ಕೂಡಿಸಿದವರೆ ಬೇರೆಯಾಗಿಸಿದರು ಮದುವೆ ಆಗಿ ಕಳೆದಿಲ್ಲ ಇನ್ನೂ ತಿಂಗಳು/
ನಿದ್ರೆ ಇರದೆ ಬಿದ್ದು ಉರುಳಾಡಿ ಉರುಳಿವೆ ಕಗ್ಗತ್ತಲ ಕಗ್ಗಂಟಾಗಿ ಇರುಳು//

ಜೊತೆ ಇದ್ದರೆ ನಿನಗೇನು ಕಷ್ಟ ಯಾಕಿಷ್ಟು ಬೇಗ ಆಷಾಢ ನಿನಗಿಷ್ಟು ಹಿಡಿಶಾಪ/
ಬಂದರೆ ಏನಿಲ್ಲ ಅಭ್ಯಂತರ ಬಸುರಿಯಾಗಿ ತವರು ಮನೆಗೆ ಹೋದಾಗ ನನ್ನವಳು//
ಹೊಸ ಬದುಕಿನ ರಸಮಯ ಕ್ಷಣಗಳ ಸ್ಥಿತಿ ಉನ್ಮಾದದ ಸವಿ ರುಚಿ ಸಡಗರ/
ಬಿಟ್ಟಿರಲಾರದ ಅರೆಗಳಿಗೆ ಕೊಸರಿ ಸುಖ ಮುಲುಗಿದ ಸಂಕಟ ಒಂಟಿ ಸರಳು//
ಮುಖ ಉದಿಸಿಕೊಂಡು ಮೂಲೆ ಹಿಡಿದಿದೆ ಠೂ ಬಿಟ್ಟು ಕಂಗಾಲಾದ ಖುಷಿ/
ನಲ್ಲೆಯ ಕೆನ್ನೆ ಮೇಲೆ ಮಾಸಿಲ್ಲ ಅರಿಶಿನ ಗುರುತು ಸೊರಗಿದೆ ಮುಂಗುರುಳು//
ಮನ ಬಿಚ್ಚಿದ ಆ ಪೋಲಿ ಮಾತುಗಳ ಸರಸವಿಲ್ಲ ಫೋನಾಯಿಸಿದರೂ/
ಗಡಿಬಿಡಿ ಆಗಿದೆ ಸಿಡಿಮಿಡಿ ವಿರಹ ಹಗಲಲ್ಲಿ ಬೆಳಕಿಲ್ಲ ಮರುಳು//
ಆಗಸಕ್ಕೂ ಮಸಕು ಮಂಕಾಗಿದೆ ಚೆಲುವು ಕವಿದು ಕಡುಗಪ್ಪು ಮೋಡ/
ಹೆಪ್ಪುಗಟ್ಟಿದ ಪ್ರೀತಿಯ ಹರಿಸಿ ಬಳಲಿದೆ ಮನ ಆವರಿಸಿ ಖಿನ್ನತೆಯ ನೆರಳು//
ತಾಳದೆ ಬಂದು ಮುದ್ದಿಸಲು ಬಿಡರು ಸುತ್ತ ಅಂಟು ನೆಂಟರ ಸರ್ಪಗಾವಲು/
ಆದರೇನಂತೆ ಅತಿಯಾಗಿ ಒಲವು ಗಟ್ಟಿಯಾಗಿದೆ ಬಂಧ ಕಾತರಿಸಿ ಬಾಳು//

ಬಸವರಾಜ ಕಾಸೆ