ಇಳಿಜಾರು ಪಥದಲಿ ಹಾರು
ಗುದುರೆಯನೇರಿ ಮೆರೆಯುವ
ವಕ್ರತೆಯನು ಹೆಕ್ಕಿ ಸಾಗುವ
ರಮ್ಯ ಕಲೆಯನು ಕರುಣಿಸು


ಮೇಲು ಕೀಳಿನ ಅಸಮ ಗಿರಿ
ಯಾಗ್ರದಲಿ ನರ್ತಿಸಿ ನುಲಿವ
ದಿನ್ನೆಗಳೆದೆಯನರಳಿಸುವ
ಗಮ್ಯ ಬಲೆಯನು ಕರುಣಿಸು
ಬೆರೆವೆ ಕಂಗಳ ಕಾಂತಿಯ
ಲುಗಿಸಿ ಉಲಿವ ಮದವನು
ಮುದದೆ ಹದನಂಗೈವ
ಭವ್ಯ ಒಲವನು ಕರುಣಿಸು
ಅರಿವಿನುರಿಯಲಿ ಬೆವರಿ
ನಿಂದಿಹ ಅಹಮಿಕೆಯ ಹಿರಿ
ಗರ್ವವನದುಮಿ ಗದುಮುವ
ದಿವ್ಯ ಬಲವನು ಕರುಣಿಸು
ಕಾಳಕೋಟದ ವಿಷವನಿಕ್ಕಿ
ಜೀವ ಜಂತುವ ಮುಕ್ಕಿ ನೆಕ್ಕಿ
ಸೊಕ್ಕಿನಲಲೆವವರನರೆವ
ಶಕುತಿ ವರವನು ಕರುಣಿಸು
ಸಾರವಳಿಯದ ಶೂನ್ಯದಾಚೆಯ
ಬಯಲ ಆಲಯದಾ ದಿಗಂತವ
ತೋರಿ ಏರುವ ದಾರಿ ತೋರಿಪ
ಮುಕುತಿ ಗುರುವನು ಕರುಣಿಸು
#ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301