Wednesday, October 18, 2023

ಪ್ರಾಣಿ, ಪಕ್ಷಿ ಪ್ರೇಮಿ ‘ಸ್ನೇಕ್ ಮುಸ್ತಾ’ ಹಾವು ಕಡಿತದಿಂದ ಸಾವು 

Must read

ಬಂಟ್ವಾಳ: ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದ ಉಪ್ಪಿನಂಗಡಿ ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ.ಆರ್. ಮುಹಮ್ಮದ್ ಮುಸ್ತಾಫ ಎಂಬವರು ಶನಿವಾರ ನಾಗರ ಹಾವಿನ ಕಡಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ವೃತ್ತಿಯಲ್ಲಿ ಅಟೋ ರಿಕ್ಷಾ ಚಾಲಕರಾಗಿರುವ ಎಂ.ಆರ್.ಮುಸ್ತಾಫ ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುತ್ತಿದ್ದರು. ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂದ ಅವರಿಗೆ ಕರೆ ಬಂದಿದ್ದು ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು.

ಹಾವನ್ನು ಹಿಡಿಯುತ್ತಿದ್ದ ಸಂದರ್ಭ ಇವರ ಎಡ ಮತ್ತು ಬಲ ಕೈಗೆ ನಾಗರ ಹಾವು ಕಚ್ಚಿದ್ದು ತೀವ್ರ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಅವರು ಮೃತಪಟ್ಟರು.

ಮುಹಮ್ಮದ್ ಮುಸ್ತಾಫ ಅವರು ಪ್ರಾಣಿ ಪ್ರಿಯರಾಗಿದ್ದು ಮನೆಯಲ್ಲಿ ಪಾರಿವಾಳ, ಲವ್‌ಬಡ್ಸ್, ಆಡು, ಕೋಳಿ ಹೀಗೆ ಸಾಕು ಪ್ರಾಣಿಗಳನ್ನು ಸಾಕಿಕೊಂಡಿರುತ್ತಿದ್ದರಲ್ಲದೆ ಹಾವು ಹಿಡಿಯುವಲ್ಲಿ ನಿಪುಣತೆಯನ್ನು ಪಡೆದಿದ್ದರು. ವಿಷಕಾರಿ ಹಾವುಗಳನ್ನು ಯಾವುದೇ ಸಲಕರಣೆಗಳನ್ನು ಬಳಸದೇ ಬರಿಗೈಯಲ್ಲೇ ಹಿಡಿದು ದೂರದ ಕಾಡಿಗೆ ಬಿಡುತ್ತಿದ್ದರು. ಇವರು ಸುಮಾರು ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದು ಇದಕ್ಕಾಗಿ ಹಲವು ಸಂಘ- ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.

ಮೃತರು ಪತ್ನಿ ಹಾಗೂ ನಾಲ್ಕು ಹಾಗೂ ಎರಡು ವರ್ಷದ ಇಬ್ಬರು ಪುತ್ರರನ್ನು ಅಗಲಿದ್ದಾರೆ.

More articles

Latest article