ವಿಟ್ಲ: ಸರಕಾರದ ಕಾಮಗಾರಿಗಳನ್ನು ಟೆಂಡರ್‌ನಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸಲು ಮತ್ತು ಅದರ ಗುಣಮಟ್ಟವನ್ನು ಕಾಪಾಡುವಂತೆ ನಿಗಾ ವಹಿಸುವ ಕಾರ್‍ಯಕ್ಕೆ ತಾನು ಒತ್ತು ಕೊಡುತ್ತಿದ್ದೇನೆ. ಕೆಲಸ ನಡೆಯುವಾಗ ಗುಣ ಮಟ್ಟದ ಬಗ್ಗೆ ಫಲಾನುಭವಿಗಳೂ ಗಮನ ಹರಿಸುವ ಅಗತ್ಯವಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಬಲ್ನಾಡು ಗ್ರಾ.ಪಂ.ವ್ಯಾಪ್ತಿಯ ದೇರಾಜೆ-ಚನಿಲ ರಸ್ತೆ ದುರಸ್ತಿ ಮತ್ತು ಕೆರೆಮೂಲೆ-ಕಬರಮುಗೇರು ಕುಡಿಯುವ ನೀರಿನ ಪೈಪು ಲೈನ್ ವಿಸ್ತರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ದೇರಾಜ-ಚನಿಲ ರಸ್ತೆ ದುರಸ್ತಿಗೆ ಟಾಸ್ಕ್‌ಫೋರ್ಸ್ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಸೇರಿ ಒಟ್ಟು ರೂ. 10 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಸರಕಾರದಿಂದ ಸಾಕಷ್ಟು ಅನುದಾನ ದೊರಕದೆ ಇರುವುದರಿಂದ ಮಂಜೂರಾದ ಹಣವನ್ನು ಅಗತ್ಯವಿರುವಲ್ಲಿಗೆ ವಿನಿಯೋಗ ಮಾಡುತ್ತಿದ್ದೇನೆ. ಬಲ್ನಾಡು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಲೋನಿ ಅಭಿವೃದ್ಧಿಗೆ ರೂ. 10 ಲಕ್ಷ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್ ಆಗಿದೆ ಎಂದರು.
ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ, ಚನಿಲ-ದೇರಾಜೆ ರಸ್ತೆಯ ಸುಮಾರು 1 ಕಿ.ಮೀ. ಭಾಗ ತೀರ ಹದಗೆಟ್ಟಿದ್ದು, ಬಿಡುಗಡೆಯಾದ ಅನುದಾನದಲ್ಲಿ ಶೇ.50 ರಷ್ಟು ಭಾಗ ದುರಸ್ತಿಯಾಗಬಹುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಶಯನಾ ಜಯಾನಂದ, ತಾ.ಪಂ.ಸದಸ್ಯೆ ದಿವ್ಯ ಪುರುಷೋತ್ತಮ್, ಬಲ್ನಾಡು ಗ್ರಾ.ಪಂ.ಸದಸ್ಯರಾದ ಬಾಲಕೃಷ್ಣ ನಾಯ್ಕ, ಇಂದಿರಾ ಎಸ್. ರೈ ಬೀಡು, ಬಿಜೆಪಿ ಗ್ರಾಮ ಸಮಿತಿ ಪ್ರ. ಕಾರ್‍ಯದರ್ಶಿ ಶಿವಪ್ರಸಾದ್ ರೈ ಉಪಸ್ಥಿತರಿದ್ದರು.
ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಗತಿಸಿದರು. ಅನಂತರಾಮ ರೈ, ಮಮತಾ, ಯಮುನಾ, ರಾಮಚಂದ್ರ ರೈ ಬೀಡು, ನಾರಾಯಣ ನಾಯ್ಕ, ಜಗನ್ಮೋಹನ ರೈ, ನಾರಾಯಣ ಪಾಟಾಳಿ ಸಹಕರಿಸಿದರು. ಬಜರಂಗ ದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ವಂದಿಸಿದರು.


