Sunday, October 22, 2023

ಪೊಲೀಸ್ ಕಾನ್‌ಸ್ಟೇಬಲ್ ಪ್ರವೀಣ ರೈ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Must read

ವಿಟ್ಲ: ಜಿಲ್ಲೆಯಲ್ಲಿ ನಡೆದ ಹಲವಾರು ದರೋಡೆ, ಕಳ್ಳತನ, ಕಮ್ಯೂನಲ್ ಕಾಳಗಗಳ ವೇಳೆ ಆರೋಪಿಗಳ ನ್ನು ಪತ್ತೆ ಹಚ್ಚಿ ಮಟ್ಟ ಹಾಕುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪ್ರಸ್ತುತ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರವೀಣ ರೈ ಅವರು ತನ್ನ ದಕ್ಷ ಕಾರ್ಯಕ್ಷಮತೆಗಾಗಿ 2020ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಪುತ್ತೂರು ತಾ. ಪಾಲ್ತಾಡಿ ನಡುಕೂಟೇಲು ವಿಶ್ವನಾಥ ರೈ ಮತ್ತು ಲೀಲಾವತಿ ದಂಪತಿಗಳ ಪುತ್ರರಾದ ಅವರು ಕಳೆದ 13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಆರೋಪಿಗಳ ಬಂಧನ, ಆಸಿಫ್ ಕೊಲೆ ಪ್ರಕರಣ, ವಿಟ್ಲ ಪೇಟೆಯ ದಿನಸಿ ಉದ್ಯಮಿ ಸುಭಾಷ್ ನಾಯಕ್ ದರೋಡೆ ಪ್ರಕರಣ, ಕನ್ಯಾನದಲ್ಲಿ ನಡೆದ ಗಾಂಜಾ ಪ್ರಕರಣ ಪತ್ತೆ, ಬೃಹತ್ ಅಂತರಾಜ್ಯ ವಾಹನ ಕಳ್ಳರ ಬಂಧನ, ಜಿಲ್ಲೆಯಾದ್ಯಂತ ನಡೆದ ದೇಗುಲ ಕಳವು ಪ್ರಕರಣಗಳನ್ನು ಬೇಧಿಸುವಲ್ಲಿ ಚಾಣಾಕ್ಷತನ ತೋರಿಸಿ ಇಲಾಖೆ ಹಾಗೂ ಸಾರ್ವಜನಿಕ ವಲಯದಿಂದ ಶ್ಲಾಘನೆ ಪಡೆದಿದ್ದರು.
ಬೆಳ್ಳರೆ ಠಾಣಾ ವ್ಯಾಪ್ತಿಯ ಇಸ್ಮಾಯಿಲ್ ಕೊಲೆ ಪ್ರಕರಣ, ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜ ಪಂಬೆತ್ತಾಡಿ ಗೋವಿಂದ ಭಟ್ ಕೊಲೆ, ಮನೆ ದರೋಡೆ ಪ್ರಕರಣಗಳನ್ನು ಬೇಧಿಸುವಲ್ಲಿ, ಉಪ್ಪಿನಂಗಡಿ ಪೇಟೆಯ ಆರ್‌ಕೆ ಜ್ಯುವೆಲ್ಲರ್ಸ್‌ನ ದರೋಡೆ ಪ್ರಕರಣದ ಆರೋಪಿಗಳನ್ನು ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಯವರಿಗೆ ಸಹಕರಿಸಿದ್ದರು. ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣ, ಚೆನ್ನ ಫಾರೂಕ್ ಕೊಲೆ, ಉಜಿರೆಯ ಮಗು ಅಪಹರಣ ಕೇಸ್ ಆರೋಪಿಗಳನ್ನು ಬಂಧಿಸುವಲ್ಲಿ ತನಿಖಾಧಿಕಾರಿಯವರಿಗೆ ಸಹಕರಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷರಿಂದ 30 ಬಾರಿ ಪ್ರಶಂಸನಾ ಪತ್ರ, ನಗದು ಬಹುಮಾನ, ಪಶ್ಚಿಮ ವಲಯ ಐಜಿಯವರಿಂದ 3 ಪ್ರಶಂಸನಾ ಪತ್ರ, ನಗದು ಬಹುಮಾನ, ಹತ್ತಾರು ಸಾರ್ವಜನಿಕ ಸನ್ಮಾನ, ಅಭಿನಂದನೆಗಳನ್ನು ಪಡೆದಿದ್ದಾರೆ.

More articles

Latest article