ನುಂಗಿದ ನೆಲದ ಮಣ್ಣನೇ
ಅಂಗಾಂಗಕೆ ಪೂಸಿ
ಎಲ್ಲರ ಕಣ್ಣಲಿ ಅದನೆ ತೂರಿ
ಉಪ್ಪರಿಗೆಯಲಿ ಲಲ್ಲೆಗರೆಯುವ
ಮಲ್ಲ ಮಲ್ಲೆಯರೆ ಬರೆಯುತಿಹರು
ಬಡತನದ ಮೇಲೆ ಮಹಾ ಪ್ರಬಂಧ!

ಎಲ್ಲೊ ಜಾರಿದ ಸೆರಗು
ಇನ್ನೆಲ್ಲೋ ಹಾರಿ ಅಲ್ಲಲ್ಲಿ
ಪರಿಮಳವ ಸುರಿಸಿ ಜೇಂಗುಡಿಸಿ
ಮನ ತಣಿಸಿ ಕಳವಳಿಸಿ ತಳಮಳಿಸಿ
ಬಣ್ಣಗೆಟ್ಟು ಬಸವಳಿದ ಮೇಲೆ
ರಚಿಸುತಿದೆ ಹದಿಬದೆಯ ನಿಬಂಧ!

ಸಿಕ್ಕ ಸಿಕ್ಕಲ್ಲಿ ಇರಿದಿರಿದು
ಕರುಳ ಹರಿದು ಹೆಣಗಳ ರಾಶಿಯನೆ
ಕಾಲಡಿಯ ಥಡಿಯ ಮಾಡಿ
ನಡೆವ ಕ್ರೂರ ಖೂಳರ ಪಾದ
ಪದ್ಮದಡಿಯಲಿ ಜೀವ ಬಿಡದೆ
ಬಿಕ್ಕುತಿರುವ ಎದೆಯ ಮೇಲೇ
ವಿಜೃಂಭಿಸುತಿದೆ ಆದರ್ಶದ ತಮಂಧ!

ಹೇ ಮನುಜ,
ಧಾರ್ಷ್ಟ್ಯದ ದಳ್ಳುರಿಯಲದೆಷ್ಟು
ಖುಷಿಯೊ ನಿನಗೆ?
ನಿನ್ನಿರುವ ನೀನರಿಯೆ
ನಾದ ಹೊರಡದ ಗಂಟೆಯನೆ
ಬಾರಿಸುತ ವಿಹರಿಸುವ ವಿಹಂಗಮವ
ಕಳಚಿ ಎಲ್ಲರೊಳೊಂದಾದ ದಿನವೆ
ಮಾರ್ದಸನಿಸಲಿದೆ ಸಂಬಂಧದ ಅನುಬಂಧ!

#ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here