ಅಮ್ಮನ ಹೊಟ್ಟೆಯೊಳಗಡಿಯಿಡುವ ಮುನ್ನವೇ
ಹಣೆಬರಹ ಬರೆದ ಪ್ರಕೃತಿ ನನ್ನಮ್ಮ//
ನವ ಮಾಸ ಹೊತ್ತು,ಹೆತ್ತು ಸಾಕಿ,
ಸಲಹಿ,ಬೆಳೆಸಿ ಬದುಕಲು ಕಲಿಸಿದ ನನ್ನಮ್ಮ//
ಮಳೆ,ಬೆಳೆ,ನೀರು,ಶುದ್ಧ ಗಾಳಿಯ ಒದಗಿಸಿದ
ಪರಿಸರ ಹಸಿರು ಮಾತೆ ನನ್ನಮ್ಮ//
ಹೊತ್ತು,ನೋಡಿ,ಸಲಹಿ,ಬೆಳೆಸಿ,ಬೈದು
ಹೊಟ್ಟೆ ತುಂಬಾ ತಿನ್ನಿಸಿ ಮುದ್ದಿಸಿದ ಅಜ್ಜಿಯೂ ನನ್ನಮ್ಮ//
ಹೊತ್ತು ಹೊತ್ತಿಗೆ ಸರಿಯಾಗಿ ನಮಗಾಗಿ ಬೇಯಿಸಿ,ಬಡಿಸಿ,
ಆರೋಗ್ಯ ಕೆಟ್ಟಾಗ ಹಪಹಪಿಸಿದ ಹಾಸ್ಟೆಲ್ ಆಂಟಿಯೂ ನನ್ನಮ್ಮ//
ಒಬ್ಬಳೇ ಅಡಿಗೆ ಗೊತ್ತಿಲ್ಲದೆ ಏನನ್ನೋ ಹೇಗೋ
ಬೇಯಿಸಿ ತಿನ್ನುವಾಗ ಆಗಾಗ ಬಂದು ಸಲಹೆ ಕೊಟ್ಟು ಕಲಿಸಿದ
ಪಕ್ಕದ ಮನೆಯಾಂಟಿ ನನ್ನಮ್ಮ//
ಎಲ್ಲೂ ದಿಕ್ಕು ಕಾಣದೆ,ಪರದೇಶಿಯಾಗಿ
ಯಾವುದೋ ಊರಲ್ಲಿ ಕೆಲಸಕ್ಕೆ ನಿಂತಾಗ
ಅನ್ನಪೂರ್ಣೇಶ್ವರಿಯಾದ ಪಿ.ಜಿ.ಆಂಟಿ ನನ್ನಮ್ಮ//
ಮಗು ಚಿಕ್ಕದಿರುವಾಗ, ಸಾಕಲು ಗೊತ್ತಿರದೆ ಪರದಾಡುತಲಿರುವಾಗ
ನನ್ನ ಮಗುವ ತನ್ನ ಮಗುವಂತೆ ಸಾಕಿದ ಯಾರದೋ ಅಜ್ಜಿ ನನ್ನಮ್ಮ//
ಈ ಲೋಕದ ಮಕ್ಕಳನೆಲ್ಲ ಪೊರೆವ
ಪ್ರೀತಿ ಕೊಟ್ಟು ಸಲಹುವ ದುರ್ಗಾ ಮಾತೆ ನನ್ನಮ್ಮ//
ಊಟಕ್ಕೆ,ಬಟ್ಟೆಗೆ ಹಣವ ಒದಗಿಸಿ ಕೊಟ್ಟು
ನನ್ನ ಕೆಲಸಕ್ಕೆ ಬದಲಾಗಿ ನನ್ನಲ್ಲಿಗೆ ಬರುವ ಲಕ್ಷ್ಮಿ
ನನ್ನಮ್ಮ//
ನನ್ನಲ್ಲಿರುವ ವಿದ್ಯೆಯದು ಹಗಲಿರುಳು ಜತೆಗಿಹುದು
ನಾ ಹೋದೆಡೆಯೆಲ್ಲ ಸಹಕರಿಸಿ ಸಾಕುವ ವಿದ್ಯಾ ಶಾರದೆ ನನ್ನಮ್ಮ//
ನನಗೆ ಉಸಿರಿತ್ತು ಕನ್ನಡ ಕಲಿಸಿ,ಕರುನಾಡಲಿ ಬೆಳೆಸುತಲಿರುವ
ಕನ್ನಡ ಮಾತೆ ಭುವನೇಶ್ವರಿ ನನ್ನಮ್ಮ//
ಮಾತೆಯ ಮಾತೆ, ಪ್ರಪಂಚದ ಯಾವ ಮೂಲೆಗೆ ತಿರುತಿರುಗಿದರೂ
ನಾನು ಭಾರತೀಯಳೆಂಬ ಹೆಮ್ಮೆಯ ಕೊಟ್ಟ ಭಾರತ ಮಾತೆ ನನ್ನಮ್ಮ//

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here