Monday, September 25, 2023
More

    ‘ಸರಕಾರಿ ಶಾಲೆಗಳು ಉಳಿದಾಗ ಮಾತ್ರ ನಮ್ಮ ದೇಶೀಯ ಸಂಸ್ಕೃತಿ ಉಳಿಯಬಹುದು’-ಮಠಂದೂರು

    Must read

    ವಿಟ್ಲ: ಸರಕಾರಿ ಶಾಲೆಗಳು ಉಳಿದಾಗ ಮಾತ್ರ ನಮ್ಮ ದೇಶೀಯ ಸಂಸ್ಕೃತಿ ಉಳಿಯ ಬಹುದು. ಗ್ರಾಮೀಣ ಜನರು ಭಾರತೀಯ ಸಂಸ್ಕೃತಿಯೊಂದಿಗೆ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
    ಅವರು ವಿಟ್ಲ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಊರಿನ ವಿದ್ಯಾ ಕೇಂದ್ರಗಳ ಅಭಿವೃದ್ಧಿಗೆ ಸಹಕರಿಸುವ ವಿದ್ಯಾಭಿಮಾನಿಗಳ ಸೇವೆಯಲ್ಲಿ ಮಹತ್ತರ ಸಾಮಾಜಿಕ ಕಳಕಳಿಯಿದೆ ಎಂದರು. ಶಾಲೆಗೆ 2 ಲಕ್ಷ ರೂ. ವೆಚ್ಚದ ಶುದ್ಧ ನೀರಿ ಘಟಕ ಒದಗಿಸುವುದಾಗಿ ಭರವಸೆ ನೀಡಿದರು.
    ಶಿಕ್ಷಣ ಚಿಂತನೆಯ ಬಗ್ಗೆ ಮಾತನಾಡಿದ ಮಂಗಳೂರು ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಉಪನ್ಯಾಸಕ ಡಾ. ಕುಮಾರ ಸ್ವಾಮಿ ಹೆಚ್. ಮಾತನಾಡಿ ಸುಶಿಕ್ಷಿತರಿಂದಲೇ ಸಮಾಜದಲ್ಲಿ ಮೋಸ ನಡೆಯುತ್ತಿರುವುದು ಖೇದಕರವಾಗಿದೆ. ಉನ್ನತ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಸಾಮಾಜಿಕವಾಗಿ ಗುರುತಿಸಲ್ಪಡುವಂತಾಗಲು ಹೆತ್ತವರ ಮೂಲ ಸಂಸ್ಕಾರ ಕಾರಣವಾಗುತ್ತದೆ. ಮಕ್ಕಳನ್ನು ಸಹಜವಾಗಿ ಬದುಕಲು ಬಿಡಬೇಕು. ಕೇವಲ ಅಂಕ ಗಳಿಸುವ ಆತುರಕ್ಕೆ ಬಿದ್ದು, ಮಕ್ಕಳ ನೈಜ ಪ್ರತಿಭೆ, ವ್ಯಕ್ತಿತ್ವವನ್ನೇ ಹೆತ್ತವರು ಕಸಿದುಕೊಳ್ಳಬಾರದು. ಕನ್ನಡ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಸೌಲಭ್ಯವಿದ್ದರೂ, ಆಂಗ್ಲ ಭಾಷಾ ಮಾಧ್ಯಮ ಶಿಕ್ಷಣದ ಬೆನ್ನು ಹತ್ತಿರುವುದು ಜಾಣತನವಲ್ಲ ಎಂದ ಅವರು ಮಕ್ಕಳನ್ನು ಟಿವಿ, ಮೊಬೈಲ್ ಸಾಂಗತ್ಯದಿಂದ ದೂರವಿರಿಸಿ ಎಂದು ಕವಿ ಮಾತು ಹೇಳಿದರು.
    ಮುಖ್ಯ ಅತಿಥಿಯಾಗಿ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ವಿಟ್ಲ, ಶಿಕ್ಷಣ ಸಂಯೋಜಕಿ ಸುಶೀಲ, ಭಾಗವಹಿಸಿದ್ದರು. ಸಮಾರಂಭದಲ್ಲಿ ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಪೈ, ಅತ್ತಾವರ ಸರಕಾರಿ ಶಾಲಾ ಶಿಕ್ಷಕ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
    ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ೨೪ ವರ್ಷ ಕರ್ತವ್ಯ ನಿರ್ವಹಿಸಿ ಮುಖ್ಯ ಶಿಕ್ಷಕರಾಗಿ ವರ್ಗಾವಣೆಗೊಂಡ ವಿಶ್ವನಾಥ ಗೌಡ ಕುಳಾಲು ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ಹಸ್ತಪ್ರತಿ ಪುಸ್ತಕ ’ಬಾಲ ಬಂಧು’ ಬಿಡುಗಡೆಗೊಳಿಸಲಾಯಿತು.
    ಸಹ ಶಿಕ್ಷಕ ದಯಾನಂದ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಕೆ. ವಂದಿಸಿದರು. ಮುಖ್ಯ ಶಿಕ್ಷಕಿ ಪುಷ್ಪಾ ಹೆಚ್. ವರದಿ ವಾಚಿಸಿದರು. ಸಹಶಿಕ್ಷಕರಾದ ಜಯಂತಿ, ರಮಾ, ದೇವಕಿ ಅಮ್ಮ ಸಹಕರಿಸಿದರು. ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಲಾ ಪ್ರದರ್ಶನಗೊಂಡಿತು.

    More articles

    LEAVE A REPLY

    Please enter your comment!
    Please enter your name here

    Latest article