Sunday, October 22, 2023

ಯೇನಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಮಾಹಿತಿ ಶಿಬಿರ

Must read

ಮಂಗಳೂರು: ರಕ್ತದಾನದ ಬಗ್ಗೆ ಸಮರ್ಪಕ ಮಾಹಿತಿಯನ್ನು ತಿಳಿದುಕೊಂಡಾಗ , ರಕ್ತದಾನದ ಮಹತ್ವದ ಅರಿವು ಮೂಡಲು ಸಾಧ್ಯ  ಈ ಹಿನ್ನೆಲೆಯಲ್ಲಿ ರಕ್ತದಾನದ ಕುರಿತಾಗಿ ಜಾಗೃತಿ ಮೂಡಿಸುವ ನಾಟಕ ಹಾಗೂ ಮಾಹಿತಿ ಕಾರ್ಯಾಗಾರವು ಮಂಗಳೂರು ಕೊಡಿಯಾಲ್ ಬೈಲಿನಲ್ಲಿರುವ ಯೇನಪೋಯ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ನಡೆಯಿತು.

ಆಸ್ಪತ್ರೆಯ ಹೃದ್ರೋಗ ಶಸ್ತ್ರಚಿಕಿತ್ಸಾಕೊಠಡಿಯ ಮೇಲ್ವಿಚಾರಕಿ ಸಿಸಿಲಿ ವಿ.ಎ.ರವರ ಮಾರ್ಗದರ್ಶನದಲ್ಲಿ ಶುಶ್ರೂಷೆ ಸಿಬ್ಬಂದಿಗಳಾದ ಲವೀನ, ರಾಧಿಕಾ ಹಾಗೂ ದಿವ್ಯಶ್ರೀ ಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ರಕ್ತದಾನದ ಬಗೆಗಿನ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ ನಷ್ಟು ರಕ್ತವಿರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ  350 ಮಿ.ಲೀನಷ್ಟೇ ರಕ್ತವನ್ನುದಾನಿಯಿಂದ ಸ್ವೀಕರಿಸುವುದರಿಂದ ಯಾವುದೇ ಅಪಾಯವಾಗುವುದಿಲ್ಲ, 18 ರಿಂದ 60 ವರ್ಷದೊಳಗಿನ, ಸರಿಯಾದ ತೂಕ ಹೊಂದಿರುವ,  12ಗ್ರ್ಯಾಮ್‌ಗಿಂತಲೂ ಹೆಚ್ಚು  ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲಾ ಆರೋಗ್ಯವಂತರೂ ರಕ್ತದಾನ ಮಾಡಬಹುದು. ಲಿವರ್, ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವವರು, ಹಾಲುಣಿಸುವ ತಾಯಂದಿರು, ರಕ್ತ ಹೀನತೆ,ಮದುಮೇಹ, ಕ್ಯಾನ್ಸರ್, ಕ್ಷಯ, ಅಧಿಕ ರಕ್ತದೊತ್ತಡ, ಅಪಸ್ಮಾರ ಮುಂತಾದ ತೊಂದರೆಗಳಿರುವವರು ರಕ್ತದಾನ ಮಾಡಬಾರದು.

ರಕ್ತದಾನ ಮಾಡುವ ವ್ಯಕ್ತಿ ಒಂದು ಗಂಟೆ ಮುಂಚಿತವಾಗಿ ಸಮರ್ಪಕ ಆಹಾರ ಸೇವಿಸಬೇಕು,ರಕ್ತದಾನದ ಬಳಿಕ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕು. ಆ ದಿನ ಹೆಚ್ಚು ನೀರನ್ನು ಕುಡಿದರೆ ಒಳ್ಳೆಯದು. ಮೂರು  ತಿಂಗಳೊಳಗಾಗಿ ದಾನಿಯ ದೇಹದಲ್ಲಿ ರಕ್ತವು ಮರು ತಯಾರಾಗುತ್ತದೆ. ದಾನಿಯಿಂದ ಪಡೆದ ರಕ್ತವನ್ನು ಸೂಕ್ತ ಪರೀಕ್ಷೆಗೆ ಒಳಪಡಿಸಿ , ಅಗತ್ಯ ಬಿದ್ದಾಗ ಮತ್ತೊಬ್ಬರಿಗೆ ವಿತರಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಲಾಯಿತು.

ಅಲ್ಲದೆ ಯಾವ ರಕ್ತದ ಗುಂಪಿನ ವ್ಯಕ್ತಿ ಯಾರಿಗೆ ರಕ್ತದಾನ ಮಾಡಬಹುದು, ಯಾರಿಂದ ಸ್ವೀಕರಿಸಬಹುದು ಮೊದಲಾದ ಅಂಶಗಳನ್ನುಅರ್ಥಪೂರ್ಣವಾಗಿ ಮನದಟ್ಟು ಮಾಡಲಾಯಿತು. ಮಾಹಿತಿ ಕಾರ್ಯಾಗಾರಕ್ಕೆ ಮುನ್ನ ಶುಶ್ರೂಷೆ ಮೇಲ್ವಿಚಾರಕಿ ಮೇರಿ ಮತ್ತು ಬಳಗದಿಂದ ಜಾಗೃತಿ ನಾಟಕ ಪ್ರದರ್ಶಿಸಲಾಯಿತು.

ಆಸ್ಪತ್ರೆಯ ಶುಶ್ರೂಷೆ ಸಿಬ್ಬಂದಿಗಳಾದ ಅಖಿಲ್, ಮನು, ತೇಜಸ್ವಿನಿ, ಅಂಬಿಕಾ, ಅಕ್ಷತಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

More articles

Latest article