Monday, September 25, 2023
More

   ಮನುಷ್ಯ ಜೀವನದೊಂದಿಗೆ ಬೆಸೆದ ಪ್ರಾಣಿಜೀವನ

  Must read

  ಕೆಲವು ತಿಂಗಳ ಹಿಂದೆ ಪತ್ರಿಕೆಗಳಲ್ಲಿ ’ಪ್ರಾಣಿಗಳ ರಕ್ಷಣೆಗಾಗಿ ಜಾಗೃತಿ’ ಎಂಬ ಶಿರೋನಾಮದ ಕೆಳಗೆ ಒಂದು ಫೋಟೋ ಪ್ರಕಟವಾಗಿತ್ತು. ಕೋಲ್ಕತ್ತದ ಆಲಿಫೋರ್ ಮೃಗಾಲಯದ ಬಳಿ ಪ್ರಾಣಿಗಳ ರಕ್ಷಣೆಯ ಕುರಿತು ಮೃಗಾಲಯದ ವಿರುದ್ಧ ಜಾಗೃತಿ ಮೂಡಿಸಲು ಪೆಟಾ ಇಂಡಿಯಾದ ಕಾರ್ಯಕರ್ತರು ಮೈಗೆ ಪ್ರಾಣಿಗಳಂತೆ ಬಣ್ಣ ಬಳಿದುಕೊಂಡು ಕೈಯಲ್ಲಿ ಫಲಕ ಹಿಡಿದು ಪ್ರತಿಭಟನೆ ನಡೆಸಿದ್ದರು. ಫಲಕಗಳಲ್ಲಿ ’ನೋ ಮೋರ್ ಕೇಜಸ್’, ’ಸೇ ನೋ ಟು ಝೂಸ್’, ಇತ್ಯಾದಿ ಹೇಳಿಕೆಗಳನ್ನು ಬರೆದುಕೊಂಡಿದ್ದರು. ಗಂಡಸರು ಹೆಂಗಸರು ವಿದ್ಯಾರ್ಥಿಗಳಾದಿಯಾಗಿ ನಾನಾ ಕ್ಷೇತ್ರದ ಜನರು ಒಂದೇ ಉದ್ದೇಶಕ್ಕಾಗಿ ಅಲ್ಲಿ ಸೇರಿದ್ದರು.
  ’ಪೀಪಲ್ ಫಾರ್ ದ ಎಥಿಕಲ್ ಟ್ರೀಟ್ಮೆಂಟ್ ಆಫ್ ಏನಿಮಲ್’ ಎನ್ನುವುದು ’ಪೆಟಾ’ದ ಪೂರ್ಣರೂಪ. ಜಗತ್ತಿನಾದ್ಯಂತ ಸುಮಾರು 6.5 ಮಿಲಿಯನ್ ಜನರು ಇದರ ಸದಸ್ಯರಾಗಿದ್ದಾರೆ. 1980ರಲ್ಲಿ ಅಮೇರಿಕಾದಲ್ಲಿ ಇದು ಸ್ಥಾಪನೆಯಾಯಿತು. ಈ ಸಂಸ್ಥೆಯ ಪ್ರಕಾರ ಪ್ರಾಣಿಗಳ ಮೇಲೆ ಮನುಷ್ಯರಿಗೆ ಯಾವುದೇ ಹಕ್ಕಿಲ್ಲ. ಅವುಗಳನ್ನು ತಿನ್ನಲಾಗಲೀ, ಅವುಗಳ ಚರ್ಮವನ್ನು ಧರಿಸಲಾಗಲೀ, ಪ್ರಯೋಗಗಳನ್ನು ಮಾಡಲಾಗಲೀ, ಮನರಂಜನೆಗೆ ಉಪಯೋಗಿಸಲಾಗಲೀ ಮಾಡುವಂತಿಲ್ಲ. ಹೀಗೆ ಇದೊಂದು ಪ್ರಾಣಿಗಳ ಮೇಲಿನ ಕಾಳಜಿಯಿಂದ ಸ್ಥಾಪನೆಗೊಂಡಂಥ, ಲಾಭದ ಉದ್ದೇಶವಿಲ್ಲದ ಒಂದು ಸಂಸ್ಥೆ. ಬಾರತದಲ್ಲಿ ಪೆಟಾ ತನ್ನ ಶಾಖೆಯನ್ನು ತೆರೆದದ್ದು 2000ದಲ್ಲಿ. ತಮಿಳುನಾಡಿನ ಜಲ್ಲಿಕಟ್ಟಿನ ವಿರುದ್ಧದ ಇದರ ಹೋರಾಟದಿಂದ ಇದು ದೇಶದಾಂದ್ಯಂತ ಹೆಸರು ಮಾಡಿತ್ತು. ನಮ್ಮ ಊರಿನ ಕಂಬಳಕ್ಕೂ ಇದರ ಬಿಸಿ ತಟ್ಟಿತ್ತು.
  ಬೇರೆ ದೇಶಗಳಲ್ಲಿ ಹೇಗೋ ಏನೋ ನನಗೆ ಅದರ ಕಲ್ಪನೆಯಿಲ್ಲ. ಅದರೆ ಭಾರತದಂತಹ ವಿವಿಧತೆ ಇರುವ ದೇಶಗಳಲ್ಲಿ ಕಂಬಳದಂತಹ ಪ್ರಾಣಿಸಂಬಂಧಿ ಆಚರಣೆಗಳನ್ನು ನಾವು ಹಿಂಸೆಯೆಂದು ನಿರ್ಧರಿಸುವುದಾದರೂ ಹೇಗೆ? ಇದು ಒಂದು ಉದಾಹರಣೆಯಷ್ಟೆ. ನಮ್ಮ ದೇಶದಲ್ಲಿ ಇಂಥ ನೂರಾರು ಆಚರಣೆಗಳಿವೆ. ಅಷ್ಟೇ ಅಲ್ಲ ನಮ್ಮ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಲ್ಲಿನ ಸಂಸ್ಕೃತಿಯ ಕುರುಹಾಗಿ ಜಟಕಾ ಬಂಡಿಗಳು ಕಾಣಸಿಗುತ್ತವೆ. ಹಾಗೆಯೇ ಅಲ್ಲಿ ಆಧುನಿಕತೆಯ ಕುರುಹಾಗಿ ಕುದುರೆಗಳ ರೇಸ್ ಕೋರ್ಸ್ ಸಹ ಇದೆ. ಇದರಲ್ಲಿ ಯಾವುದು ಹಿಂಸೆ ಯಾವುದು ಮನರಂಜನೆ? ಹಾಗೆಯೇ ದಸರಾ ಸಮಯದ ಜಗತ್ಪ್ರಸಿದ್ಧ ಜಂಬೂ ಮೆರವಣಿಗೆಯನ್ನು ನಾವು ಯಾವ ಕೆಟಗರಿಗೆ ಸೇರಿಸುವುದು? ಬಿಕನೇರಿನ ಒಂಟೆಗಳ ಉತ್ಸವ, ಕುಲ್ಕುಂದದ ದನಗಳ ಜಾತ್ರೆ….? ಮೃಗಾಲಯಗಳನ್ನು ನಿಷೇಧಿಸುವುದು ಒಳ್ಳೆಯ ವಿಚಾರವೆ. ಅದರೊಳಗಿನ ಜೀವಿಗಳ ನರಕಸದೃಶ ಜೀವನವು ಸಂವೇದನೆಯುಳ್ಳ ಯಾರ ಮನವನ್ನಾದರೂ ಕಲಕದಿರದು. ಮಕ್ಕಳಿಗೆ ಈಗಿನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಪ್ರಾಣಿಗಳ ಜೀವನವನ್ನು ವೀಡಿಯೋ ಇತ್ಯಾದಿಗಳ ಮೂಲಕ ತೋರಿಸಬಹುದು. ಆದರೆ ಮೀನುಗಾರಿಕೆಯನ್ನು ನಿಷೇಧಿಸಬೇಕು ಎಂಬ ವಿಚಾರ ಬಂದಾಗ ಪುನಃ ಗೊಂದಲವೇ. ಅಲ್ಲಿ ಕಸುಬು, ಜೀವನೋಪಾಯ, ಆಹಾರ ಪದ್ಧತಿ, ಪ್ರಾಕೃತಿಕ ಸಂಪನ್ಮೂಲ ಇತ್ಯಾದಿ ಕೂಗುಗಳು ಬಂದೇ ಬರುತ್ತವೆ. ಇನ್ನು ಗೋಮಾಂಸ ಎಷ್ಟೋ ದೇಶದ ಆರ್ಥಿಕ ಮೂಲ ಆಗಿದ್ದರೆ ನಮ್ಮ ದೇಶದಲ್ಲಿ ಅದು ರಾಜಕೀಯ, ಧರ್ಮದೊಂದಿಗೆ ತಳುಕು ಹಾಕಿಕೊಂಡು ಗೊಂದಲದ ಗೂಡಾಗಿ ಹೋಗಿದೆ. ಕೋಳಿ ಇತ್ಯಾದಿಗಳು ಆಚರಣೆ, ಆಹಾರ, ಮನರಂಜನೆ, ವ್ಯಾಪಾರ ಹೀಗೆ ಎಲ್ಲದರೊಳಗೂ ಸೇರಿ ಹೋಗಿವೆ. ಎತ್ತಿನ ಗಾಡಿಗಳಿಗೆ ಎತ್ತುಗಳನ್ನು ಬಳಸುವುದು, ಗದ್ದೆ ಊಳಲು ಕೋಣ-ಎತ್ತುಗಳನ್ನು ಬಳಸುವುದು, ಕೃಷಿಗೆ ಪೂರಕವಾದ ಹೈನುಗಾರಿಕೆ, ದೊಡ್ಡ ಮಟ್ಟಿನಲ್ಲಿ ನಡೆಯುತ್ತಿರುವ ಡೈರಿ ಉದ್ಯಮಗಳು ಇವನ್ನೆಲ್ಲ ಹೇಗೆ ಅರ್ಥೈಸಿಕೊಳ್ಳಬೇಕು? ಹಿಂದೆಲ್ಲ ಮಂಗನಾಟ, ಗಿಣಿಶಾಸ್ತ್ರ, ಬಸವನಾಟ, ಹಾವಾಡಿಸುವುದು, ಕರಡಿ ಕುಣಿತ, ಇವೆಲ್ಲ ನಮ್ಮ ಮನರಂಜನೆ ಮಾತ್ರವಲ್ಲದೆ ಜನರನ್ನು ಬೆಸೆಯತ್ತಿದ್ದ ಸಾಂಸ್ಕೃತಿಕ ಪ್ರದರ್ಶನಗಳಾಗಿದ್ದವು. ಇವೆಲ್ಲದರ ಜೊತೆಗೆ ಸರ್ಕಸ್‌ನಲ್ಲಿ ಪ್ರಾಣಿಗಳನ್ನು ಬಳಸುವುದೂ ನಿಂತುಹೋಗಿದೆ. ಆದರೆ ಆನೆಗಳನ್ನು ನಾಟಾ ಎಳೆಯಲು ಬಳಸುವುದು, ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಬಳಕೆ ನಿಂತಿಲ್ಲ. ಗಿಣಿಶಾಸ್ತ್ರ ನಿಷೇಧಿಸಿದ್ದರೂ ಪಂಜರಗಳಲ್ಲಿ ಗಿಣಿಗಳನ್ನು ಸಾಕುವುದಕ್ಕೆ ಯಾವ ನಿಷೇಧವೂ ಇಲ್ಲ. ಕೆಲವು ಕಡೆ ನಾಟಿ ಔಷಧವಾಗಿ ಪ್ರಾಣಿಗಳನ್ನು ಬಳಸುವುದು ಪುರಾತನ ಕಾಲದಿಂದಲೂ ನಡೆದು ಬಂದಿದೆ. ಅಲೋಪತಿ ವೈದ್ಯಪದ್ಧತಿಯಲ್ಲೂ ಕಾಡ್ಲಿವರ್ ಎಣ್ಣೆಯಂಥವುಗಳು ಬಳಕೆಯಲ್ಲಿವೆ. ಹಾವುಗಳ ಚರ್ಮವನ್ನು ಸುಲಿದು ಮಾರುವುದು, ಇರ್ತಲೆಯಂತಹ ಹಾವುಗಳನ್ನು ಔಷಧಿಗಾಗಿ ಮಾರಾಟ ಮಾಡುವುದು, ಹಾವಿನ ವಿಷವನ್ನು ಸಂಗ್ರಹಿಸಿ ಮಾರುವುದು ಹೀಗೆ ಇನ್ನೂ ಏನೇನೋ ಚಟುವಟಿಕೆಗಳು ಹಾವು ಎಂಬ ಉರಗಜಾತಿಯೊಂದನ್ನೇ ಅವಲಂಬಿಸಿ ನಡೆಯತ್ತಿದೆ.
  ಅನಾದಿ ಕಾಲದಿಂದಲೂ ಮನುಷ್ಯನ ಜೀವನ ಪ್ರಾಣಿಗಳೊಂದಿಗೆ ಬೆಸೆದು ಹೋಗಿದೆ. ನದಿ ಬದಿಯ ನಾಗರಿಕತೆಗಳು ಹುಟ್ಟುವುದಕ್ಕಿಂತಲೂ ಮುಂಚೆಯೇ ಮನುಷ್ಯನಿಗೆ ಪ್ರಾಣಿಗಳ ಮಾಂಸದ ರುಚಿ ತಿಳಿದಿತ್ತು. ತನಗೆ ಹಿತವಾದುದನ್ನು ತನ್ನ ದೈವಕ್ಕೂ ನೀಡುವ ಪದ್ಧತಿ ಪ್ರಾರಂಭವಾಗಿ ಅದು ಆಚರಣೆಯ ಮಟ್ಟಕ್ಕೆ ಬಂತು. ಆ ನಂತರ ರಾಜರ ಕಾಲದಲ್ಲಿ ಸೈನ್ಯದಲ್ಲಿ ಬಳಸುವುದು, ಕೃಷಿಗೆ ಉಪದ್ರವವಾಗಿರುವುದನ್ನು ಕೊಲ್ಲುವುದು, ಬೇಟೆಗೂ ಪ್ರಾಣಿಗಳನ್ನೇ ಬಳಸಿಕೊಳ್ಳುವುದು, ಇತ್ಯಾದಿಗಳಿಂದ ಪ್ರಾಣಿಗಳೊಂದಿಗಿನ ಮನುಷ್ಯರ ಸಂಬಂಧ ಇನ್ನಷ್ಟು ನಿಕಟವಾಯಿತು. ಇಷ್ಟು ಹಳೆಯ ಒಡನಾಟವನ್ನು ವೈವಿಧ್ಯಮಯ ಚಟುವಟಿಕೆಗಳನ್ನು ಒಮ್ಮಿಂದೊಮ್ಮೆಲೆ ’ಹಿಂಸೆ’ ಎಂದು ನಿರ್ಧರಿಸಿ ತಡೆಗಟ್ಟಲು ಸಾಧ್ಯವೇ? ಪೆಟಾ ಇಂಡಿಯಾ ಮೃಗಾಲಯದ ಎದುರು ಪ್ರತಿಭಟಿಸಿದ್ದು ಅತ್ಯಂತ ಸ್ವಾಗತಾರ್ಹವಾದುದು. ಹಾಗೆಯೇ ಯಾತನಾಮಯವಾಗಿ ಕೊಲ್ಲುವುದು, ತುಂಬಾ ಸಮಯದವರೆಗೆ ಸಣ್ಣ ಸಣ್ಣ ಪಂಜರಗಳಲ್ಲಿ ಇಟ್ಟು ಪ್ರದರ್ಶಿಸುವುದು ಹೀಗೆ ಕೆಲವನ್ನು ನಿಷೇಧಿಸಲೇಬೇಕು ಸರಿ, ಆದರೆ ಎಲ್ಲವನ್ನು ಹೀಗೆ ಹಿಂಸೆ ಎಂಬ ಒಂದು ಕಾನ್ಸೆಪ್ಟಿನಡಿಯಲ್ಲಿ ನಿಷೇಧಿಸಲು ಸಾಧ್ಯವೇ? ಬೆಳಗ್ಗೆ ಹಾಲು ಬೆರೆಸಿದ ಚಹಾ ಗುಟುಕರಿಸಿ ದಿನಚರಿ ಆರಂಭಿಸುವ ಪ್ರತಿಯೊಬ್ಬನೂ ತನ್ನನ್ನು ತಾನೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಹಲವಾರು ಇವೆ. ಕಾಯ್ದೆ ಕಾನೂನುಗಳನ್ನು ಮೀರಿ ಯೋಚಿಸಬೇಕಾದ ಮಾನವೀಯತೆಯ ಪ್ರಶ್ನೆ ಇದು.

  * ರೇಶ್ಮಾ ಭಟ್

  More articles

  LEAVE A REPLY

  Please enter your comment!
  Please enter your name here

  Latest article