ಪೊಳಲಿ: ಜಿಲ್ಲೆಯಲ್ಲೇ ಇದೊಂದು ಅತಿ ಸುಂದರ ಹಾಗೂ ಸುಸಜ್ಜಿತ ಅಂಗನವಾಡಿ. ಅಂಗನವಾಡಿಯಲ್ಲಿ ಮಕ್ಕಳ ವಿದ್ಯೆಗೆ ಪೂರಕ ಚಟುವಟಿಕೆಯೊಂದಿಗೆ ದೇಶ ಕಟ್ಟುವ ಕೆಲಸವಾಗುತ್ತಿದೆ. ಎಲ್‌ಕೇಜಿ, ಯೂಕೇಜಿಯಿಂದ ಗುಣಮಟ್ಟದ ಸಂಸ್ಕಾರ ಮಕ್ಕಳಿಗೆ ಸಿಗುತ್ತಿಲ್ಲ. ಕನ್ನಡ ಮಾಧ್ಯದಲ್ಲಿ ಅಥವಾ ಅಂಗನವಾಡಿಯಲ್ಲಿ ಈ ಗುಣ ಬೆಳೆಸಿಕೊಳ್ಳುವ ಮಕ್ಕಳು ಕೊನೆತನಕ ಪಾಲಕರಿಗೆ ಆಸರೆಯಾಗುತ್ತಾರೆ ಎಂದು ನರೇಗಾದ ಮಾಜಿ ಒಂಬುಡ್ಸ್‌ಮನ್ ಹಾಗೂ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ನುಡಿದರು.

ಬಡಕಬೈಲಿನ ಗಾಣೆಮಾರಿನ ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಗ್ರಾಮೀಣ ಮಟ್ಟದ ಚಿಣ್ಣರ ಪ್ರತಿಭೋತ್ಸವ-೨೦೧೮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಈ ಅಂಗನವಾಡಿ ಕೇಂದ್ರಕ್ಕೆ ಇಂಗ್ಲಿಷ್, ಕನ್ನಡ, ತುಳು ಕಲಿಯಬಹುದಾದ ಐಪ್ಯಾಡ್ ಕಲಿಸಬೇಕು. ಸ್ವಚ್ಚತೆಗೆ ಆದ್ಯತೆ ನೀಡುವುದಕ್ಕಾಗಿ ಪ್ರತಿ ಮನೆಯಲ್ಲೂ ಶೌಚಾಲಯ ಇರಬೇಕು. ಕಸ ಎಲ್ಲೆಂದರಲ್ಲಿ ಬಿಸಾಡಬಾರದು ಮತ್ತು ಸುಡಬಾರದು. ಇದರಿಂದ ರೋಗರುಜಿನ ಹರಡುತ್ತದೆ ಎಂದರು.

ಜಿ. ಪಂ ಸದಸ್ಯ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಮಾತನಾಡಿ ಅಂಗನವಾಡಿ ತಾಯಿಯೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಮಕ್ಕಳಿಗೆ ದೇಶದ ಉತ್ತಮ ಪ್ರಜೆಗಳಾಗುವ ಬಾಲ್ಯದ ಶಿಕ್ಷಣ ಸಿಗುತ್ತದೆ. ಸ್ವಚ್ಚತೆ ನಮ್ಮ ಮನಸ್ಸಿಂದ ಹುಟ್ಟಬೇಕು, ಆಗ ಪರಿಸರ ಸ್ವಚ್ಚವಾಗಿರುತ್ತದೆ ಎಂದರು.

ಅಂಗನವಾಡಿಯ ಪುಟಾಣಿಗಳ ಕಾರ್ಯಕ್ರಮಗಳಿಗೆ ಎಲ್ಲರಿಂದಲೂ ಪ್ರೋತ್ಸಾಹ ಸಿಗಬೇಕು. ಆಗಲೇ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಪೊಳಲಿ ಜಯರಾಮಕೃಷ್ಣ ಹೇಳಿದರು.

ಬಾಲವಿಕಾಸ ಸಮಿತಿ ಅಂಗನವಾಡಿಯ ಅಧ್ಯಕ್ಷ ಕರಿಯಂಗಳ ಗ್ರಾ.ಪಂ.ಸದಸ್ಯ ಇಬ್ರಾಹಿಂ ನವಾಜ್ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಕೃಷ್ಣ ಮೂಲ್ಯ, ಡೆಕ್ಕನ್ ಹೆರಾಲ್ಡಿನ ನಯನಾ, ಬಶೀರ್ ಅಹ್ಮದ್ ಗಾಣೆಮಾರ್, ಉಮೇಶ ಗಾಣೆಮಾರ್, ಶೇಖರ ಬಂಗೇರಾ ಗಾಣೆಮಾರ್, ಬಿ.ಎಸ್ ಮೊಹಮ್ಮದ್ ಬಡಕಬೈಲು, ಮೊಹಮ್ಮದ್ ಗಾಣೆಮಾರ್, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ, ಪಂಚಾಯತ್ ಸದಸ್ಯ ಸುರೇಶ ಪೂಜಾರಿ, ಸುಂದರ ಪೂಜಾರಿ(ಮಕ್ಕಳು ಮತ್ತು ಮಹಿಳಾ ಅಭಿವೃದ್ದಿ ಇಲಾಖೆ ಉಪನಿರ್ದೇಶಕ), ಇಂದಿರಾ ಇದ್ದರು. ರೇಣುಕಾ ಎಸ್ ಬಂಗೇರ ಸ್ವಾಗತಿಸಿದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here