Saturday, April 6, 2024

ಗೋಳದ ಮೇಲೊಂದು ನೆಲೆಯಿಲ್ಲದವರ ಗೋಳು

ನಿರಾಶ್ರಿತರೆಂದರೆ ನಮ್ಮಲ್ಲಿ ಕೆಲವರಿಗೆ ಕಣ್ಣು ತುಂಬಿ ಮನ ತುಂಬಿ ಕೊರಳ ಸೆರೆ ಉಬ್ಬಿ ಬರುತ್ತದೆ. ಆಶ್ರಯ ಇಲ್ಲದವರಿಗಾಗಿ ಮನಸ್ಸು ಮಿಡಿಯುವುದು ಮಾನವೀಯತೆಯ ಲಕ್ಷಣವೇ ಹೌದು. ಆದರೆ ಪ್ರಪಂಚದ ನಿರಾಶ್ರಿತರೆಲ್ಲರಿಗೂ ನಮ್ಮ ಮನೆಯಲ್ಲೇ ಆಶ್ರಯ ಕಲ್ಪಿಸುತ್ತೇವೆ ಎಂದು ಹೊರಡುವುದು ಎಷ್ಟು ಸರಿ? ಚೀನಾ ಟಬೇಟನ್ನು ಆಕ್ರಮಿಸಿಕೊಂಡಾಗ ಆಶ್ರಯವಿಲ್ಲದ ಟಬೇಟಿಯನ್ನರನ್ನು ಭಾರತ ಮುಕ್ತ ಹೃದಯದಿಂದ ಸ್ವಾಗತಿಸಿ ಆಶ್ರಯ ನೀಡಿತು. (ಇದರ ಹಿಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ, ನೊಬೆಲ್ ನಂತಹ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಹುನ್ನಾರಗಳು, ಸ್ವಾರ್ಥ ಲಾಲಸೆಗಳು ಇತ್ತೆಂಬುದು ಸುಳ್ಳಲ್ಲ.) ಇಲ್ಲಿಗೆ ಬಂದ ಟಿಬೇಟಿಯನ್ನರಿಗೆ ಫಲವತ್ತಾದ ಕೃಷಿ ಭೂಮಿಗಳನ್ನು ನೀಡಲಾಯಿತು. ಅವರದ್ದೇ ಆದ ಸ್ರಾಮಾಜ್ಯವನ್ನು ಅವರು ಅಲ್ಲಿ ನಿರ್ಮಿಸಿಕೊಂಡರೇ ಹೊರತು ಭಾರತೀಯರಾಗಿ ನಮ್ಮೊಡನೆ ಬೆರೆತರೇ? ನಮ್ಮ ನೆಲದ ಭಾಷೆಗಳನ್ನು ಕಲಿತರೇ? ಭಾರತದ ಬಗ್ಗೆ ಭಾರತೀಯರ ಬಗ್ಗೆ ಒಂದಿನಿತು ಕೃತಜ್ಞತೆಯಾದರೂ ಅವರ ಮನದ ಮೂಲೆಯಲ್ಲಿ ಇದೆಯೇ? ಅವರ ಹುಟ್ಟೂರಾದ ಟಿಬೇಟಿನಂತೆ ಮೋನೆಸ್ಟರಿಗಳನ್ನು ನಿರ್ಮಿಸಿಕೊಂಡು, ಬೇಕಾದ ಆಹಾರ ಬೆಳೆದುಕೊಂಡು, ಟಿಬೇಟ್ ಅನ್ನುವ ಭಾವನೆಯಿಂದಲೇ ಅವರು ಇಲ್ಲಿ ಬದುಕುತ್ತಿದ್ದಾರೆ. ಅವರಿಗೆ ಮತದಾನದ ಹಕ್ಕು ಇತ್ಯಾದಿಗಳನ್ನು ಕೊಟ್ಟಿದ್ದರೆ ಆಗ ಅವರಿಗೆ ಈ ನೆಲದ ಮೇಲೆ ಪ್ರೀತಿ ಬೆಳೆಯುತ್ತಿತ್ತು ಇತ್ಯಾದಿಯಾಗಿ ನಮ್ಮ ಬುದ್ಧಿಜೀವಿಗಳು ವಾದಿಸಬಹುದು. ಮಾಯನ್ಮಾರ್ ದೇಶವು ರೊಹಿಂಗ್ಯಾಗಳನ್ನು ಹೊದಬ್ಬಿದಾಗಲೂ ನಮ್ಮ ದೇಶದಲ್ಲಿ ಗ್ಯಾಲನ್‌ಗಟ್ಟಲೆ ಕಣ್ಣೀರು ಹರಿದಿತ್ತು ಎಂಬುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಭಾರತದಲ್ಲಿ ರೋಹಿಂಗ್ಯಾಗಳು ಹಕ್ಕು ಸ್ಥಾಪಿಸಲು ನ್ಯಾಯಾಲಯದ ಮೊರೆ ಹೋಗಿರುವುದನ್ನೂ ನಾವು ನೆನಪು ಮಾಡಿಕೊಳ್ಳಬಹುದು.
ಈಗ ಬಾಂಗ್ಲಾದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ನಿರಾಶ್ರಿತರ ಬಗ್ಗೆ ಕೆಲವರ ಕೊರಳ ಸೆರೆ ಉಬ್ಬಿ ಬರುತ್ತಿದೆ. ನಮ್ಮದು ವಸುಧೈವ ಕುಟುಂಬಕಂ ಅನ್ನುವ ಸಂಸ್ಕೃತಿ ಹಾಗಾಗಿ ಅವರನ್ನು ಹೊರದಬ್ಬಬಾರದು; ಅದು ನಮ್ಮ ಪರಂಪರೆ ಅಲ್ಲ ಎಂದು ಮುಂತಾಗಿ ವಾದಗಳು ಈಗ ಶುರುವಾಗಿವೆ. ಭಾರತಕ್ಕಿಂತ ಎಷ್ಟೋ ಪಾಲು ದೊಡ್ಡ ಭೂ ಭಾಗವನ್ನೂ, ಸಂಪನ್ಮೂಲವನ್ನೂ, ಅತ್ಯಂತ ಕಡಿಮೆ ಜನಸಂಖ್ಯೆಯನ್ನೂ ಹೊಂದಿರುವ ಶ್ರೀಮಂತ ದೇಶಗಳೇ ಈ ಅಕ್ರಮ ವಲಸಿಗರ ಬಗೆಗೆ ಕಠಿಣವಾಗಿ ವರ್ತಿಸುತ್ತಿರುವಾಗ ಭಾರತದಂತಹ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವೊಂದರ ವರ್ತನೆ ಹೇಗಿರಬೇಕು ಎಂಬುದನ್ನು ಹೇಳಬೇಕಾಗಿಲ್ಲ. ಭಾರತದ ನೆಲವೇ ತುಂಡಾಗಿ ಪಾಕಿಸ್ತಾನ, ಬಾಂಗ್ಲಾ ಆಗಿದೆ ಎಂಬ ಸತ್ಯವನ್ನೂ ನಾವು ಮರೆಯುವಂತಿಲ್ಲ. ಬಂದ ವಲಸಿಗರನ್ನೆಲ್ಲ ಮಾನವೀಯತೆಯಿಂದ ಒಳ ಕರೆದುಕೊಂಡರೆ ಮುಂದೊಂದು ದಿನ ನಮ್ಮ ದೇಶ ತನ್ನ ಇನ್ನೊಂದು ತುಂಡನ್ನು ಕಳೆದುಕೊಳ್ಳಲಾರದು ಎಂದು ಹೇಳುವುದಾದರು ಹೇಗೆ? ವಲಸಿಗರನ್ನು ಹೊರದಬ್ಬಲು ಎನ್‌ಆರ್‌ಸಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್) ಪರಿಷ್ಕೃತ ಪಟ್ಟಿ ಬಿಡುಗಡೆಗೆ ಪಶ್ಚಿಮ ಬಂಗಾಳ ಸರಕಾರದ ಸಹಕಾರ ಇಲ್ಲದೆ ಇರುವುದು ರಾಜಕೀಯ ನಾಯಕರ ಸ್ವಾರ್ಥದ ಪರಮಾವಧಿಗೆ ಒಂದು ಉದಾಹರಣೆ. ಮತಬ್ಯಾಂಕ್ ರಾಜಕೀಯ ನಮ್ಮ ದೇಶಕ್ಕೆ ಹೊಸತಲ್ಲ ಆದರೂ ಚರಿತ್ರೆಯಿಂದ ಪಾಠ ಕಲಿಯದೆ ಬರಿಯ ಮತಬ್ಯಾಂಕ್ ನಿರ್ಮಾಣಕ್ಕೆ ಈ ರೀತಿಯ ಅಪಾಯಕಾರಿ ನಿಲುವು ತೆಗೆದುಕೊಳ್ಳುವ ರಾಜಕೀಯ ಮುತ್ಸದ್ದಿಗಳ ಬಗ್ಗೆ ಏನು ಹೇಳೋಣ? ನಲವತ್ತು ಲಕ್ಷ ಜನರಲ್ಲಿ ಶೇಕಡಾ ಒಂದರಷ್ಟು ಜನ ಮಾತ್ರ ವಲಸಿಗರು ಎಂದು ಅಲ್ಲಿನ ಸರಕಾರ ಹೇಳುತ್ತಿದೆ. ’ಭಾರತದಲ್ಲಿ ಜನಿಸಿದ ಬಗ್ಗೆ ನನ್ನ ತಂದೆ ತಾಯಿ ಬಳಿ ಸೂಕ್ತ ದಾಖಲೆ ಇಲ್ಲ. ಹೀಗಾಗಿ ಕೇಂದ್ರ ಸರಕಾರ ನನಗೂ ಅಕ್ರಮ ವಲಸಿಗಳು ಎಂಬ ಹಣೆಪಟ್ಟಿ ಹಚ್ಚುವ ಸಾಧ್ಯತೆ ಇದೆ’ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಹೇಳಿದುದು ನಮ್ಮ ರಾಜಕಾರಣಿಗಳ ಮತಬ್ಯಾಂಕ್ ಮನಸ್ಥಿತಿಗೆ ಒಂದು ಉದಾಹರಣೆ. ದೇಶದ ಸಮಗ್ರತೆಯಂಥ ವಿಷಯದಲ್ಲಿ ಪಕ್ಷಭೇದ ಮರೆತು ಒಟ್ಟಿಗೆ ನಿಲ್ಲುವಂತಹ ಪ್ರಬುದ್ಧತೆ ಇನ್ನೂ ನಮ್ಮ ರಾಜಕಾರಣಿಗಳಿಗೆ ಬಂದಿಲ್ಲ.
ನಿರಾಶ್ರಿತರು ಸೃಷ್ಟಿಯಾಗುವ ಸಮಸ್ಯೆ ಆಯಾಯ ದೇಶಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಅದನ್ನು ಇನ್ನೊಂದು ದೇಶ ಮಾನವೀಯ ನೆಲೆಯಲ್ಲಿ ನಿಭಾಯಿಸಲು ಹೊರಟರೆ ಆಧುನಿಕ ಕಾಲದಲ್ಲಿ ಅನೇಕ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ. ಇದನ್ನು ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ವೇದಿಕೆಗಳು ಸಂಬಂಧಪಟ್ಟ ದೇಶದ ಮೇಲೆ ಒತ್ತಡ ತಂದು ನಿರ್ವಹಿಸಬೇಕೇ ಹೊರತು ನಿರ್ಗತಿಕರಿಗೆಲ್ಲ ವಸತಿ ಕಲ್ಪಿಸುತ್ತೇವೆ ಎಂದು ಹೊರಡುವುದು ಇಂದಿನ ಯುಗದ ಜಾಯಮಾನಕ್ಕೆ ತಕ್ಕುದಾದ ನಡೆಯಾಗಲಾರದು.
** ***** **

– ರೇಶ್ಮಾ ಭಟ್

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....