಅದುವೇ ಸತ್ಯ.(ದಿಸ್ ಆಬ್ಸೆನ್ಸ್ ಈಸ್ ಯುುವರ್ ರಿಯಲ್ ಪ್ರೆಸೆನ್ಸ್). ಯಾವ ಪೂರ್ವಗ್ರಹಗಳಿಲ್ಲದೆ ಇರುವಾಗ ನಾವು ಏನನ್ನು ನೋಡುತ್ತೇವೋ ಅದನ್ನು ನೋಡಿದಾಗ ನಮಗೆ ಏನು ಅನಿಸುತ್ತದೋ ಅದು ಸತ್ಯವೇ ಆಗಿರುತ್ತದೆ.
ಇನ್ನು, ‘ಶಿವಂ’ ಎಂದರೆ, ಸದ್ಗುಣ, ಒಳ್ಳೆಯದು, ಮೌಲ್ಯಯುತವಾದುದು, ಸುಗುಣವಾದುದು, ಆತ್ಯಂತಿಕವಾಗಿ ಮಂಗಳಕರವಾದುದು. ಮನುಷ್ಯ ಖಾಲಿಯಾಗುತ್ತಾ ಹೋದಂತೆ ಅಂದರೆ ಪೂರ್ವಗ್ರಹಗಳನ್ನು ಕಳೆದುಕೊಳ್ಳುತ್ತಿದ್ದಂತೆ ಅವನಿಗೆ ಸತ್ಯದ ಅನುಭವ ಆಗುತ್ತಾ ಹೋಗುತ್ತದೆ. ಹೀಗೆ ಅವನು ಬದುಕುವುದೇ ‘ಶಿವಂ’ ಎನಿಸಿಕೊಳ್ಳುತ್ತದೆ. ಅಂದರೆ ಸತ್ಯವನ್ನು ದರ್ಶಿಸಿದ ನಂತರ ಅವನು ಮಾಡುವ ಕ್ರಿಯೆಗಳೆಲ್ಲವೂ ‘ಶಿವಂ’ ಅನ್ನಿಸಿಕೊಳ್ಳುತ್ತದೆ. ಇದು ಪರಿಶುದ್ಧವಾದುದು, ದೈವಿಕವಾದುದು. ಈ ರೀತಿ ಸತ್ಯವನ್ನು ಅನುಭವಿಸುವ ಜೀವಾತ್ಮನಿಂದ ಈ ಜಗತ್ತು ದಿವ್ಯವಾದುದು ಎನಿಸಿಕೊಳ್ಳುತ್ತದೆ.
‘ಸುಂದರಂ’ ಎಂದರೆ ಸಹಜವಾಗಿಯೇ ಸುಂದರವಾಗಿರುವುದು. ಸುಂದರವಾದ ಆಕಾಶ, ಹಕ್ಕಿಗಳು, ಹೂವುಗಳು ಇವೆಲ್ಲವೂ ಸುಂದರವಾದ ಪ್ರಪಂಚದ ಅರಿವನ್ನು ನಮಗೆ ಮೂಡಿಸುತ್ತದೆ. ಆದರೆ ಯಾರು ಪೂರ್ತಿಯಾಗಿ ಜೀವನಕ್ಕೆ ತೆರೆದುಕೊಂಡು ಅದು ಎಲ್ಲಿಗೆ ಕರೆದುಕೊಂಡು ಒಯ್ಯುತ್ತದೋ ಅಲ್ಲಿಗೆ ಹೋಗಲು ಯಾವ ಭಯವೂ ಇಲ್ಲದೆ ತಯಾರಾಗಿ ಇರುವರೋ ಅವರು ಮಾತ್ರ ಈ ಸುಂದರವಾದುದನ್ನು ಅನುಭವಿಸುವ ಯೋಗ್ಯತೆಯನ್ನು ಉಳ್ಳವರಾಗಿರುತಾರೆ. ತಾನು ಖಾಲಿಯಾಗಿ ಎಲ್ಲವನ್ನು ಅವುಗಳು ಇರುವಂತೆಯೇ ಸ್ವೀಕರಿಸಲು ಯಾರು ತಯಾರಾಗಿರುತ್ತಾನೋ ಅಂಥವನು ಜಗತ್ತಿನ ನಿಜವಾದ ಸತ್ಯಾನ್ವೇಷಕನಾಗಿರುತ್ತಾನೆ.
ಸತ್ಯವೇ ಅನುಭವವಾದಾಗ, ಈ ಅನುಭವದ ಫಲವಾದ ಕ್ರಿಯೆಯೇ ಮಂಗಳಕರವಾಗಿರುತ್ತದೆ(ಶಿವಂ). ಈ ಸತ್ಯವನ್ನು ಅನುಭವಿಸಿದವನ ಪ್ರಜ್ಞೆ ಅರಳುವುದೇ ಸೌಂದರ್ಯ. ಇವು ಮೂರೂ ಅಧ್ಯಾತ್ಮದ ಹಾದಿಯಲ್ಲಿ ಹೋಗುವವನಿಗೆ ಮಾತ್ರವೇ ಅಲ್ಲ; ಸಾಮಾನ್ಯ ಜೀವಿಯೂ ಅರಿತುಕೊಳ್ಳಬೇಕಾದ ಮೂಲಭೂತ ಹಾಗೂ ಆತ್ಯಂತಿಕವಾದ ಅಂಶಗಳು.
*** **** ***

*- ರೇಶ್ಮಾ ಭಟ್

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here