Thursday, October 26, 2023

ಜ.25-28: ಕಲ್ಲೆಂಚಿಪಾದೆ ಮಹಾದೇವಿ ಭಜನಾಮಂದಿರದ ಸುವರ್ಣ ಮಹೋತ್ಸವ ಸಮಾರಂಭ

Must read

ವಿಟ್ಲ : ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಮಹಾದೇವಿ ಭಜನಾ ಮಂಡಳಿಯ ನೇತೃತ್ವದಲ್ಲಿ ಶ್ರೀ ಮಹಾದೇವಿ ಭಜನಾ ಮಂದಿರದ ಸುವರ್ಣ ಮಹೋತ್ಸವ ಸಮಾರಂಭ ಜ.25ರಿಂದ ಮೊದಲ್ಗೊಂಡು ಜ.28ರ ತನಕ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೇದಮೂರ್ತಿ ಕುಂಟುಕುಡೇಲು ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಪಿ.ಚೆನ್ನಪ್ಪ ಅಳಿಕೆ ತಿಳಿಸಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.25ರಂದು ಬೆಳಗ್ಗೆ ಭಜನೆ – ನಾಮ ಸಂಕೀರ್ತನೆ ಆರಂಭಗೊಳ್ಳಲಿದೆ. ಉಕ್ಕುಡ ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ. ವಿಟ್ಲ ಅರಮನೆ ವಿ.ಜನಾರ್ದನ ವರ್ಮ ಅರಸರು ಉದ್ಘಾಟಿಸಲಿದ್ದಾರೆ.

ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ| ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಉಗ್ರಾಣ ಮುಹೂರ್ತ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.
ರಾತ್ರಿ ಘಂಟೆ 7.30ಕ್ಕೆ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ| ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಧಾರ್ಮಿಕ ಸಭೆ ಉದ್ಘಾಟಿಸಲಿದ್ದಾರೆ. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾ ಸಂಸ್ಥೆಗಳ ಸಂಚಾಲಕ ಕೆ.ಎಸ್.ಕೃಷ್ಣ ಭಟ್ ಅವರು ಪಾಕಶಾಲೆ ಉದ್ಘಾಟಿಸಲಿದ್ದಾರೆ. ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರಿಸಿದರು.
ಜ.26ರಂದು ಬೆಳಗ್ಗೆ 6 ಕ್ಕೆ ಶ್ರೀ ಪಂಚಲಿಂಗೇಶ್ವರ ಭಜನಾ ಪರಿಷತ್ ವಿಟ್ಲ ಸೀಮೆ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವ ಅರ್ಧ ಏಕಾಹ ಭಜನೆಗೆ ಕಾಂತು ನಲಿಕೆ ಕಲ್ಲೆಂಚಿಪಾದೆ ಅವರಿಂದ ಚಾಲನೆ ನೀಡಲಾಗುವುದು. ರಾತ್ರಿ 7 ಕ್ಕೆ ಧಾರ್ಮಿಕ ಸಭೆಯಲ್ಲಿ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಮತ್ತು ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ| ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಮಹಾದೇವಿ ಭಜನಾ ಮಂಡಳಿ ಗೌರವಾಧ್ಯಕ್ಷ ಕಾನ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜ.27ರಂದು ಬೆಳಗ್ಗೆ ೬ಕ್ಕೆ ಕಾವೇರಿ ಕಲ್ಲೆಂಚಿಪಾದೆ ಇವರಿಂದ ದೀಪ ಪ್ರಜ್ವಲನೆ ಬಳಿಕ ಭಜನೆ ನಾಮ ಸಂಕೀರ್ತನೆ, ಅಪರಾಹ್ನ ೨ಕ್ಕೆ ಜಾನಪದ ಸಂವಾದ (ತುಳು ಸಾಹಿತ್ಯ ಕಾರ್ಯಕ್ರಮ)
ಜಾನಪದ ಪರತ್- ಪರಿಪು ನಡೆಯಲಿದ್ದು, ಸಮನ್ವಯಕಾರರಾಗಿ ಕವಿ, ಸಾಹಿತಿ ಡಾ| ವಸಂತ ಕುಮಾರ್ ಪೆರ್ಲ ಅವರು ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ| ರಾಜಶ್ರೀ ರೈ, ಡಾ| ಡಿ.ಯದುಪತಿ ಗೌಡ, ಡಾ| ವಿಶ್ವನಾಥ ಬದಿಕಾನ ಅವರು ಉಪನ್ಯಾಸ ನೀಡಲಿದ್ದಾರೆ. ಸಂಜೆ 6 ಕ್ಕೆ ಧಾರ್ಮಿಕ ಸಭೆ – ಸಮಾರೋಪ ಸಮಾರಂಭ ನಡೆಯಲಿದ್ದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ಮತ್ತು ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಶ್ರೀ ಡಾ| ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು.ಗಂಗಾಧರ ಭಟ್, ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜು ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶ್ರೀ ಮಹಾದೇವಿ ಭಜನಾ ಮಂಡಳಿ ಗೌರವಾಧ್ಯಕ್ಷ ಕಾನ ಈಶ್ವರ ಭಟ್, ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ನೋಣಯ್ಯ ಜಿ.ಎನ್., ಉಪಾಧ್ಯಕ್ಷ ರಮೇಶ ಕಡಂಬು, ಪ್ರಧಾನ ಕಾರ್ಯದರ್ಶಿ ಆನಂದ ಜಿ., ಕಾರ್ಯದರ್ಶಿ ರಾಮ ಜಿ.ಎನ್., ಕಾರ್ಯದರ್ಶಿ ಶ್ರೀಧರ ಕಲ್ಲೆಂಚಿಪಾದೆ ಉಪಸ್ಥಿತರಿದ್ದರು.

More articles

Latest article