Saturday, February 8, 2025

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಸರ್ವಧರ್ಮ ಸಮ್ಮೇಳನ

ಉಜಿರೆ: ಪರಿಶುದ್ಧ ಮನಸ್ಸಿನಿಂದ ನಾವು ಸ್ವಯಂ ಪ್ರೇರಣೆಯಿಂದ ದಾನ ನೀಡಬೇಕು. ದೇವರು ನಮಗೆ ದಾನವಾಗಿ ನೀಡಿದ ತನು-ಮನ-ಧನ ವನ್ನು ಪರರ ಹಿತಕ್ಕಾಗಿ ದಾನ ಮಾಡಬೇಕು. ನಾವು ಮಾಡುವ ಸೇವೆಯ ಒಂದು ಭಾಗವನ್ನು ದೇವರಿಗೆ ಅರ್ಪಿಸಬೇಕು ಎಂದು ಗುಜರಾತ್ ಸೂರ್ಯಪೀಠ ದ್ವಾರಕದ ಕೃಷ್ಣದೇವನಂದಗಿರಿ ಮಹಾರಾಜ್ ಹೇಳಿದರು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಸರ್ವಧರ್ಮ ಸಮ್ಮೇಳದ 86ನೇ ಅಧಿವೇಶನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾತಾ-ಪಿತರನ್ನು ಗೌರವಿಸಬೇಕು. ಭೂ ಮಾತೆಯ ಸೇವೆ ಮಾಡಬೇಕು. ಪರಿಶುದ್ಧ ಮನಸ್ಸಿನಿಂದ ದೇವರ ಭಕ್ತಿ, ಧ್ಯಾನ ಮಾಡಬೇಕು. ಗೋ ಮಾತೆಯ ಸೇವೆ ಮಾಡಬೇಕು. ಮನುಷ್ಯರಾಗಿ ನಾವು ಪ್ರೀತಿ-ವಿಶ್ವಾಸದಿಂದ ಇತರರ ಸೇವೆ ಮಾಡಬೇಕು. ದಾನವೇ ಜೀವನದಲ್ಲಿ ಶ್ರೇಷ್ಠವಾಗಿದೆ. ಈ ಪಂಚ ತತ್ವಗಳನ್ನು ಸದಾ ಪಾಲಿಸಿದಾಗ ನಾವು ಸ್ವರ್ಗ ಸುಖ ಅನುಭವಿಸಬಹುದು ಎಂದು ಸ್ವಾಮೀಜಿ ಹೇಳಿದರು.

ಧರ್ಮಸ್ಥಳದ ಚತುರ್ವಿದ ದಾನ ಪರಂಪರೆ, ಸ್ವಚ್ಛತಾ ಅಭಿಯಾನ, ದೇವಾಲಯಗಳ ಜೀರ್ಣೋದ್ಧಾರ ಹಾಗೂ ಹೆಗ್ಗಡೆಯವರ ಹೃದಯ ಶ್ರೀಮಂತಿಕೆಯನ್ನು ಸ್ವಾಮೀಜಿ ಶ್ಲಾಘಿಸಿ ಅಭಿನಂದಿಸಿದರು. ತಾವು ಧರ್ಮಸ್ಥಳಕ್ಕೆ ಬಂದು ಸ್ವರ್ಗ ಸುಖ ಅನುಭವಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಧರ್ಮಗಳ ನಡುವೆ ಶಾಂತಿ-ಸಾಮರಸ್ಯ ಕಾಪಾಡಬೇಕು: ಡಿ. ವೀರೇಂದ್ರ ಹೆಗ್ಗಡೆ

ಆರಂಭದಲ್ಲಿ ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮದ ಮೂಲ ಉದ್ದೇಶವೇ ಸಮನ್ವಯ. ಪ್ರಪಂಚದಲ್ಲಿ ಎಲ್ಲವೂ ಧರ್ಮದ ನೆಲೆಯಲ್ಲಿ ನಿಂತಿದೆ. ಧರ್ಮೀಷ್ಠನನ್ನೆ ಜನರು ಗೌರವಿಸುತ್ತಾರೆ. ಧರ್ಮವು ಕೆಟ್ಟ ಯೋಚನೆಗಳನ್ನು ನಾಶಪಡಿಸುತ್ತದೆ. ಧರ್ಮವೇ ಅತಿ ಶ್ರೇಷ್ಠವಾಗಿದ್ದು ವಿವಿಧ ಧರ್ಮಗಳ ನಡುವೆ ಶಾಂತಿ-ಸಾಮರಸ್ಯ ಕಾಪಾಡುವುದು ಇಂದಿನ ಅಗತ್ಯವಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ಯಾವುದೇ ಸಂಕುಚಿತ ಭಾವನೆಗಳಿಲ್ಲದೆ, ಪ್ರಗತಿಪರ ಚಿಂತನೆಯೊಂದಿಗೆ ಧರ್ಮವನ್ನು ನಿತ್ಯ ಜೀವನದಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದರೆ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಒಳ್ಳೆಯ ವಿಚಾರಗಳಲ್ಲಿ ನಂಬಿಕೆ ಇಟ್ಟು ಆಚರಿಸಿದರೆ ಪವಾಡಗಳಂತೆ ನಮ್ಮ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇದಕ್ಕೆ ನಿರಂತರ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ. ಇಂತಹ ಸರ್ವಧರ್ಮ ಸಮ್ಮೇಳನಗಳು ಶಾಂತಿ, ಸಾಮರಸ್ಯ, ಸಮನ್ವಯತೆ, ಸಹಬಾಳ್ವೆಯೊಂದಿಗೆ ಸನ್ಮಾರ್ಗದಲ್ಲಿ ಸಾಗಲು ದಾರಿದೀಪವಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಶಿಕ್ಷಣ ತಜ್ಞ ಮಮ್ತಾಜ್ ಅಲಿ (ಎಂ.) ಮಾತನಾಡಿ, ಜೈನಧರ್ಮದ ಅನೇಕಾಂತವಾದದಿಂದ ಎಲ್ಲಾ ಸಮಸ್ಯೆಗಳಿಗೆ ಸುಲಭದಲ್ಲಿ ಪರಿಹಾರ ಪಡೆಯಬಹುದು. ಮನಸ್ಸು ವಿಕಸಿತವಾದಾಗ ವಿನಯ, ಸೌಜನ್ಯ ಮೂಡಿಬರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿಯೂ ಪವಿತ್ರ ಶಕ್ತಿ ಇರುತ್ತದೆ. ಆದುದರಿಂದ ಎಲ್ಲರನ್ನೂ ಗೌರವಿಸಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಹೇಳಿದರು.

ಸರ್ವಧರ್ಮ ಸಮ್ಮೇಳನಗಳಿಂದ ಜನ ಸಾಮಾನ್ಯರಿಗೆ ಸಾರ್ಥಕ ಬದುಕಿಗೆ ಉಪಯುಕ್ತವಾದ ಉತ್ತಮ ಸಂದೇಶ ದೊರಕಬೇಕು ಎಂದು ಅವರು ಹಾರೈಸಿದರು.

ಮಂಗಳೂರಿನ ಮಾಜಿ ಶಾಸಕ ಜೆ.ಆರ್. ಲೋಬೊ ಗಾಂಧೀಜಿಯವರ ದೃಷ್ಟಿಯಲ್ಲಿ ಸಮನ್ವಯತೆ ಬಗ್ಯೆ ಮಾತನಾಡಿ, ಎಲ್ಲಾ ಧರ್ಮಗಳೂ ಪರಿಪೂರ್ಣವಲ್ಲ. ಪರಿಶುದ್ಧವೂ ಅಲ್ಲ. ಅಹಿಂಸೆಯೇ ಶ್ರೇಷ್ಠ ಧರ್ಮವಾಗಿದೆ. ನಮ್ಮ ಧರ್ಮಕ್ಕೆ ನೀಡುವ ಗೌರವ ಮತ್ತು ಪ್ರಾಮುಖ್ಯತೆಯನ್ನು ಇತರ ಧರ್ಮಗಳೀಗೂ ನೀಡಬೇಕು ಎಂದು ಅವರು ಸಲಹೆ ನೀಡಿದರು. ಧರ್ಮದಿಂದ ಮಾನವೀಯ ಸಂಬಂಧಗಳು ಬೆಳೆಯಬೇಕು. ಗಾಂಧೀಜಿಯ ಧಾರ್ಮಿಕ ಚಿಂತನೆಗಳು ಇಂದಿಗೂ ಪ್ರಸ್ತುತ ಹಾಗೂ ಸಾರ್ವಕಾಲಿಕ ಮೌಲ್ಯ ಎಂದು ಹೇಳಿದರು.

ಇಬ್ರಾಹಿಂ ಸುತಾರ ಸೂಫಿ ಸಿದ್ದಾಂತ ಮತ್ತು ಭಾವೈಕ್ಯತೆ ಬಗ್ಯೆ ಮಾತನಾಡಿ, ನಾವು ಎಲ್ಲರೂ ಸರಿ ಸಮಾನರು, ಮಾನವರು ಹಾಗೂ ಕನ್ನಡಿಗರು. ಎಲ್ಲರಲ್ಲಿಯೂ ಭಾವೈಕ್ಯತೆ ಮತ್ತು ಸಾಮರಸ್ಯ ಮೂಡಿಸುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶವಾಗಿದೆ. ಭಾವೈಕ್ಯತೆ ಅಂದರೆ, ನಾವು ನಂಬಿದ ಧರ್ಮ ಮತ್ತು ಸಿದ್ಧಾಂತವನ್ನು ಚೆನ್ನಾಗಿ ತಿಳಿದು ಅನುಷ್ಠಾನಗೊಳಿಸುವುದು. ಇತರರ ಧರ್ಮ ಮತ್ತು ಸಿದ್ಧಾಂತವನ್ನು ಪ್ರಾಮಾಣಿಕವಾಗಿ ಗೌರವಿಸುವುದು. ಬಿದ್ದವನನ್ನು ಎದ್ದು ನಿಲ್ಲುವಂತೆ ಮಾಡಿ ಶಾಂತಿಯನ್ನು ಒದಗಿಸುವುದೇ ಧರ್ಮ. ಧರ್ಮದಿಂದ ಮಾನವೀಯ ಮೌಲ್ಯಗಳು ಉದ್ದೀಪನಗೊಳ್ಳಬೇಕು ಎಂದು ಅವರು ಹೇಳಿದರು.

ಬೆಂಗಳೂರಿನ ಚಲನಚಿತ್ರ ನಟ ಡಾ. ಶ್ರೀಧರ್, ಜೈನ ಧರ್ಮದಲ್ಲಿ ಸಮನ್ವಯ ಬಗ್ಯೆ ಮಾತನಾಡಿ, ಜೈನ ಧರ್ಮದ ಅಧ್ಯಯನದಿಂದ ತನಗೆ ಅಲೌಕಿಕ ಆನಂದ ದೊರಕಿದೆ. ಅನಿವಾರ್ಯವಾಗಿ ಒಂದು ನೃತ್ಯ ಪ್ರದರ್ಶನದ ತಯಾರಿಗಾಗಿ ತಾನು ಜೈನ ಧರ್ಮವನ್ನು ಹಾಗೂ ಅದರ ಸಿದ್ಧಾಂತಗಳನ್ನು ಅಧ್ಯಯನ ಮಾಡಬೇಕಾಯಿತು.

ಜೈನ ಧರ್ಮದ ಪ್ರಕಾರ ಆತ್ಮನ ಕರ್ಮದ ಕೊಳೆಯನ್ನು ಕಳೆದಾಗ, ರಾಗ-ದ್ಚೇಷ ರಹಿತನಾದಾಗ ಆತ್ಮನೇ ಪರಮಾತ್ನನಾಗಬಲ್ಲ. ಸ್ವಯಂ ಸಾಧನೆಯಿಂದ ಹಾಗೂ ಆಧ್ಯಾತ್ಮಿಕ ಉನ್ನತಿಯಿಂದ ಜೈನ ಧರ್ಮದ ಮೂಲಕ ಮಾತ್ರ ಮೋಕ್ಷ ಸಾಧನೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ನಾಡಿನೆಲ್ಲೆಡೆಯಿಂದ ಬರುವ ಸಾವಿರಾರು ಕಲಾವಿದರು ಕೊಂಬು, ಕಹಳೆ, ಶಂಖ, ವಾಲಗ, ತಾಳ, ಡೊಳ್ಳು ಕುಣಿತ, ವೀರಗಾಸೆ ಇತ್ಯಾದಿ ಕಲಾಸೇವೆ ಮಾಡುವರು.
ಬೆಳ್ತಂಗಡಿ ಎ.ಪಿ. ಎಂ.ಸಿ. ಅಧ್ಯಕ್ಷ ಕೇಶವ ಗೌಡ ಬೆಳಾಲು ಧನ್ಯವಾದವಿತ್ತರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಚೆನ್ನೈನ ಟಿ.ಎಂ. ಕೃಷ್ಣ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ರಾತ್ರಿ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

ಇಂದು ಸಾಹಿತ್ಯ ಸಮ್ಮೇಳನ, ಲಕ್ಷ ದೀಪೋತ್ಸವ

ಗುರುವಾರ ಸಂಜೆ 5 ಗಂಟೆಯಿಂದ ಸಾಹಿತ್ಯ ಸಮ್ಮೇಳನದ ೮೬ನೆ ಅಧಿವೇಶನ ನಡೆಯುತ್ತದೆ. ಖ್ಯಾತ ವಿಮರ್ಶಕ ಸಾಗರದ ಪ್ರೊ. ಟಿ.ಪಿ. ಅಶೋಕ ಅಧ್ಯಕ್ಷತೆ ವಹಿಸುವರು.
ವಿ. ಆರ್.ಎಲ್. ಸಂಸ್ಥೆಯ ಅಧ್ಯಕ್ಷ ವಿಜಯ ಸಂಕೇಶ್ವರ ಸಾಹಿತ್ಯ ಸಮ್ಮೇಳನ ಉದ್ಘಾಟಿಸುವರು.
ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ. ಡಾ. ಬಿ. ಆರ್. ರವಿಕಾಂತೇ ಗೌಡ, ಬೆಂಗಳೂರಿನ ಎಂ. ಅಬ್ದುಲ್ ರೆಹಮಾನ್ ಪಾಷ ಮತ್ತು ಪುತ್ತೂರಿನ ಕವಿತಾ ಅಡೂರ್ ಉಪನ್ಯಾಸ ನೀಡುವರು.
ಲಕ್ಷದೀಪೋತ್ಸವ: ಗುರುವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ನಡೆಯುತ್ತದೆ. ನಾಡನೆಲ್ಲೆಡೆಯಿಂದ ಲಕ್ಷಕ್ಕೂ ಅಧಿಕ ಜನ ಬರುತ್ತಾರೆ.

ಮಳೆಯ ಸಿಂಚನ
ಉಜಿರೆ: ಬೆಳ್ತಂಗಡಿ. ಧರ್ಮಸ್ಥಳ, ಮುಂಡಾಜೆ ಪರಿಸರದಲ್ಲಿ ಬುಧವಾರ ರಾತ್ರಿ ಹನಿ ಹನಿಯಾಗಿ ಮಳೆಯ ಸಿಂಚನವಾಗಿದ್ದು ಬೇಸಿಗೆಯ ಬೇಗೆಯನ್ನು ಕೊಂಚ ತಣಿಸಿದೆ.

ಚಿತ್ರ/ವರದಿ: ಸುನೀಲ್ ಬೇಕಲ್

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ನರ್ಸಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ಕಡ್ಡಾಯಗೊಳಿಸಿ : ಸಂಸದ ಕ್ಯಾ. ಚೌಟ ಆಗ್ರಹ

ನವದೆಹಲಿ: ಮಂಗಳೂರಿನ ವೆನ್ಲಾಕ್ ಸೇರಿ ದೇಶದೆಲ್ಲೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ನರ್ಸ್ ಗಳ ಕೊರತೆ ನೀಗಿಸಲು ಎಂಬಿಬಿಎಸ್ ಮಾದರಿ ನರ್ಸ್ಗಳಿಗೂ ಇಂಟರ್ನ್ ಶಿಪ್ ಕಡ್ಡಾಯಗೊಳಿಸಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕಾವಳಮೂಡೂರು : ತೆಂಗಿನ ಗಿಡ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಕಾವಳಮೂಡೂರು ಗ್ರಾಮ ಪಂಚಾಯತಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಕೃಷಿ ವಿಜ್ಞಾನ ಕೇಂದ್ರ ಎಕ್ಕೂರು ಮಂಗಳೂರು, ಸಿ. ಪಿ. ಸಿ. ಆರ್. ಐ. ಕಾಸರಗೋಡು, ಡೇ- ಎನ್ ಆರ್...