ಬಂಟ್ವಾಳ : ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ತಾಲೂಕು ಗೋಕುಲೋತ್ಸವ ಸಮಿತಿ ಇದರ ವತಿಯಿಂದ ಡಿ. 25ರಂದು ಮಂಗಳವಾರ ಗೋಕುಲೋತ್ಸವ ಶೋಭಾಯಾತ್ರೆಗೆ ಬಿ.ಸಿ.ರೋಡು ಕೈಕಂಬ ದ್ವಾರದಲ್ಲಿ
ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿ ಚಾಲನೆ ನೀಡಿದರು.
ಡಾ.ಪ್ರಭಾಕರ ಭಟ್, ಐತಪ್ಪ ಆಳ್ಚ, ಸುಭಾಶ್ಚಂದ್ರ ಜೈನ್, ಸುಭಾಶ್ಚಂದ್ರ ಕಳಂಜ, ಕಾತಪ್ಪ ಶೆಟ್ಟಿ ಕೊಡ್ಮಾಣ್, ವೆಂಕಟ್ರಮಣ ಹೊಳ್ಳ ಮತ್ತಿತರರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.


ಶೋಭಾಯಾತ್ರೆಯು ಬಿ.ಸಿ.ರೋಡ್ ಕೈಕಂಬದಿಂದ `ಸ್ಪರ್ಶ ಕಲಾ ಮಂದಿರ’ ದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ಮಾತನಾಡಿ
ನವಭಾರತದ ನಿರ್ಮಾಣ ಮಕ್ಕಳ ಕೈಯಲ್ಲಿದೆ. ಮಕ್ಕಳಿದ್ದಾಗಲೇ ಭವಿಷ್ಯದ ಜೀವನದ ಬಗ್ಗೆ ನೈತಿಕತೆ ಮತ್ತು ಸಂಸ್ಕಾರದ ಪಾಠ ಕಲಿತುಕೊಳ್ಳಬೇಕು. ಇಟ್ಟಿಗೆ ಹಸಿಯಾಗಿದ್ದಾಗಲೇ ಅದರ ಮೇಲೆ ಮುದ್ರೆ ಒತ್ತಲು ಹೇಗೆ ಸಾಧ್ಯವೋ, ಅಂತೆಯೇ ಚಿಕ್ಕ ಮಕ್ಕಳಿಗೆ ಜೀವನ ಪಾಠ ತಿಳಿ ಹೇಳಲು ಸಾಧ್ಯವಿದೆ ಎಂದು ಹೇಳಿದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಥವಾ ಮದುವೆ, ಇನ್ನಿತರ ಆಮಂತ್ರಣ ಪತ್ರಿಕೆಗಳಲ್ಲಿ ದೇವರ ಭಾವಚಿತ್ರ ಅಥವಾ ಭಾರತ ಮಾತೆಯ ಚಿತ್ರ ಮುದ್ರಿಸಬೇಡಿ. ಯಾಕೆಂದರೆ, ರಸ್ತೆಗಳಲ್ಲಿ ಬಿಸಾಡಬಹುದಾದ ಇಂತಹ ಪತ್ರಿಕೆಗಳ ಮೇಲೆ ಸಾರ್ವಜನಿಕರು ಉಗುಳುವ, ನಡೆದುಕೊಂಡು ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ಇದನ್ನು ನಿಲ್ಲಿಸಿ ಎಂದವರು ಗೋಕುಲೋತ್ಸವ ಸಮಿತಿ ಹಾಗೂ ಸಂಘ-ಸಂಸ್ಥೆಗಳು, ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರೆಸ್ಸೆಸ್ ಪುತ್ತೂರು ಜಿಲ್ಲಾ ಸಹ-ಕಾರ್ಯವಾಹ ಸುಭಾಶ್ಚಂದ್ರ ಕಳಂಜ ವ್ಯಕ್ತಿಯಲ್ಲಿ ವ್ಯಕ್ತಿತ್ವ ನಿರ್ಮಾಣವಾಗಬೇಕು. ಈ ದೆಸೆಯಲ್ಲಿ ನಾವೀಗ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಪಾಶ್ಚಾತ್ಯ ಆಚರಣೆಗಳೇ ಹಾಸು ಹೊಕ್ಕಾಗಿರುವ ಇಂದು ನಮ್ಮ ಸಂಸ್ಕøತಿ ಮರೆತಿದ್ದೇವೆ. ಸಮಾಜದ ಭಾಗವಾಗಿ ಸಂಘಗಳು ಇಂತಹ ಕೆಲಸ ಮಾಡಬೇಕು. ಮನೆ ಸಂಸ್ಕಾರದ ಕೇಂದ್ರವಾಗಬೇಕಿದ್ದರೂ, ಆಧುನಿಕ ಕಾಲಘಟ್ಟದಲ್ಲಿ ಎಲ್ಲರೂ ತುರ್ತಾಗಿದ್ದಾರೆ. ಆದ್ದರಿಂದ ಇಂತಹ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಲು ಅಲ್ಲಲ್ಲಿ ಬಾಲಗೋಕುಲಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿ ಸಿ ರೋಡ್ ಪದ್ಮ ಸರ್ವಿಸ್‍ನ ಸುಜೀರುಗುತ್ತು ಐತಪ್ಪ ಆಳ್ವ ಸುಜೀರುಗುತ್ತು
ಹಿಂದೂ ಎಂಬ ವಿಷಯದ ಬಗ್ಗೆ ನಾನು ಬಾಲ್ಯದಲ್ಲಿ ಹೆಚ್ಚೇನೂ ತಿಳಿದಿಲ್ಲ. ಆದರೆ ಈಗ ಅದರ ಅಗತ್ಯದ ಬಗ್ಗೆ ತಿಳಿದುಕೊಂಡಿದ್ದೇನೆ. ಭಗವದ್ಗೀತೆ ಮತ್ತು ಇತರ ಧಾರ್ಮಿಕ ಹಿನ್ನೆಲೆಯುಳ್ಳ ಗ್ರಂಥಗಳ ಅಧ್ಯಯನ ಮನುಷ್ಯರ ಜೀವನ ಸಾರ್ಥಕಗೊಳಿಸುವಲ್ಲಿ ದಾರಿದೀಪವಾಗಿದೆ. ಇಂತಹ ಗ್ರಂಥಗಳಿಗೆ ಹಿಂದೂಗಳು ಹೆಚ್ಚೆಚ್ಚು ಮಹತ್ವ ನೀಡಬೇಕೆಂದು ಹೇಳಿದರು.

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿದರು.
ಈ ಸಂದರ್ಭದಲ್ಲಿ ವೆಂಕಟರಮಣಹೊಳ್ಳ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ರಾಮಕೃಷ್ಣ ಪ್ರಭು ಕುಜಿಲಬೆಟ್ಟು ದಾಮೋದರ ನೆತ್ತೆರ್‍ಕೆರೆ ಸ್ವಾಗತಿಸಿದರು. ಲತಾ ಭಂಡಾರಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಭರತ್ ಕುಮಾರ್ ವಂದಿಸಿದರು. ಬಳಿಕ ಸ್ಪರ್ಶ ಕಲಾ ಮಂದಿರದಲ್ಲಿ ಪುಟಾಣಿಗಳಿಂದ ವಿವಿಧ ಪ್ರತಿಭಾ ಪ್ರದರ್ಶನ, ಆಟೋಟ ಸ್ಪರ್ಧೆಗಳು ಜರುಗಿತು.LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here