ಬಂಟ್ವಾಳ: ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಜೀವನ ಪಾಠವಾದ ಕಾನೂನು ಪಾಲನೆ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ ಹಾಗೂ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಮ್ಮ ನೈಜ ಅನುಭವದ ಘಟನೆಯನ್ನಾಧರಿಸಿ ಮಕ್ಕಳಿಗೆ ತಿಳಿ ಹೇಳಿದರು.
ಶಾಲೆಯ ಸಂಚಾಲಕ ವೇದಮೂರ್ತಿ ಜನಾರ್ದನ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಬಂಟ್ವಾಳ ತಾಲೂಕಿನಲ್ಲಿ ಕನ್ನಡ ಮಾಧ್ಯಮದ ಶಾಲೆಗಳ ಪೈಕಿ ಅತಿ ಹೆಚ್ಚು ಅಂಕಗಳನ್ನು ಪಡೆದು ತಾಲೂಕಿಗೆ ಮೊದಲಿಗಳಾದ ಶಾಲೆಯ ವಿದ್ಯಾರ್ಥಿನಿ ಪ್ರಶಿಕ್ಷಾಳನ್ನು ಅಭಿನಂದಿಸಿ, ಉಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಬಂಟ್ವಾಳ ತಾಲೂಕಿನ ಇಂಟರ್ ನ್ಯಾಷನಲ್ ರೋಟರಿ ಸಂಸ್ಥೆಯ ನಿರ್ದೇಶಕಿ ಪ್ರತಿಭಾ ಎ.ರೈ, ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಬಿ.ವೆಂಕಟ್ರಾಯ್ ಕಾಮತ್ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಪ್ರಾಧ್ಯಾಪಕ ಭೋಜ ಅವರು ಪ್ರಸಕ್ತ ಸಾಲಿನ ಚಟುವಟಿಕೆಗಳ ವರದಿ ವಾಚಿಸಿ, ಕನ್ನಡ ಅಧ್ಯಾಪಕ ಧನರಾಜ್ ಡಿ.ಆರ್. ಸಹಕರಿಸಿದರು. ಶಾಲಾ ನಾಯಕ ಹರ್ಷಿತ್ ವಂದಿಸಿ, ನಾಯಕಿ ನುಸೈಬಾ ಬಾನು ಸ್ವಾಗತಿಸಿ, ಅನ್ಸೀರಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ಪಾಂಚಜನ್ಯ ಎಂಬ ಯಕ್ಷಗಾನ ಪ್ರಸಂಗ ನಡೆಯಿತು.
