’ ಇಲ್ಲಿ ಬೆಂಗಾಡಲ್ಲಿ ಹಸಿರ ಮರದಡಿಯಲ್ಲಿ ನಾನು
ಜತೆಗೆ ರೊಟ್ಟಿಯ ಗಂಟು, ಬಾಟಲಿ ಮದ್ಯ, ಕವಿತೆಯ ಕಟ್ಟು
ಬದಿಯಲ್ಲಿ ಹಾಡ ಗುನುಗುನಿಸಿರುವ ನೀನು
ಈ ಬೆಂಗಾಡು ಯಾವ ಸ್ವರ್ಗಕ್ಕೆ ತಾನೆ ಕಡಿಮೆ ಹೇಳು!’
ಇದು ಫಾರಸೀ ದಾರ್ಶನಿಕ ಕವಿ ಉಮ್ರ್ ಖಯ್ಯಾಮನ ರೂಬಾಯಿಯ ಸಾಲುಗಳು. ಉಮ್ರ್ ಖಯ್ಯಾಮಿನ ಹೆಸರು ಕೇಳದ ಸಾಹಿತ್ಯಪ್ರಿಯರು ಇರಲಾರರು. ಬೈಬಲ್ ಹಾಗೂ ಶೇಕ್ಸಪೀಯರ್‌ನ ನಂತರ ಜಗತ್ತಿನ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರುವ ಕವಿ ಇವನು. ಕನ್ನಡಿಗರಿಗಂತೂ ಈ ಹೆಸರು ಹೊಸತೇನಲ್ಲ. ೧೯೩೦ರಷ್ಟು ಹಿಂದೆಯೇ ಅಂದರೆ ಕನ್ನಡ ಸಾಹಿತ್ಯದ ನವೋದಯದ ಆರಂಭದ ಕಾಲದಲ್ಲಿಯೇ ಡಿ.ವಿ.ಜಿಯವರು ’ಉಮರನ ಒಸಗೆ’ ಎಂಬ ಹೆಸರಿನಲ್ಲಿ ಒಟ್ಟು ೧೭೨ ರೂಬಾಯಿಗಳನ್ನು ಅನುವಾದ ಮಾಡಿ ಕನ್ನಡಿಗರಿಗೆ ಈ ದಾರ್ಶನಿಕನನ್ನು ಪರಿಚಯಿಸಿದರು. ಡಿ.ವಿ.ಜಿಯವರ ಈ ಅನುವಾದ ಈವರೆಗೆ ಸುಮಾರು ಎಂಟು ಮುದ್ರಣಗಳನ್ನು ಕಂಡಿದೆ.
ಉಮ್ರ್ ಖಯ್ಯಾಮ್ ಹುಟ್ಟಿ ಬೆಳೆದದ್ದು ಬಾಳಿದ್ದು ಎಲ್ಲವೂ ಪರ್ಶಿಯಾ ದೇಶದಲ್ಲೆ. ಧಾರ್ಮಿಕ ಪದ್ಧತಿಯ ’ಮದರಸಾ’ ಶಿಕ್ಷಣ ಪಡೆದಿದ್ದರೂ ನಿರೀಶ್ವರವಾದ, ಭೋಗವಾದಗಳನ್ನು ಎತ್ತಿಹಿಡಿದ ಕವಿ. ಅಷ್ಟೇ ಅಲ್ಲ ಈತ ಒಬ್ಬ ಶ್ರೇಷ್ಟ ಗಣಿತಜ್ಞ ಹಾಗೂ ವಿಜ್ಞಾನಿ ಎಂಬುದು ಅನೇಕರಿಗೆ ಗೊತ್ತಿಲ್ಲದ ಸಂಗತಿ. ಖಯ್ಯಾಮ್ ತಾನು ದೊಡ್ಡ ಕವಿಯಾಗಬೇಕೆಂದು ಕವಿತೆ ಬರೆದವನಲ್ಲ. ಅದು ಅವನ ಆಂತರಿಕ ಒತ್ತಡಗಳ ಫಲ. ಪರ್ಶಿಯಾ ಆ ಕಾಲದಲ್ಲಿ ರಾಜಕೀಯದೊಂದಿಗೆ ಧiವನ್ನು ಸೇರಿಸಿಕೊಂಡು ತತ್ತರಿಸಿಹೋಗಿತ್ತು. ಕೊಲೆ, ಅರಾಜಕತೆ ಮುಂತಾದವುಗಳು ಸಾಮಾನ್ಯ ಸಂಗತಿ ಎಂಬಂತಾಗಿತ್ತು. ಅಭಿಪ್ರಾಯ ಸ್ವಾತಂತ್ರ್ಯ, ಮುಕ್ತ ಚಿಂತನೆಗೆ ಅವಕಾಶವಿರಲಿಲ್ಲ. ಈ ವಿಷಯಗಳು ಖಯ್ಯಾಮನ ಮನಸ್ಸಿನಲ್ಲಿ ಒಂದು ರೀತಿಯ ಒತ್ತಡವನ್ನು ನಿರ್ಮಿಸಿರಬಹುದೆಂದು ಊಹಿಸಬಹುದು.
’ಹೋಯ್ತೆಲ್ಲಿ ಇರಾಮ್ ನಗರ? ಅದರೆಲ್ಲ ಗುಲಾಬಿಗಳು?
ಜಮ್‌ಶೆದ್‌ನ ಏಳುಸುತ್ತಿನ ಬಟ್ಟಲೆಲ್ಲಿದೆಯೆಂದು ಯಾರು ಬಲ್ಲರು?’
’ತೆಗೆಯಣ್ಣ ಬಾಗಿಲನು ನಾವಿಲ್ಲಿ ತಂಗುವುದು ಕೆಲ ಘಂಟೆ ಮಾತ್ರ’
’ಕೆಲವರನ್ನುತ್ತಾರೆ, ಬಲು ಸೊಗಸು ಈ ಮರ್ತ್ಯಸಾಮ್ರಾಜ್ಯ!
ಮತ್ತೆ ಕೆಲವರಿಗೆ, ಬರಲಿರುವ ಸ್ವರ್ಗ ನಿಜವಾಗಿ ಭವ್ಯ!
ಓ, ಅಂಗೈಯಲ್ಲಿರುವ ನಗದನ್ನು ಉಳಿಸಿಕೋ ಭದ್ರ,
ಉಳಿದಿದ್ದನೊದೆ ಆಚೆ. ದೂರದ ನಗಾರಿಯ ಮೊರೆತ ಬಲು ಮೆರೆತ!’
ಧರ್ಮಾಂಧ ದೇಶದಲ್ಲಿ ಖಯ್ಯಾಮ ಬರೆದ ರೂಬಾಯಿಯೊಂದನ್ನು ನೋಡಿ, ಇದಕ್ಕೆಷ್ಟು ಧೈರ್ಯಬೇಕೆಂಬುವುದು ಈಗ ನಮ್ಮ ಊಹೆಗೆ ನಿಲುಕಲಾರದು.
’ಮೃತ್ಯುಲೋಕದ ದಾರಿಯಲ್ಲೊಂದು ಗುಡಾರ.
ಅಲ್ಲಿ ಸುಲ್ತಾನನಿಗೆ ಒಂದು ದಿನದ ಬಿಡಾರ.
ಎದ್ದ ಸುಲ್ತಾನ, ಬಿತ್ತವನ ತಲೆಗೆ ಕಾಳದೂತನ ಪೆಟ್ಟು.
ಸಜ್ಜಾಯಿತೀಗ ಮುಂದಿನತಿಥಿಗೆ ಜಾಗ.’
ಈ ಮೇಲಿನ ಸಾಲುಗಳೆಲ್ಲ ಜೀವನದ ಕ್ಷಣಿಕತೆಯನ್ನೂ, ಧರ್ಮದ ಸಂಕುಚಿತತೆಯನ್ನೂ ಜೊತೆ ಜೊತೆಯಾಗಿ ಹೇಳುತ್ತವೆ. ನಾಲ್ಕು ದಿನ ಇದ್ದು ಮಣ್ಣಾಗುವ ಈ ದೇಹಕ್ಕೆ ಅಧಿಕಾರದ ಹಂಬಲವೇಕೆ? ಸಿಂಹಾಸನದ ಮೋಹವೇಕೆ? ಇಷ್ಟೆಲ್ಲ ರಕ್ತಪಾತಗಳೇಕೆ? ಕಾದಾಟ ಕೊಲೆಗಳೇಕೆ? ಇದು ಖಯ್ಯಾಮ್ ತನ್ನ ಕಾವ್ಯದಲ್ಲಿ ಎತ್ತುವ ಸಾಮಾನ್ಯ ಪ್ರಶ್ನೆಗಳು. ಅಷ್ಟೇ ಅಲ್ಲ ಇಂಥಾ ವಿಷಯಗಳನ್ನು ಮೊತ್ತ ಮೊದಲ ಬಾರಿಗೆ ಕವಿತೆಯಲ್ಲಿ ತಂದು ಪ್ರಭುತ್ವವನ್ನು ತಣ್ಣಗೆ ಪ್ರಶ್ನಿಸಿದವನು. ತನಗೆ ಸರಿಯೆನಿಸದ ವಿಷಯಗಳನ್ನು ಪ್ರಪಂಚಕ್ಕಲ್ಲದಿದ್ದರು ತನಗಾಗಿಯಾದರೂ ಹೇಳಿಕೊಂಡು ಹಗುರಾಗುವ ಅಗತ್ಯ ಅವನಿಗಿತ್ತು. ಇದೇ ಸಮಯದಲ್ಲಿ ತನ್ನ ಸ್ನೇಹಿತ, ಆಶ್ರಯದಾತ ನಿಜಾಮ್-ಉಲ್-ಮುಲ್ಕ್‌ನ ಕೊಲೆಯಾಗಿದ್ದು ಅವನ ಜೀವನದಲ್ಲಿ ಮರೆಯಲಾರದ ನೋವನ್ನು ಉಂಟುಮಾಡಿತ್ತು. ದೇವರು, ಧರ್ಮದ ವಿಷಯದಲ್ಲಿ ನಾಸ್ತಿಕನಾದರೂ ಖಯ್ಯಾಮ್ ಕೊರಾನನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ. ಸಂದೇಹಗಳ ಪರಿಹಾರಕ್ಕಾಗಿ ಪಂಡಿತರು ಖಯ್ಯಾಮನಲ್ಲಿಗೆ ಬರುತ್ತಿದ್ದರು! ಇವನು ಸುಮಾರು ಎಷ್ಟು ರೂಬಾಯಿಗಳನ್ನು ರಚಿಸಿರಬಹುದೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಯಾಕೆಂದರೆ ಅವನು ಅದನ್ನು ಯಾವತ್ತೂ ಬರೆದಿಡದ ಕಾರಣ ಅವು ಬಾಯಿಯಿಂದ ಬಾಯಿಗೆ ಹರಡಿ ಉಳಿದುಕೊಂಡವು, ಹಾಗೆಯೇ ಕೆಲವು ಕಳೆದುಹೋದವು, ಕೆಲವು ತಮ್ಮ ಮೂಲ ರೂಪವನ್ನು ಬದಲಿಸಿಕೊಂಡವು.
ಮದ್ಯ, ಕವಿತೆ, ಪ್ರಿಯತಮೆ, ಸ್ನೇಹಿತರು ಇದರಲ್ಲಿ ಸಂತೋಷಪಡು ಎನ್ನುವ ಖಯ್ಯಾಮ್ ಒಬ್ಬ ಭೋಗವಾದಿ, ಜಗತ್ತಿನ ರಹಸ್ಯವನ್ನು ಅರಿಯಲು ಸಾಧ್ಯವಿಲ್ಲ ಎನ್ನುವ ಸಂದೇಹವಾದಿ, ಎರಡು ಶೂನ್ಯಗಳ ಮಧ್ಯೆ ನೀನಿದ್ದೀಯೆ ಆ ಶೂನ್ಯಗಳ ನಡುವೆ ಇರುವುದೂ ಶೂನ್ಯವೇ ಎನ್ನುವ ನಿರೀಶ್ವರವಾದಿ, ಸತ್ತ ನಂತರ ಪುನರ್ಜನ್ಮ ಇಲ್ಲ, ನಾವು ಸತ್ತು ಮಣ್ಣಾದ ಮೇಲೆ ನಮ್ಮ ಮಣ್ಣಿಂದಲೇ ಸಸ್ಯಾದಿಗಳು ಹುಟ್ಟುತ್ತವೆ ಎನ್ನುವ ವಾಸ್ತವವಾದಿ. ಮೊಗೆದಷ್ಟೂ ತೆಗೆಯಬಹುದಾದ ಖಯ್ಯಾಮನ ದರ್ಶನವನ್ನು ಆತನ ಕಾಲಘಟ್ಟದೊಂದಿಗೆ, ಅದರ ವಿಕ್ಷಿಪ್ತತೆಯೊಂದಿಗೆ ನೋಡಿದರೆ ಅವುಗಳ ಮಹತ್ವ ಅರಿವಾಗುತ್ತದೆ. ಕವಿತೆಗಾಗಿ ಕವಿತೆ ಬರೆದವನಲ್ಲವಾದ್ದರಿಂದ ಅವುಗಳಲ್ಲಿ ಯಾವುದೇ ಆಡಂಬರ ಇಲ್ಲ.
’ಹಗಲುರಾತ್ರಿಗಳ ಚದುರಂಗದ ಹಾಸು ಇದು ಬದುಕು.
ನಾವು ಮಾನವರು ಆಟದ ಕಾಯಿ, ದೈವ ಆಡುವುದು ಆಟ.
ಅತ್ತಿಂದಿತ್ತ ಚಲಿಸುವುದು, ಕೂಡುವುದು, ಕೊಲ್ಲುವುದು.
ಆಮೇಲೆ ಒಂದೊಂದಾಗಿ ವಾಪಾಸ್ಸು ತುಂಬುವುದು ಕಾಲದ ಕಾಯಭರಣಿಗೆ.’
ಇದು ಉಮ್ರ್ ಖಯ್ಯಾಮನ ದರ್ಶನ. ಇಲ್ಲಿ ದೈವ ಎನ್ನುವುದು ವಿಧಿಯನ್ನು.
’ಕುಡಿಯುವುದು ಖುಷಿಯಿಂದಿರುವುದು-ಇವು ನನ್ನ ನೇಮಗಳು.
ಇನ್ನು ನನ್ನ ಧರ್ಮ-ಧರ್ಮ ಅಧರ್ಮಗಳಿಂದ ಸ್ವತಂತ್ರನಾಗಿರುವುದು.
ನಿನ್ನ ವಧುದಕ್ಷಿಣೆಯೇನೆಂದು ಕಾಲವಧುವನ್ನು ಕೇಳಿದೆ.
ಅವಳಂದಳು-ನಿನ್ನ ಖುಷಿಹೃದಯ ಅಷ್ಟೇ.’
ಖಯ್ಯಾಮನ ಕಾವ್ಯವನ್ನು ಓದುತ್ತಾಹೋದಂತೆಲ್ಲ ಬದುಕುವುದು ಎಷ್ಟು ಸುಲಭ ಅನ್ನಿಸಿಬಿಡುತ್ತದೆ. ಹಾಗೆಯೇ ಅವನು ನಮ್ಮ ಆತ್ಮೀಯರಲ್ಲಿ ಆತ್ಮೀಯ ಅನ್ನಿಸಿಕೊಳ್ಳುತ್ತಾನೆ. ಧರ್ಮ ಅಧರ್ಮಗಳಿಂದ ಸ್ವತಂತ್ರನಾದ ಮಾನವನ ಜೀವಿತ ಎಷ್ಟೊಂದು ಸ್ವತಂತ್ರ ಎನ್ನುವ ಬಿಡುಗಡೆಯ ಭಾವ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ.
ಖಯ್ಯಾಮ್ ತನ್ನ ಕಾವ್ಯಕ್ಕೆ ಆರಿಸಿಕೊಂಡದ್ದು ’ರು-ಬಾಯಿ’ ಎಂಬ ಛಂದೋಪ್ರಕಾರವನ್ನು. ಇದು ಮೂಲತಃ ಫಾರಸಿಯ ನಾಲ್ಕು ಸಾಲಿನ ಪದ್ಯ, ನಮ್ಮ ಚೌಪದಿಯಂತೆ. ಇದರಲ್ಲಿ ಮಾತ್ರೆ, ಪ್ರಾಸಗಳ ಲೆಕ್ಕಾಚಾರವೂ ಇದೆ. ಖಯ್ಯಾಮನಿಗಿಂತಲೂ ಹಿಂದೆ ಕೆಲವು ಸೂಫಿ ಕವಿಗಳು ಇದನ್ನು ಬಳಸಿದ್ದರು. (ಇಲ್ಲಿ ನಾನು ಬಳಸಿಕೊಂಡ ರೂಬಾಯಿಗಳನ್ನು ಶಾ. ಬಾಲುರಾವ್ ಅವರ ಅನುವಾದದಿಂದ ತೆಗೆದುಕೊಂಡದ್ದು) ಕೊನೆಯದಾಗಿ ಉಮ್ರ್ ಖಯ್ಯಾಮನ ಒಂದು ರುಬಾಯಿಯೊಂದಿಗೆ ಇದನ್ನು ಮುಗಿಸುತ್ತಿದ್ದೇನೆ.
’ನಾವಿಲ್ಲಿ ನದಿಯ ಬದಿ ಹಸಿರು ಚಿಗುರೊಡೆದ
ಸುಂದರ ಸುಪರ್ಣಿಯ ಮೇಲೆ ಮೈ ಚಾಚಿದ್ದೇವೆ.
ಕೊಂಚ ಮೆಲ್ಲಗೆ ಒರಗು ಪ್ರಿಯೆ, ಯಾರು ಬಲ್ಲರು
ಯಾವ ಜನ್ಮದ ಮಧುರ ತುಟಿಯಿಂದ ಹೊರಟಿದೆಯೋ ಏನೋ ಆ ಹಸಿರು!’
ಹುಲ್ಲಿಗೂ ನೋವಾಗದಂತೆ ಇಲ್ಲಿ ಬದುಕಬೇಕು ಎನ್ನುವುದು ಆತನ ಕಾವ್ಯಗಳು ನಮಗೆ ತೋರುವ ಜೀವನ ದರ್ಶನ.
** ** ** **

– ರೇಶ್ಮಾ ಭಟ್.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here