ತಿನ್ನಬೇಕು ಅಂದರೆ ಇನ್ನೊಂದಿಷ್ಟು ಸಾಕು ಎನಿಸುವ ಸಂಕೋಚ ಕಿರಿಕಿರಿ ಮುಜುಗರ/
ಪ್ರೀತಿಯ ಉಪಚಾರ ಒಳಗಿನಿಂದ ಒದ್ದೆ ಮುದ್ದೆ ಅನುಭವ ಕುರಿಮರಿ ಮುಜುಗರ//


ಕಾರ್ಯಕ್ರಮದ ಭಾಷಣ ಸತತ ಅಭ್ಯಾಸ ತಯಾರಾಗಿದ್ದೆ ಚಿಂದಿ ಉಡಾಯಿಸಲೆಂದೆ/
ಹೆಸರು ಘೋಷಣೆ ನಡುಕ ವೇದಿಕೆ ಭಯ ನಾಚಿಕೆಯ ಪ್ರವೃತ್ತಿ ಗರಿಗರಿ ಮುಜುಗರ//
ಇದೆ ಏನನ್ನಾದರೂ ಎದುರಿಸುವ ತಾಕತ್ತು ಗಂಡೆದೆಯ ಗುಂಡಿಗೆಯಿದು ಸೈ ಸವಾಲಿಗೆ/
ಹೋದಾಗ ಸಂದರ್ಶನಕ್ಕೆ ಕೇಳುವ ಪ್ರಶ್ನೆಗೆ ಉತ್ತರ ಅಳುಕು ಬಾರಿಬಾರಿ ಮುಜುಗರ//
ಯಾವುದು ಮೊದಲಲ್ಲ ಆಗಿವೆ ಕೆಲವು ಯತ್ನ ಬದಲಾಗದ ಮನೋಭಾವ ಸ್ಥಿರ /
ಯಾರೇನು ಅಂದುಕೊಂಡಾರು ಆಗುವುದೆ ನನ್ನಿಂದ ಕೀಳರಿಮೆ ಪಿರಿಪಿರಿ ಮುಜುಗರ//
ಆತ್ಮೀಯ ಭಾವ ಹಿಡಿದಿಟ್ಟರೆ ಹಿತ ಹೊರ ಬಿಟ್ಟರೆ ಮಾರಕ ಕುಗ್ಗಿತ್ತು ಬೆಳವಣಿಗೆ/
ಮೈ ಚಳಿ ಬಿಡಿಸಿ ಸೆಡ್ಡು ಹೊಡೆದಾಗ ಆತ್ಮವಿಶ್ವಾಸ ಕೆಂಡ ನಿರಿ ನಿರಿ ಮುಜುಗರ//
ಹತ್ತಾರು ಹೊಯ್ದಾಟ ಮೇಲಿಂದ ಮೇಲೆ ತಾಕಲಾಟ ಇದು ಅಂತರಂಗ ತೊಳಲಾಟ/
ಆಗಿದ್ದಾಗಲಿ ನೋಡೋಣವೆಂದಾಗ ಹೊಕ್ಕ ಮನೋಬಲ ಚಿಂದಿ ಪರಿಪರಿ ಮುಜುಗರ//

ಬಸವರಾಜ ಕಾಸೆ