ನಡೆದಿದೆ ನೋಡಿ ಅಂದಿಗೂ ಇಂದಿಗೂ
ದೇವಬೀದಿಯಲ್ಲಿ ರಾಜರಥದ ತೇರು
ವರ್ಷದಿಂದ ವರ್ಷಕ್ಕೆ ದರ್ಬಾರಿನ ಜೋರು
ಅದ್ದೂರಿ ಜೋಡಿ ಪ್ರೀತಿಯ ಕಾರುಬಾರು



ದಿನ ಕಳೆದಂತೆ ಕರಗುವುದು ಬಹುತೇಕ
ಪರಸ್ಪರ ಸಹಕಾರ ಬೆಂಗಾವಲು ಆಕರ್ಷಕ
ಪ್ರತಿ ನಿತ್ಯ ಹೆಚ್ಚುವುದು ಒಲವ ದ್ಯೋತಕ
ಎಂದು ಮುಗಿಯದ ಅಮೃತಬಳ್ಳಿ ಪ್ರೇಮ
ಎಲ್ಲರಲ್ಲಿಯೂ ಇದ್ದೀತು ವಯಸ್ಸಿನಲ್ಲಿ
ಆರಂಭದಲ್ಲಿ ಇದ್ದ ಆ ಪ್ರೀತಿಯ ಸೆಳೆತ
ಕಳೆದರೂ ಎಷ್ಟೋ ವರ್ಷ ಹಾಗೆ ಇದೆ
ಸೆಳೆದು ಅಪ್ಪುವ ಹೃದಯ ಬಡಿತ ಮಿಡಿತ
ಮಕ್ಕಳು ಇದ್ದರೆ ಮೊಮ್ಮಕ್ಕಳು ಆದರೇನು
ಸರಸ ಸಲ್ಲಾಪದಿ ಇನ್ನೂ ಹೊಸ ತುಡಿತ
ಈಗಲೂ ಅದೇ ನಾಚಿಕೆ ಘಮ ಅವಳಲ್ಲಿ
ಕಾಲ್ಬೆರಳ ತುದಿ ಉಲಿಯುವ ರಂಗೋಲಿ
ಬಂದು ಹೋದವು ಏನೆಲ್ಲಾ ಲೆಕ್ಕವಿಲ್ಲದಷ್ಟು
ಹುಸಿಮುನಿಸು ಬಿಸಿ ಕೋಪ ತಾಪಗಳು
ಕ್ಷಣಿಕ ಇದ್ದದ್ದೇ ಅವೆಲ್ಲಾ ಯಾವುದರಷ್ಟು
ಗಟ್ಟಿ ಆಗಿರುವ ಅನುಬಂಧ ಅವಿನಾಭಾವ
ಬಸವರಾಜ ಕಾಸೆ