Sunday, October 22, 2023

ಜ. 6 ರಂದು ಬಡಹೆಣ್ಣುಮಕ್ಕಳ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ

Must read

ಬಂಟ್ವಾಳ: ಮುಬಾರಕ್ ಜುಮಾ ಮಸೀದಿ, ಬಾಂಬಿಲ ಇದರ ವತಿಯಿಂದ ದಾರುಸ್ಸಲಾಂ ಮದ್ರಸ ಮದ್ವಾ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಇದರ ಜಂಟಿ ಆಶ್ರಯದಲ್ಲಿ ಬಡಹೆಣ್ಣುಮಕ್ಕಳ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಜ. 6 ರಂದು ಬೆಳಿಗ್ಗೆ 9ಕ್ಕೆ ಬಾಂಬಿಲ ಜಮಾಅತಿನ ಗೌರವಾಧ್ಯಕ್ಷ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಬಾಂಬಿಲ ಮಸೀದಿಯ ವಠಾರದಲ್ಲಿ ಜರಗಲಿದೆ ಎಂದು ಮಸೀದಿ ಆಡಳಿತದ ಅಧ್ಯಕ್ಷ ಬಿ.ಎಂ.ಬಾವ ಮುಸ್ಲಿಯಾರ್ ಹೇಳಿದ್ದಾರೆ.ಬುಧವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಕೆಜೆಯು ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರು ಅಧ್ಯಕ್ಷತೆ ವಹಿಸುವರು. ಡಿ.4 ಮತ್ತು 5 ರಂದು ರಾತ್ರಿ ಧಾರ್ಮಿಕ ಮತಪ್ರಭಾಷಣ ನಡೆಯಲಿದೆ ಎಂದು ಹೇಳಿದರು.ಈ ಬಾರಿ ಜಮಾಅತ್‌ನ ಮೂರು ಬಡ ಜೋಡಿಗಳನ್ನು ಗುರುತಿಸಿದ್ದೇವೆ. ವಧುವಿಗೆ ೫ ಪವನ್ ಚಿನ್ನ, 30 ಸಾವಿರ ರೂ. ಮೌಲ್ಯದ ಉಡುಪು ಹಾಗೂ ವರನಿಗೆ ವಾಚ್, ಉಡುಪುಗಳನ್ನು ಆಡಳಿತ ಸಮಿತಿಯಿಂದ ಉಡುಗೊರೆಯಾಗಿ ನೀಡಲಿದ್ದೇವೆ. ಕಾರ್ಯಕ್ರಮಕ್ಕೆ ಸುಮಾರು 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಬಾಂಬಿಲ ಕೇಂದ್ರ ಜುಮಾ ಮಸೀದಿಯ ಖತೀಬ್ ಎನ್.ಅಬ್ದುಲ್ ಬಶೀರ್ ಯಮಾನಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಿತ್ತಬೈಲ್ ಮಸೀದಿಯ ಖತೀಬ್ ಅಶ್ರಫ್ ಮುಖ್ಯ ಪ್ರಭಾಷಣ ಮಾಡುವರು. ಡಿ. 5ರಂದು ಮಗರಿಬ್ ನಮಾಝಿನ ಬಳಿಕ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿ “ಶಮೀಮೇ ಮದೀನಾ” ತಂಡದಿಂದ ಬುರ್ದಾ ಆಲಾಪನೆ ನಡೆಯಲಿದೆ. ಕಣ್ಣೂರು ಮಸೀರಿಯ ಮುದರ್ರಿಸ್ ಅನ್ಸಾರುದ್ದೀನ್ ಬುರ್ಹಾನಿ ಫೈಝಿ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.ಡಿ. 6 ರಂದು ಬೆಳಿಗ್ಗೆ 9 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇರಳದ ಎನ್.ಪಿ.ಎಂ.ಸೈಯದ್ ಜಲಾಲುದ್ದೀನ್ ತಂಙಳ್ ಏಝ್‌ಮಲ ಅವರು ದುಆಃ ನೆರವೇರಿಸುವರು. ಚೊಕ್ಕಬೆಟ್ಟುವಿನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಬಿ.ಮುಸ್ತಫಾ, ಯೂಸುಫ್, ಆಸಿಫ್ ಉಪಸ್ಥಿತರಿದ್ದರು.

More articles

Latest article