Wednesday, October 18, 2023

ರಾಯಚೂರು ಗ್ರಾಮ ಲೆಕ್ಕಾಧಿಕಾರಿ ಹತ್ಯೆ: ಬಂಟ್ವಾಳದಲ್ಲಿ ಪ್ರತಿಭಟನೆ

Must read

ಬಂಟ್ವಾಳ: ರಾಯಚೂರು, ಮಾನ್ವಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಅವರನ್ನು ಹತ್ಯೆ ಮಾಡಲಾದ ಕೃತ್ಯವನ್ನು ಖಂಡಿಸಿ ಬಂಟ್ವಾಳ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಬಂಟ್ವಾಳ ತಾಲೂಕು ಕಂದಾಯ ನೌಕರರ ಸಂಘ, ತಾಲೂಕು ಮಟ್ಟದ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಾಗೂ ತಾಲೂಕು ಗ್ರಾಮ ಸಹಾಯಕರ ಸಂಘದ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.


ಕರ್ತವ್ಯನಿರತರಾಗಿದ್ದ ಸಾಹೇಬ್ ಪಾಟೀಲ್ ಎಂಬವರು ಅಕ್ರಮ ಮರಳುಗಾರಿಕೆ ಮಾಡುತ್ತಿದ್ದವರನ್ನು ತಡೆಯಲು ಯತ್ನಿಸಿದ ವೇಳೆ ಅವರ ಮೇಲೆ ಲಾರಿ ಹರಿಸಿ ಹತ್ಯೆ ನಡೆಸಲಾಗಿದೆ.
ಇದನ್ನು ಸರಕಾರ ಘೋರ ಘಟನೆ ಎಂದು ಪರಿಗಣಿಸಿ, ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಬೇಕಾಗಿ ಜಿಲ್ಲಾ ಕಂದಾಯ ನೌಕರರ ಕೋಶಾಧಿಕಾರಿ ಪ್ರಸನ್ನ ಪಕ್ಕಳ ಅವರು ಆಗ್ರಹಿಸಿದರು.
ಸರಕಾರಿ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ತುರ್ತು ಸಂದರ್ಭಗಳಲ್ಲಿ ಜೀವ ರಕ್ಷಣೆಯನ್ನು ಒದಗಿಸುವ ಕೆಲಸ ಸರಕಾರ ಮಾಡ ಬೇಕು ಎಂದು ಇದೇ ಸಂದರ್ಭದಲ್ಲಿ ತಾಲೂಕು
ಕಂದಾಯ ಇಲಾಖೆಯ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು ಹೇಳಿದರು.
ಬಂಟ್ವಾಳ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಅವರ ಮುಖಾಂತರ ಹತ್ಯಾ ಪ್ರಕರಣವನ್ನು ಖಂಡಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ತಾಲೂಕು ಗ್ರಾಮಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ತೌಫೀಕ್ ಅವರು ಹತ್ಯೆಯನ್ನು ಖಂಡಿಸಿ ಮಾತನಾಡಿದರು. ಉಪತಹಶೀಲ್ದಾರ್ ರವಿಶಂಕರ್,ಪ್ರಭಾರ ಉಪತಹಶೀಲ್ದಾರ್ ಸೀತಾರಾಮ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಆಹಾರ ಶಾಖೆಯ ಆಹಾರ ನಿರೀಕ್ಷಕ ಶ್ರೀನಿವಾಸ, ತಾಲೂಕು ಕಚೇರಿಯ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಭಾಗವಹಿಸಿದರು.
ಕೈಗೆ ಕಪ್ಪುಪಟ್ಟಿ ತೊಟ್ಟು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಬಂಟ್ವಾಳ ಕಂದಾಯ ಇಲಾಖಾಧಿಕಾರಿಗಳು ಮತ್ತು
ಸಿಬ್ಬಂದಿಗಳು ಮೃತರಿಗೆ ಸಾಮೂಹಿಕವಾಗಿ ಸಂತಾಪ ಸೂಚಿಸಿದರು.

More articles

Latest article