ಅರ್ಧ ರಾತ್ರಿಯಲ್ಲಿ
ಹಿಡಿದ
ಛತ್ರಿ ಕಥೆ ಇದು..!

ಅಂದು
ಗಂಜಿ ಉಂಡು ಶಾಲೆಗೆ ಹೋಗಿ ಬಂದು
ಖಾಲಿ ಪಾತ್ರೆಯ ಹುಡುಕಾಡಿದಿದೆ
ಅಮ್ಮ ಏನು ಮಾಡಿದ್ದಾಳೆ ಎಂದು
ಊರ ಜಾತ್ರೆಗೆಂದೇ ಅಪ್ಪ,ಅಮ್ಮ
ಮಾವ ಕೊಟ್ಟ
ಚಿಲ್ಲರೆ ಕಾಸ ಒಟ್ಟು ಗೂಡಿಸಿ
ಜಾತ್ರೆ ತಿರುಗಿದ್ದು ಮರೆಯಲಾಗದ ಸವಿ ನೆನಪು.
ಹುಣಸೆ,ಮಾವು ಸೀಸನ್‌ಗೆ ಅದರ ಬುಡವೇ ಮನೆ;
ಮಧ್ಯಾಹ್ನದ ಊಟ ಮರೆತದ್ದಿದೆ.
ಅಪ್ಪನ ಜೇಬಿಂದ ಕದ್ದು ಸಿಕ್ಕಿಬಿದ್ದಾಗ ಸಿಕ್ಕ ಏಟು
ಊರ ಜಾತ್ರೆಯಲ್ಲಿ ಅವಳ ಜೊತೆ ತಿರುಗಿದ ವಿಷಯ ತಿಳಿದು
ಅಪ್ಪ ಕೊಟ್ಟ ಚಾಟಿ ಏಟು
ತಪ್ಪು ದಾರಿಯಿಂದ ಸರಿ ದಾರಿಗೆ ಎಳೆದಿದೆ.
ಇಂದು
ಅಮ್ಮ ಸ್ಕೂಲ್ ಬಸ್ ವರೆಗೆ ಒಂದು ತುತ್ತು ತಿನ್ನೆಂದು ಹಿಂದೆ ಓಡಿ ಬರುತ್ತಿದ್ದಾಳೆ
ಸಂಜೆ ಬಂದಾಗ ಹೇಳಿದ ತಿಂಡಿಯೇ ರೆಡಿ ಆಗುತ್ತಿದೆ.!
ಹಣ ಖರ್ಚು ಮಾಡಲು ಜಾತ್ರೆಯೇ ಬರಬೇಕೆಂದಿಲ್ಲ
ಬಿಗ್ ಬಜಾರ್ ಸಿಟಿ ಸೆಂಟರ್ ಹೊಕ್ಕು
ವಾರಕ್ಕೊಮ್ಮೆ ಶಾಪಿಂಗ್ ತಪ್ಪಿದ್ದಿಲ್ಲ.
ಮಾವು ಎಲ್ಲಾ ಸೀಸನ್ ಸಿಗುವ ಹಣ್ಣಾಗಿ ಹೋಗಿದೆ
ಮನೆಯಲ್ಲಿ ಕೊಳೆತು ಹೋಗಿವೆ.
ಬಾಟಲಿ ಮ್ಯಾಂಗೋ ಜೂಸ್ ಗೆ ಬರವಿಲ್ಲ.!
ಪಾಕೆಟ್ ಮನಿ ಹೆಸರಲಿ ಹಣ ಆಗಾಗ ಕಿಸೆ ತುಂಬುತ್ತಿದೆ.
ಕೈ ಕೈ ಏನು ತುಟಿ ತುಟಿ ಸೇರಿಸಿದರೂ ಊರ ಬೀದಿಯಲ್ಲಿ
ದೂರು ಹಿಡಿದು ಮನೆಗೆ ಮುಟ್ಟಿಸುವವರು ಯಾರು ಇಲ್ಲ..
ಅದಕ್ಕೆ ಇಂದು ಯಾವ ಸಂಬಂಧಗಳೂ ನೆಟ್ಟಗಿಲ್ಲ.!
ಐಶ್ವರ್ಯ ಬಂದಿದೆ ನೋಡು
ಅರ್ಧರಾತ್ರಿಯಲ್ಲಿ..
ಛತ್ರಿ ಬಿಡಿಸಿದರೆ ತಪ್ಪೇನು..?

✍ಯತೀಶ್ ಕಾಮಾಜೆ