ವಿಟ್ಲ: ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ನಾನಾ ಬೇಡಿಕೆಗಳನ್ನು ಮುಂದಿರಿಸಿಕೊಂಡು ಜ.7 ರಂದು ಬೆಳಗ್ಗೆ 9 ಗಂಟೆಗೆ ವಿಟ್ಲ ಕಚೇರಿಯಿಂದ ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಪಂಚಾಯಿತಿ ಕಾರ್‍ಯನಿರ್ವಹಣಾಧಿಕಾರಿಗೆ ಕಾಲ್ನಡಿಗೆ ಜಾಥಾ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅವರು ತಿಳಿಸಿದರು.
ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಾಥಾದ ಬಗ್ಗೆ ವಿವರಣೆ ನೀಡಿದರು. ಅಂದು ಬೆಳಗ್ಗೆ ಪರಿಶಿಷ್ಟ ಜಾತಿ ಪಂಗಡಕ್ಕೆ ಮತ್ತು ನಿವೃತ್ತ ಸೈನಿಕರಿಗೆ ಕಾಯ್ದಿರಿಸಿದ ಮತ್ತು ಅಳತೆ ಮಾಡಿರುವ ಜಮೀನನ್ನೂ ಒದಗಿಸುವಂತೆ, ಸರಕಾರಿ ಮತ್ತು ಸರಕಾರದ ಸ್ವಾಮ್ಯಕ್ಕೆ ಒಳಪಡುವ ಇಲಾಖೆಗಳಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಇತರರನ್ನು ಖಾಯಂಗೊಳಿಸುವಂತೆ ವೇತನ ಹೆಚ್ಚಿಸುವಂತೆ, ದ.ಕ ಜಿಲ್ಲೆಯಲ್ಲಿ ರಸ್ತೆ ಇಲ್ಲದ ಕಡೆ ರಸ್ತೆ ನಿರ್‍ಮಿಸುವಂತೆ ಬೇಡಿಕೆ ಸಲ್ಲಿಸಿದ್ದನ್ನು ಪರಿಗಣಿಸುವಂತೆ, ಸುಳ್ಯ ತಾಲೂಕು, ಪುತ್ತೂರು ತಾಲೂಕು ಮತ್ತು ವಿಟ್ಲ ಹೋಬಳಿಯಲ್ಲಿ ಅಂಬೇಡ್ಕರ್ ಭವನಗಳಿಗೆ ಕಾಯ್ದಿರಿಸಿದ ಜಮೀನಿನಲ್ಲಿ ಕೂಡಲೇ ಅಂಬೇಡ್ಕರ್ ಭವನ ನಿರ್‍ಮಿಸುವಂತೆ, ಪ.ಜಾತಿ/ಪ.ಪಂಗಡಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ಹೆಚ್ಚಿಸುವಂತೆ, ಜಿಲ್ಲೆಯ ಮರಳುಗಾರಿಕೆಯಲ್ಲಿ ಪರಿಶಿಷ್ಟರಿಗೆ ಅವಕಾಶ ನೀಡುವಂತೆ ಹಾಗೂ ಇನ್ನಿತರ ಹತ್ತಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ದಲಿತ್ ಸಮಿತಿಯ ಸಂಚಾಲಕ ಗೋಪಾಲ ಕೆ. ನೇರಳಕಟ್ಟೆ, ಪ್ರಧಾನ ಕಾರ್‍ಯದರ್ಶಿ ಚಂದ್ರಶೇಖರ ಯು., ಉಪಾಧ್ಯಕ್ಷ ಪ್ರಸಾದ್ ಬೊಳ್ಮಾರ್, ಗೌರವ ಸಲಹೆಗಾರ ಮೋಹನದಾಸ್ ಯು. ವಿಟ್ಲ, ತಾಲೂಕು ಅಧ್ಯಕ್ಷ ಸೋಮಪ್ಪ ಸುರುಳಿಮೂಲೆ, ತಾಲೂಕು ಕಾರ್‍ಯದರ್ಶಿ ಪ್ರಸಾದ್ ಅನಂತಾಡಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here