


ಹಣೆಯಲೇ ಇಲ್ಲದ ಗೆರೆಗಳ
ಅಂಗೈಲಿ ಹುಡುಕುವ ಜ್ಯೋತಿಷಿ
ಗಳಿಗೆ ಜೋತು ಬಿದ್ದಿರುವ ಮೂಢ
ಹುನ್ನಾರಕೆ ಅದೆಷ್ಟು ಬಲಿಗಳು!
ಜಗದ ಜನರನುದ್ಧರಿಸುವ
ಪಂಡಿತನ ಮೂರ್ಖ ಮುಖ
ಮಂಟಪದ ಮುಂದೆ ಅದೆಷ್ಟು
ಬಿರುದು ಬಾವಲಿಗಳು!
ಏರಿಳಿತ,ಹಗಲು ರಾತ್ರಿ
ನೋವು ನಲಿವಿನಲಿ ನಿಲ್ಲದ
ಬದುಕಿನಲೇ ಎಲ್ಲ ಸಾಗಿರುವಾಗ
ಬಂದುದನು ಎದೆಗೊತ್ತಿ ಸಾಗುವ
ಧೈರ್ಯಗೈಯದೆ ಪುಂಡ
ಪೋಕರಿಗಳ ಕಾಲಡಿಯಲ್ಲಿ ಘಟವ
ಚೆಲ್ಲಿ ಗೋಗರೆಯುವ ತಂಡ
ವಿತಂಡ ಮನಸುಗಳು!
ಉಸಿರಿಗಿರುವನು ಪವನ
ಹಸಿರಿಗಿಲ್ಲಿದೆ ಸಿರಿವನ ಬಿಸಿಲು
ಬೆಳಕಿಗುಂಟು ದಿನಕರ
ಇರುಳ ರಸ ಕುಡಿಯಲಲ್ಲಿದೆ
ಮೇಲೆ ತಿಳಿ ಮುಗಿಲು ಚಂದ್ರ
ತಾರೆ, ಬೆಸಗೈಯ್ವ ಭಾವ
ಭಾಷೆಗಿಲ್ಲಿಲ್ಲ ಇನಿತು ತೊಂದರೆ
ನನಸುಗಳ ಧಿಕ್ಕರಿಸಿ ಕನಸು
ಗಳಡಿಯಲಿ ನರಳುತಿರುವ
ಕುಂಟು ನೆಪಗಳು!
ಅವಸರಕೆ ಸರಮಾಲೆ ಹಾಕಿ
ಉಸಿರುಗರೆಯುತ್ತ ಏಗುವ
ಬದುಕನೆ ತಮ್ಮದಾಗಿಸಿಕೊಂಡು
ಹಪಹಪಿಸುವ ತುಡಿತಕೆ ತೋರಣ
ಕಟ್ಟಿ ಸುಖದ ಭಟ್ಟಿ ಇಳಿಸುವ
ಕಾಯಕವ ಬಿಸುಟದಿರೆ ಇನ್ನೆಲ್ಲಿ
ಕಾಣುವಿರಿ ಸುಖ ಸಂತಸ?
ಬೇಡ ಬನ್ನಿ ಇಲ್ಲೇ ಹುಡುಕುವ
ನಂಮಾಳದಲೇ ಢಾಳಾಗಿವೆ
ಎಲ್ಲ ದಿನಸುಗಳು!

#ನೀ.ಶ್ರೀಶೈಲ ಹುಲ್ಲೂರು
ಜಮಖಂಡಿ – 58730


