ಮದುವೆಯಾಗಿ ನಡೆದಿದೆ ಚೆಂದ ಸಂಸಾರ
ಮಕ್ಕಳು ಮೊಮ್ಮಕ್ಕಳು ಆಗಿ ಭಾವ ಪುಳಕ
ಕೆಲವೊಮ್ಮೆ ಸಿಹಿ ಹಲವೊಮ್ಮೆ ಕಹಿಯಾಗಿ
ಈಗಲೂ ಕಾಡುತ್ತಿದೆ ಆ ಮೊದಲ ಪ್ರೇಮ


ಆಗಿರಲಿಲ್ಲ ಆಕರ್ಷಣೆ ನೋಡಿದೊಡನೆ
ನೋಟಗಳು ಎಷ್ಟೋ ಸುಳಿದು ಹೋದವು
ಮೋಹ ದಾಹ ಕಾಮದ ಪರಿಮಿತಿ ಕ್ಷಣಿಕ
ದೀರ್ಘ ಸ್ನೇಹ ಒಡನಾಟದ ಪರಿ ನಮ್ಮದು
ಒಬ್ಬರಿಗೊಬ್ಬರು ಅರಿತಿದ್ದೇವು ಬಹಳಷ್ಟು
ನಡೆಯ ಗುಣಗಳು ನಾಟಿತು ಮನಸ್ಸಿಗಿಷ್ಟು
ನನ್ನೊಳಗೆ ಶುರುವಾದ ತೀವ್ರ ಸಂಘರ್ಷ
ಫಲವಾಗಿ ನಕ್ಕಿತ್ತು ಪ್ರೀತಿ ಚಿಗುರೊಡೆದು
ಒಪ್ಪಿಸಿದ್ದೆ ನಾನಾಗಿಯೇ ಹಿಂದೆ ಬಿದ್ದು
ಬಿಟ್ಟರೆ ಸಿಗಲ್ಲ ಇಂತಹ ಹುಡುಗಿ ಎಂದು
ಇಷ್ಟ ಕಷ್ಟ ಬೇಕು ಬೇಡ ಅದಲು ಬದಲು
ಹಂಚಿಕೊಂಡೆವು ಎನ್ನದೇ ಹಗಲಿರುಳು
ಹೇಗೇಗೋ ಬೇಕಾಬಿಟ್ಟಿ ಇದ್ದ ನನ್ನನ್ನು
ತಿದ್ದಿ ತೀಡಿ ಶಿಲೆಯಾಗಿಸಿದಳು ಬೇಕಾದಷ್ಟು
ದೂರಾದರೂ ಮಾಸಿಲ್ಲ ಉಸಿರಾದ ನೆನಪು
ಸುಟ್ಟು ಭಸ್ಮವಾದರೂ ಶಾಶ್ವತ ಪ್ರೀತಿಯು
ಬಸವರಾಜ ಕಾಸೆ