ಬಂಟ್ವಾಳ : ಬಂಟ್ವಾಳ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜು ಕನ್ಯಾನ ಇಲ್ಲಿನ ಕನ್ನಡ ಭಾಷಾ ಶಿಕ್ಷಕಿ ಶಾಂತಾ ಕನ್ಯಾನ ಇವರು 2018 ನೇ ಸಾಲಿನ ಜ್ಞಾನಸಿಂಧು ಪ್ರಶಸ್ತಿ ಪುರಸ್ಕೃತರಾಗಿರುತ್ತಾರೆ.
ಸಾಹಿತ್ಯ , ಶೈಕ್ಷಣಿಕ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧಕರನ್ನು ಗುರುತಿಸಿ ಶಿಕ್ಷಣ ಜ್ಞಾನ ಪತ್ರಿಕೆಯ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದು ಕಳೆದ 25 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಲಿ-ಕಲಿ , ಯೋಗ ಶಿಕ್ಷಣದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದು . ರಾಜ್ಯ ಮಟ್ಟದ ಯೋಗಾಸನ ತೀರ್ಪುಗಾರರಾಗಿರುತ್ತಾರೆ. ಶಾಂತಿವನ ಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಧರ್ಮಸ್ಥಳ ಇದರ ಬಂಟ್ವಾಳ ತಾಲೂಕು ಯೋಗ ಸಂಘಟನೆ ಹಾಗೂ ಭಾರತ್ ಸ್ಕೌಟ್-ಗೈಡ್ಸ್ ಸಂಸ್ಥೆ ವಿಟ್ಲ ಇದರ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದು ವಿದ್ಯಾರ್ಥಿಗಳನ್ನು ತೃತೀಯ ಸೋಪಾನ ಪರೀಕ್ಷೆ ತನಕ ತರಬೇತುಗೊಳಿಸಿರುತ್ತಾರೆ. ಕನಸು ಕ್ಲಸ್ಟರ್ ಪ್ರತಿಕೆಯ ಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದು ಯೋಗದಲ್ಲಿ ಡಿಪ್ಲೋಮಾ ಶಿಕ್ಷಣ ಪಡೆದಿದ್ದು ಯೋಗ ಭೂಷಣ ಪ್ರಭೋದ ಪರೀಕ್ಷೆ ಉತ್ತೀರ್ಣರಾಗಿ ಯೋಗ ಭೂಷಣ ಪ್ರಶಸ್ತಿ ಗೋಲ್ಡ್ ಮೆಡಲ್ ಪಡೆದಿರುತ್ತಾರೆ.
ಪಂಚಮುಖಿ ವ್ಯಕ್ತಿತ್ವ ವಿಕಸನ , ಜೀವನ ವಿಜ್ಞಾನ ಕ್ರಿಯಾ ಸಂಶೋಧನೆ ಕಿಶೋರಿ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಂಪನ್ಮೂಲ ವ್ಯಕ್ತಿಯಾಗಿ ಹಲವು ತರಬೇತಿ ಮಾಡಿದ್ದು ಸಾರ್ವಜನಿಕರಿಗೆ ಯೋಗ ಶಿಕ್ಷಣ ನೀಡಿರುತ್ತಾರೆ. ಗಮಕ ಕಲಾ ಪರಿಷತ್ತು , ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಾಹಿತ್ಯ , ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದು ವಿದ್ಯಾರ್ಥಿಗಳನ್ನು ತೊಡಗಿಸಿರುತ್ತಾರೆ. ಬಂಟ್ವಾಳ ತಾಲೂಕು ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ಅತ್ಯುತ್ತಮ ಸಾಧಕ ಶಿಕ್ಷಕಿ ಪುರಸ್ಕಾರ ಪಡೆದಿರುತ್ತಾರೆ.
