Thursday, October 26, 2023

ಅನತಿ-22: ಕುಂಭಮೇಳ

Must read

ಕೆಲವು ವರ್ಷಗಳ ಹಿಂದೆ ಇಂಗ್ಲಿಶ್ ವಾಹಿನಿಯೊಂದರಲ್ಲಿ ಕುಂಭಮೇಳದ ವರದಿ ಪ್ರಸಾರವಾಗುತ್ತಿತ್ತು. ಲಕ್ಷಾಂತರ ಮಂದಿ ಸೇರುವ ಈ ಮೇಳದ ಸಣ್ಣ ಸಣ್ಣ ವಿವರಗಳನ್ನೂ ಅದು ವರದಿಮಾಡುತ್ತಿತ್ತು. ವಿಶೇಷವಾಗಿ ನಾಗಾ ಸಾಧುಗಳ ಬಗ್ಗೆ ಅದು ಅತೀವ ಆಸಕ್ತಿಯನ್ನು ತೋರಿಸಿದಂತಿತ್ತು. ಅವರ ನಿತ್ಯದ ಜೀವನ ಅವರು ಮಾಡುವ ದೈಹಿಕ ಕಸರತ್ತುಗಳು, ತಾಂತ್ರಿಕ ಕ್ರಮಗಳು ಇತ್ಯಾದಿಗಳ ಬಗ್ಗೆ ಕೆಲವು ಅಪರೂಪದ ವಿಷಯಗಳನ್ನು ಅದು ಸೆರೆಹಿಡಿದಿತ್ತು. ಒಟ್ಟಾರೆಯಾಗಿ ಆ ಇಡೀ ಕಾರ್ಯಕ್ರಮ ಆಸಕ್ತಿದಾಯಕ ಮಾತ್ರವಲ್ಲದೆ ಮಾಹಿತಿಯ ನೆಲೆಯಲ್ಲೂ ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವಾಗಿತ್ತು. ಈ ಮೇಳದಲ್ಲಿ ಭಾಗವಹಿಸಿದ ಕೆಲವು ವಿದೇಶಿಯರ ಸಂದರ್ಶನವನ್ನೂ ಅದು ಬಿತ್ತರಿಸುತ್ತಿತ್ತು. ಅದರಲ್ಲಿ ವಿದೇಶೀ ಪ್ರಜೆಯೊಬ್ಬ ಒಬ್ಬ ದೋಣಿ ನಡೆಸುವವನಲ್ಲಿ ’ಹೂ ಗೇವ್ ಇನ್‌ವಿಟೇಶನ್ ಟು ಆಲ್ ದೀಸ್ ಪೀಪಲ್?’ (ಇಷ್ಟೆಲ್ಲ ಜನಕ್ಕೆ ಇಲ್ಲಿಗೆ ಬರಲು ಯಾರು ಆಹ್ವಾನ ನೀಡಿದ್ದಾರೆ?) ಎಂದು ಆಶ್ಚರ್ಯದಿಂದ ವಿಚಾರಿಸುತ್ತಿದ್ದ. ಬಾರತೀಯರಿಗೆ ಜಾತ್ರೆ ಜಂಗುಳಿಗಳಲ್ಲಿ ಭಾಗವಹಿಸಲು ಯಾರಾದರೂ ಆಹ್ವಾನ ನೀಡಬೇಕೇ? ಎಂದು ನನ್ನಷ್ಟಕ್ಕೆ ನಾನೆ ಹೇಳಿಕೊಂಡರೂ ಈ ಪಾಟಿ ಜನ ಸೇರಲು ಒದಗಿಬರುವ ಆ ಪ್ರೇರಣಾ ಶಕ್ತಿ ಯಾವುದು ಎಂಬ ಒಂದು ಸಣ್ಣ ಸಂಶಯ ಮನಸ್ಸಿನಲ್ಲಿ ಮೂಡದೆ ಇರಲಿಲ್ಲ. 2013ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳದಲ್ಲಿ 120 ಮಿಲಿಯನ್ ಜನರು (ಎರಡು ತಿಂಗಳ ಅವಧಿಯಲ್ಲಿ) ಬಾಗವಹಿಸಿದ್ದರೆಂದು ಅಂಕಿ ಅಂಶಗಳು ಹೇಳುತ್ತವೆ. ಅದರಲ್ಲೂ ಮೌನಿ ಅಮವಾಸ್ಯೆಯಂದು (10 ಫಬ್ರವರಿ, 2013) ಸುಮಾರು 30 ಮಿಲಿಯನ್ ಜನರು ಭಾಗವಹಿಸಿದುದು ದಾಖಲೆಯಾಗಿದೆ ಎನ್ನಲಾಗುತ್ತದೆ. ಆದುದರಿಂದಲೇ ಇದನ್ನು ಹಿಂದುಗಳು ಎನಿಕೊಂಡಿರುವ ಜನರು ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಸೇರುವ ಒಂದು ಮೇಳ ಎಂದು ಕರೆಯಲಾಗುತ್ತದೆ.( ಲಾರ್ಜೆಸ್ಟ್ ಕಾಂಗ್ರೆಗೇಶನ್ ಆನ್ ದ ಅರ್ಥ್).


ಈ ಮೇಳಗಳು ನದಿ ದಡಗಳಲ್ಲಿ ನಡೆಯುತ್ತವೆ. ನಾಲ್ಕು ಪ್ರಸಿದ್ಧ ಕುಂಭಮೇಳಗಳು ನಡೆಯುವ ಸ್ಥಳಗಳೆಂದರೆ, ಹರಿದ್ವಾರ (ಗಂಗಾ ತಟಾಕ), ಪ್ರಯಾಗ (ಅಲಹಾಬಾದ್ ಗಂಗಾ_ಯಮುನಾ ಸಂಗಮ), ತ್ರಯಂಬಕ (ನಾಸಿಕ್ ಗೋದಾವರಿ ತಟಾಕ), ಉಜ್ಜಯಿನಿ (ಕ್ಷಿಪ್ರ ನದಿಯ ತಟಾಕ). ಪ್ರಯಾಗದಲ್ಲಿ ಮಾಘ ಮೇಳ ಎನ್ನುವ ಮಿನಿ ಕುಂಭಮೇಳ ಪ್ರತಿವರ್ಷ ನಡೆಯತ್ತದೆ. ಈ ವರ್ಷ ಅಂದರೆ 2019ರ ಅರ್ಧ ಕುಂಭಮೇಳ ಪ್ರಯಾಗದಲ್ಲಿ ಜನವರಿ 15ರಂದು ಸೂರ್ಯ ಉತ್ತರಾಯಣವನ್ನು ಪ್ರವೇಶಿಸುವ ದಿನ ಪ್ರಾರಂಭವಾಗಲಿದೆ. ಜನವರಿ 15-ಮಕರ ಸಂಕ್ರಾಂತಿ, ಫೆಬ್ರವರಿ 04-ಮೌನಿ ಅಮವಾಸ್ಯೆ, ಫೆಬ್ರವರಿ 10-ವಸಂತ ಪಂಚಮಿ ಪವಿತ್ರ ಸ್ನಾನದ ದಿನಗಳಾಗಿವೆ. ಮಾರ್ಚ್ 04 ಮಹಾ ಶಿವರಾತ್ರಿಯಂದು ಈ ಸಲದ ಕುಂಭ ಮೇಳ ಮುಕ್ತಾಯವನ್ನು ಕಾಣಲಿದೆ. ಸೂರ್ಯ, ಚಂದ್ರ ಹಾಗೂ ಗುರು ಗ್ರಹಗಳ ಚಲನೆಯ ಲೆಕ್ಕಾಚಾರದ ಮೂಲಕ ಕುಂಭಮೇಳದ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಈ ಸಲವೂ ಲಕ್ಷಾಂತರ ಮಂದಿ ಭಕ್ತರು ಪವಿತ್ರ ಗಂಗಾ ಯಮುನಾ ಹಾಗೂ ಗುಪ್ತಗಾಮಿನಿಯಾದ ಸರಸ್ವತಿಯ ಸಂಗಮದಲ್ಲಿ ಮಿಂದು ಪುನೀತಭಾವವನ್ನು ಹೊಂದಲಿದ್ದಾರೆ.
ಪೂರ್ಣ ಕುಂಭಮೇಳ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಇಂಥಾ ಹನ್ನೆರಡು ಕುಂಭಮೇಳಗಳು ನಡೆದ ನಂತರ ಅಂದರೆ ಪ್ರತಿ 144 ವರ್ಷಕ್ಕೊಮ್ಮೆ ಮಹಾಕುಂಭಮೇಳ ಬರುತ್ತದೆ. ಪ್ರತಿ ಆರು ವರ್ಷಕ್ಕೊಮ್ಮೆ ಅರ್ಧ ಕುಂಭ ಮೇಳ, ಹಾಗೆಯೇ ಮೂರು ವರ್ಷದ ಮೇಳಗಳೂ ನಡೆಯುತ್ತವೆ. ಈ ಮೇಳದ ಪ್ರಮುಖ ವಿಧಿ ಅಂದರೆ ತೀರ್ಥಸ್ನಾನ. ವರ್ಷದ ಕೆಲವು ನಿರ್ದಿಷ್ಟ ದಿನಗಳಂದು ನದಿ, ಸಮುದ್ರಗಳಲ್ಲಿ, ದೇವಾಲಯಗಳ ಪುಷ್ಕರಿಣಿಗಳಲ್ಲಿ ಪವಿತ್ರ ಸ್ನಾನ ಮಾಡುವುದು ನಮ್ಮ ದೇಶದಾದ್ಯಂತ ಕಂಡುಬರುವ ಪದ್ಧತಿ. ಪವಿತ್ರ ಸ್ನಾನದಿಂದ ಎಲ್ಲಾ ಪಾಪಗಳು ತೊಳೆದುಹೋಗಿ ಜೀವಿಯು ಶುದ್ಧಾತ್ಮನಾಗುತ್ತಾನೆ; ಹಾಗೆಯೇ ಈ ಭವ ಬಂಧನದಿಂದ ಬಿಡುಗಡೆಗೊಂಡು ಮುಕ್ತಿಯನ್ನು ಹೊಂದುತ್ತಾನೆ ಎಂಬುದು ಇದರ ಹಿಂದಿರುವ ನಂಬಿಕೆ. ಮಹಾ ವಿಷ್ಣುವು ಅಮೃತದ ಕುಂಭವನ್ನು ಹೊತ್ತೊಯ್ಯುವಾಗ ನಾಲ್ಕು ಹನಿಯು ನಾಲ್ಕು ಪ್ರದೇಶಗಳಿಗೆ ಬಿದ್ದು, ಈ ನಾಲ್ಕು ಸ್ಥಳಗಳೇ ಹರಿದ್ವಾರ, ನಾಸಿಕ್, ಪ್ರಯಾಗ ಹಾಗೂ ಉಜ್ಜಯಿನಿ ಎಂಬ ಕುಂಭಮೇಳಗಳು ನಡೆಯುವ ಸ್ಥಳಗಳಾದವು ಎಂದು ದಂತಕಥೆಯೊಂದು ಹೇಳುತ್ತದೆ. ಈ ವರ್ಷದ ಕುಂಭಮೇಳವು ಅರ್ಧ ಕುಂಭಮೇಳವಾಗಿದೆ. ಪೂರ್ಣಕುಂಭಮೇಳವು 2013ರಲ್ಲಿ ಪ್ರಯಾಗದಲ್ಲಿ ನಡೆದಿತ್ತು. ಸಾಧುಗಳು, ಸಂತರು ಅಪಾರ ಸಂಖ್ಯೆಯಲ್ಲಿ ಸೇರುವುದು ಈ ಮೇಳದ ವಿಶೇಷ. ಅವರು ಮೆರವಣಿಗೆಯ ಮೂಲಕ ತಮ್ಮ ಗುಂಪಿನೊಂದಿಗೆ ಬಂದು ಈ ಮೇಳದಲ್ಲಿ ಭಾಗವಹಿಸಿ ಪವಿತ್ರ ಶಾಹಿಸ್ನಾನವನ್ನು ಪೂರೈಸುತ್ತಾರೆ. ಕೊರೆಯುವ ಚಳಿಯಲ್ಲೂ ಬೆತ್ತಲೆಯಾಗಿ ಮೈಗೆ ಬೂದಿ ಬಳಿದುಕೊಂಡ ನಾಗಾ ಸಾಧುಗಳು ಈ ಭೌತಿಕ ಪ್ರಪಂಚದಿಂದ ತಾವು ಬೇರೆಯೇ ಎಂಬ ಸಂದೇಶವನ್ನು ರವಾನಿಸುತ್ತಿರುತ್ತಾರೆ.


ಕುಂಭಮೇಳಕ್ಕಾಗಿ ಈಗಾಗಲೇ ಸರಕಾರದ ವತಿಯಿಂದ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್, ಪ್ಯಾಕೇಜ್ ಟೂರುಗಳು, ವಿಶೇಷ ವಿಮಾನಗಳು, ರೈಲುಗಳು, ಮುಂಗಡ ಬುಕ್ಕಿಂಗ್‌ಗಳು… ಹೀಗೆ ಚಟುವಟಿಕೆಗಳು ಗರಿಗೆದರಿವೆ. ಜನವರಿ 15ರಿಂದ ಮಾರ್ಚ್ 04ರವರೆಗಿನ ವಿಶೇಷ ದಿನಗಳ ಮಾಹಿತಿಗಳನ್ನೂ ವೆಬ್‌ಸೈಟ್ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶ ಸರಕಾರ ಪ್ರಯಾಗರಾಜ್‌ನಲ್ಲಿ ಒಂದು ತಾತ್ಕಾಲಿಕ ನಗರವನ್ನೇ ನಿರ್ಮಿಸಿದೆ. ವಿಶ್ವದ ಅತ್ಯಂತ ದೊಡ್ಡ ತಾತ್ಕಾಲಿಕ ನಗರ ಎಂಬ ಹೆಗ್ಗಳಿಕೆಯನ್ನು ಇದು ಪಡೆದಿದೆ. ಈ ನಗರ 250 ಕಿ.ಮೀಗಳಷ್ಟು ಉದ್ದದ ರಸ್ತೆಯನ್ನೂ, 22 ತಾತ್ಕಾಲಿಕ ತೇಲುವ ಸೇತುವೆಗಳನ್ನೂ ಹೊಂದಿದೆ. ಇಡೀ ನಗರ 40,000 ಎಲ್‌ಇಡಿ ಬಲ್ಬ್‌ಗಳಿಂದ ಬೆಳಗಲಿದೆ. ಕಾಲ್ತುಳಿತ ಇತ್ಯಾದಿಗಳಿಂದ ನೂರಾರು ಯಾತ್ರಾರ್ಥಿಗಳು ಹಿಂದಿನ ಕುಂಭಮೇಳಗಳಲ್ಲಿ ಸಾವನ್ನಪ್ಪಿದ್ದು ಇಂಥಾ ಕಹಿ ಘಟನೆಗಳಿಂದ ಎಚ್ಚೆತ್ತ ಸರಕಾರ ಈ ಸಲ ಮೇಳದಲ್ಲಿ ಭಾಗವಹಿಸುವ ಭಕ್ತರಿಗೆ ವಿಮಾ ಸೌಲಭ್ಯವನ್ನೂ ಒದಗಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ, ಯುನೆಸ್ಕೋ ಈ ಮೇಳವನ್ನು ’ಮನುಕುಲದ ಅವರ್ಣನೀಯ ಸಾಂಸ್ಕೃತಿಕ ಪರಂಪರೆ’ ಎಂದು ಕರೆದದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
********

 

– ರೇಶ್ಮಾ ಭಟ್

More articles

Latest article