


ವಿಟ್ಲ: ತುಳು ಸಂಸ್ಕೃತಿ ಪ್ರವರ್ಧಮಾನತೆಗೆ ಬರಬೇಕಾದರೆ ತುಳು ಭಾಷೆ ಬೆಳೆಯಬೇಕು. ತುಳು ಭಾಷೆಯನ್ನು ತುಳು ಭಾಷಿಗರು ಸದ್ಬಳಕೆ ಮಾಡಿಕೊಂಡು ಬೆಳೆಸಬೇಕು. ಭಾಷೆಯೊಳಗಿನ ಪ್ರಾದೇಶಿಕ ಅಸಮಾನತೆ, ಬೇಧಗಳು ಸಂಸ್ಕೃತಿಯ ಐಕ್ಯತೆಗೆ ತೊಡಕಾಗದಂತೆ ಎಚ್ಚರ ವಹಿಸಿಬೇಕಾಗಿದೆ ಎಂದು ಕನ್ಯಾನ ಬಾಳೆಕೋಡಿ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶಶೀಕಾಂತಮಣಿ ಸ್ವಾಮೀಜಿ ಹೇಳಿದರು.
ಅವರು ಅಳಿಕೆ ಕಲ್ಲೆಂಚಿಪಾದೆ ಶ್ರೀ ಮಹಾದೇವಿ ಭಜನಾ ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ತುಳು ಜಾನಪದ ಸಂವಾದ ’ಜಾನಪದ ಪರತ್-ಪರಿಪು’ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾಷೆಯೊಂದಿಗೆ ನಾವು ಒಂದಾಗಿ ಬೆರೆಯಬೇಕು, ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
’ತುಳು ಎಲ್ಲೆ’ ಎಂಬ ವಿಚಾರಮಂಡಿಸಿದ ಮಂಗಳೂರು ಸಂತ ಅಲೋಷಿಯಸ್ ಕಾಲೇಜು ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಮಾತನಾಡಿ ತುಳುವ ಸಂಸ್ಕೃತಿ ಆಧುನಿಕತೆಯ ಪ್ರಭಾವಕ್ಕೊಳಗಾಗಿ ತನ್ನತನವನ್ನೇ ಕಳೆದುಕೊಳ್ಳುತ್ತಿದೆ. ತುಳು ವಿಕಿಪೀಡಿಯಾದ ಮೂಲಕ ತುಳು ಭಾಷೆ ಮಾಹಿತಿ, ಚಿಂತನೆ ಉಳಿದು ಬೆಳೆಯಬೇಕು. ಯುವಕರು ತುಳು ಸಂಸ್ಕೃತಿಯನ್ನು ಸದೃಢವಾಗಿಸಬೇಕು. ಆ ನಿಟ್ಟಿನಲ್ಲಿ ಯುವಕರು ಜಾಗೃತಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಸಂವಾದದ ಸಮನ್ವಯಕಾರರಾಗಿ ಮಾತನಾಡಿದ ಮಂಗಳೂರು ಆಕಾಶವಾಣಿ ನಿಲಯದ ನಿವೃತ್ತ ನಿದೇರ್ಶಕ ಡಾ. ವಸಂತ ಕುಮಾರ್ ಪೆರ್ಲ ಗದ್ದೆ ಬೇಸಾಯ ಸಂಸ್ಕೃತಿಯೊಳಗೆ ಸಮೃದ್ಧವಾಗಿದ್ದ ತುಳುವ ಸಂಸ್ಕೃತಿ ಕೈಗಾರೀಕರಣದಿಂದಾಗಿ ಅಧಃಪತನಕ್ಕೆ ಮುಟ್ಟಿದೆ. ತುಳು ಜನಪದವೇ ಸಮೃದ್ಧ ಸಾಹಿತ್ಯವಾಗಿದೆ. ತುಳುಸಾಹಿತ್ಯ, ತುಳು ವಿಚಾರ ವಿಮರ್ಶೆಗಳು ಹೆಚ್ಚೆಚ್ಚು ನಡೆಯಬೇಕು. ಸಂವಿಧಾನದ ೮ನೇ ಪರಿಛ್ಛೇದಕ್ಕೆ ಸೇರಿಸುವಲ್ಲಿ ನಿರಂತರ ಧ್ವನಿಗೂಡಿಸುತ್ತಿರಬೇಕೆಂದರು.
ತುಳು ಸಂಸ್ಕೃತಿ, ಸಾಹಿತ್ಯದ ಬಗ್ಗೆ ತುಳು ಪತ್ರಿಕೆ ’ಪೂವರಿ’ ಸಂಪಾದಕ ವಿಜಯಕುಮಾರ್ ಹೆಬ್ಬಾರ್ಬೈಲ್ ಮಾತನಾಡಿದರು. ದೈವಾರಾಧನೆಯ ವಿಚಾರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಲೋಕಯ್ಯ ಸೇರಾ ಮಾತನಾಡಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಜಾನಪದ ಕಲಾವಿದ ಬೋಳ ಬಾಬು ಸಾಲಿಯಾನ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಎಂ. ಯಶೋಧರ ಬಂಗೇರ ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಚೆನ್ನಪ್ಪ ಅಳಿಕೆ ಸ್ವಾಗತಿಸಿದರು. ಡಿ.ಎನ್.ಕೆ ಉಕ್ಕುಡ ವಂದಿಸಿದರು.
ಸಹ ಸಂಚಾಲಕ ಜಯರಾಮ ಪಡ್ರೆ ಕಾರ್ಯಕ್ರಮ ನಿರೂಪಿಸಿದರು.


