Tuesday, September 26, 2023

ಇರುಳರಿಯದು ಕರುಳು

Must read

ಕತ್ತಲೆಗೂ ಕೋಡು!
ಸೂರ್ಯನನ್ನೇ ಅಡಗಿಸಿದೆನೆಂಬ
ಅಹಂಕಾರದ ಮಮಕಾರ

ಹಗಲನೆ ಆಪೋಶನ
ತೆಗೆದುಕೊಂಡೆನೆಂಬ
ಬಿರುಬಿಂಕ ಬಿಗುಮಾನ

ಚಂದ್ರ ತಾರೆಗಳಂಗಳಕೆ
ತಾನೆ ಅಧಿಪತಿಯೆಂಬ
ಮದ ಮಹೋತ್ಸವ

ಕಣ್ತೆರೆಯಲಿಲ್ಲ
ನೆಲ ಗೀರಿ ಮಡಿಲ ತಗ್ಗಿಗೆ
ಕಣ್ಣೀರು ತುಂಬಿದವಳೆದೆ ಮಾತಿಗೆ

ಕಿವಿಗೊಡಲಿಲ್ಲ
ಬರಗೆಟ್ಟ ಬಿರಿದೊಡಲ ಹಾಡಿಯವರ
ಕಮರಿದ ಕನಸುಗಳ ಆರ್ತನಾದಕೆ

ಕಳ್ಳ ಸುಳ್ಳರನೆಲ್ಲ ಸಾಕಿ
ಸಲಹಿ ಸ್ವರ್ಗದಲಿಟ್ಟು
ಸಂತಸವ ತುಂಬಿಕೊಂಡೆ ಮೈಮನದಿ

ನಿದ್ರೆಯಿಲ್ಲದ ಅಭದ್ರ
ಜೀವಿಗಳನೆಲ್ಲ ದಿನವೂ
ಇಂಚಿಂಚಾಗಿ ಇರಿದದ್ದೇ ಬಂತು

ಸಾವಿನ ಲೆಕ್ಕಗರೆವ
ಚಿತ್ರಗುಪ್ತನ ತೆರದಿ ಕೂಸು
ಕುನ್ನಿಗಳನೂ ಬಿಡದೆ ತುಳಿದೆ

ಹಗಲು ಸೂರ್ಯನ ಪ್ರವರ
ಇರುಳು ನಿನ್ನಯ ಸಮರ
ಕತ್ತಲೆಯೂ ಹೂವಾಗಲಿಲ್ಲ ಮುಳ್ಳಬಾಳಿಗೆ

#ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

Previous article
Next article

More articles

Latest article