ನಮ್ಮ ರಾಜಕೀಯ ಪಕ್ಷಗಳ ಚಿಹ್ನೆಗಳು ಎಷ್ಟಿವೆ ಒಮ್ಮೆ ನೋಡಿ😉 ಅವುಗಳನ್ನೆ ನೇರ ಮತ್ತು ಪರೋಕ್ಷವಾಗಿ ಬಳಸಿ ಬರೆದ ಕವನ ಈಗ ನಿಮ್ಮ ಮುಂದೆ😊

ತೆನೆ ಹೊತ್ತು ಸಾಗುವ ಬಲು ಘಾಟಿ ಹೆಣ್ಣೆ
ನಿನಗೆ ಯಾಕೆ ಮಣ ಭಾರ ಈ ಹೊರೆ
ಬಾಡುವ ಬಿಸಿಲಿಗೆ ತೀರದ ಬವಣೆ
ಸುಸ್ತಾದ ಮನಕ್ಕೀಗ ತಂಪು ಚಂದ್ರನ ಕರೆ
ಉದಯಿಸುವ ಸೂರ್ಯ ಉರಿದುರಿದು
ಪಡೆಯಲಾಗದ ಕೊರಗು ನಿನ್ನ ನೆನೆನೆನೆದು
ಎರಡೆಲೆ ಮರದಡಿ ಹೂ ಹುಲ್ಲು ಹಾಸು
ಕುಳಿತು ದಣಿವಾರಿಸಿಕೊಳ್ಳೆ ಚೂರು ನೆರಳು
ಓಡುವ ಈ ಸಮಯ ಗಡಿಯಾರಕ್ಕೆ ಬೀಗ
ತಡೆ ಹಿಡಿದಿದೆ ನಿನ್ನ ಕಣ್ಣ ಬಿಲ್ಲು ಬಾಣ
ಬಾಯಾರಿರುವೆ ಬಾಳೆ ಮಾವು ಉಪಚಾರ
ಇರು ಕೆಟ್ಟು ನಿಂತಿವೆ ಸೈಕಲ ಇತರೆ ವಾಹನ
ಗುಡಿಸಿ ಹಾಕಿರುವೆ ಬೇಡವಾದ ಹಕೀಕತ್ತು
ಹೃದಯ ಕಮಲದಲ್ಲಿ ಅಚ್ಚೊತ್ತಿ ಗುರುತು
ಹಾರಿ ಬಿಟ್ಟ ಪಟ ತೇಲಿದಂತೆ ಗಾಳಿಯಲ್ಲಿ
ಕೆನ್ನೆಗೆ ಸಿಹಿ ಮುದ್ರೆ ಅಧರಗಳ ಒತ್ತು
ಕೊಡದೆ ಕೈ ಹಿಡಿ ಒಮ್ಮೆ ಬಿಡದಂತೆ ಬೆಸೆದು
ಸೆಕೆಯ ಬಿಸಣಿಗೆ ನನ್ನ ಬೆವರ ಉಳುಮೆ
ಬಾರೆ ನೀನಿಡುವ ಹೆಜ್ಜೆ ಜಂಬೂಸವಾರಿ
ನಿತ್ಯ ರಾತ್ರಿ ನಕ್ಷತ್ರದ ಲೆಕ್ಕ ಎದೆಗಪ್ಪಿ ಕೊಡೆ

ಬಸವರಾಜ ಕಾಸೆ