ಅಡ್ಯನಡ್ಕ: ಇಲ್ಲಿನ ಜನತಾ ವಿದ್ಯಾಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಕ್ರೀಡೋತ್ಸವ – 2018’ ಕಾರ್ಯಕ್ರಮವು ನ.30ರಂದು ಅದ್ದೂರಿಯಿಂದ ಜರುಗಿತು.
ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ಅಗತ್ಯ. ಕ್ರೀಡಾಸ್ಫೂರ್ತಿಯು ನಮ್ಮೆಲ್ಲರ ಬದುಕಿಗೆ ಅನಿವಾರ್ಯ. ಆಟೋಟಗಳು ಮತ್ತು ಶಾರೀರಿಕ ಕವಾಯತುಗಳು ದೈಹಿಕ ಕ್ಷಮತೆಯನ್ನು ಸದೃಢಗೊಳಿಸಿ ಜೀವನವನ್ನು ವಿಕಸನಗೊಳಿಸುತ್ತವೆ ಎಂದು ನುಡಿದರು.
ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರ್ ಮಾತನಾಡಿ, ಬೌದ್ಧಿಕ ವಿಕಾಸದಂತೆ ಶಾರೀರಿಕ ಬೆಳವಣಿಗೆಯೂ ಅಗತ್ಯ. ಇತ್ತೀಚೆಗೆ ನಮ್ಮ ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ಯಶಸ್ವಿಯಾಗುತ್ತಿರುವುದು ಅಭಿಮಾನದ ಸಂಕೇತ ಎಂದರು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಜನತಾ ಪ.ಪೂ.ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್, ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಮಹಾಬಲ ಶೆಟ್ಟಿ, ಜನತಾ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಾಧವ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಏರೋಬಿಕ್ಸ್, ಹೂಪ್ಸ್ ವ್ಯಾಯಾಮ, ವೀಲ್ ಸರ್ಕಲ್ ವ್ಯಾಯಾಮ, ಸಾಮೂಹಿಕ ದೈಹಿಕ ಕಸರತ್ತುಗಳು, ಲೇಝಿಂ ನೃತ್ಯ, ವೈವಿಧ್ಯಮಯ ಆಕೃತಿ ಸಂಯೋಜನೆಗಳು, ಮಾನವ ಪಿರಮಿಡ್ ಪ್ರದರ್ಶನ ಜರುಗಿತು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥನೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿನಿಯರಿಂದ ಆಶಯ ಗೀತೆ ಹಾಡಿದರು.
ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ಸ್ವಾಗತಿಸಿ, ಜನತಾ ಪ. ಪೂ. ಕಾಲೇಜಿನ ಆಂಗ್ಲ ಉಪನ್ಯಾಸಕಿ ಜಯಶ್ರೀ ಕೆ. ಆರ್. ವಂದಿಸಿದರು. ಕನ್ನಡ ಉಪನ್ಯಾಸಕ ಶೀನಪ್ಪ ನಾಯ್ಕ್ ವಂದಿಸಿದರು.
ಕ್ರೀಡೋತ್ಸವದ ಬಳಿಕ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟದ ಸ್ಪರ್ಧೆಗಳು ಆರಂಭಗೊಂಡವು.