ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ಶ್ರವಣ ದಿನ ಎಂದು ಆಚರಿಸಿ ಕಿವುಡುತನ ಬರುವುದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಿವಿಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ವಿಶ್ವದಾದ್ಯಂತ ಮಾಡಲಾಗುತ್ತಿದೆ. 2021ರ ಶ್ರವಣ ದಿನದ ಆಚರಣೆಯ ಧ್ಯೇಯ ವಾಕ್ಯ ಎಲ್ಲರಿಗೂ ಕಿವಿಗಳ ಹಾರೈಕೆ ಎಂಬುದಾಗಿದೆ. ಹೆಚ್ಚುತ್ತಿರುವ ಶಬ್ಧಮಾಲಿನ್ಯ ವಾಹನಗಳ ಸಾಂದ್ರತೆ ಮತ್ತು ಕೈಗಾರೀಕರಣದಿಂದಾಗಿ ಜನರ ಶ್ರವಣ ಶಕ್ತಿಯ ಮೇಲೆ ಋಣಾತ್ಮಕ ಪರಿಣಾಮ ನಿರಂತರವಾಗಿ ಉಂಟಾಗುತ್ತಿದೆ. ಸುಮಾರು 205 ಮಿಲಿಯನ್ ಮಂದಿ ವಿಶ್ವದಾದ್ಯಂತ ಕಿವಿ ಸಂಬಂಧಿ ರೋಗದಿಂದ ಬಳಲುತ್ತಿದ್ದಾರೆ. ವಿಶ್ವಸಂಸ್ಥೆ ವರದಿ ಪ್ರಕಾರ ಇದೇ ಪರಿಸ್ಥಿತಿ ಮುಂದುವರಿದರೆ 2050ರ ಹೊತ್ತಿಗೆ ಪ್ರತೀ ನಾಲ್ಕರಲ್ಲಿ ಒಬ್ಬರು ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹೆಚ್ಚಿನ ಎಲ್ಲಾ ಕಿವಿ ಸಮಸ್ಯೆಗಳನ್ನು ಆರಂಭದಲ್ಲಿ ಗುರುತಿಸಿ ತಡೆಗಟ್ಟಬಹುದಾಗಿದೆ. ಮಕ್ಕಳಲ್ಲಿ ಶೇಕಡಾ 60 ರಷ್ಟು ಕಿವಿ ಸಂಬಂಧಿ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಿದೆ. ಆರಂಭಿಕ ಹಂತದಲ್ಲಿ ಶ್ರವಣ ಸಮಸ್ಯೆ ಗುರುತಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ಶಾಶ್ವತವಾದ ಕಿವುಡುತನವನ್ನು ತಡೆಗಟ್ಟಲು ಸಾಧ್ಯವಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಆಚರಣೆಯನ್ನು 2007ರಲ್ಲಿ ಆರಂಭಿಸಲಾಯಿತು. ಕಿವುಡುತನ ಮತ್ತು ಕುರುಡುತನ ತಡೆಗಟ್ಟುವ ಉದ್ದೇಶದಿಂದ ವಿಶ್ವಸಂಸ್ಥೆ ಈ ಆಚರಣೆಯನ್ನು ಆರಂಭಿಸಿತ್ತು. 2016ರ ವರೆಗೆ ಅಂತಾರಾಷ್ಟ್ರೀಯ ಕಿವಿ ಆರೈಕೆ ದಿನವೆಂದು ಕರೆಯಲಾಗುತ್ತಿದೆ. ಕಿವಿಡುತನದಲ್ಲಿ ಎರಡು ವಿಭಾಗವಿದ್ದು, ಒಂದು ತಡೆಗಟ್ಟಬಹುದಾದ ಕಿವುಡುತನ ಇನ್ನೊಂದು ತಡೆಗಟ್ಟಲಾಗದ ಕಿವುಡುತನ. ಮೊದಲನೇ ತಡೆಗಟ್ಟಬಹುದಾದ ಕಿವಿಡುತನವನ್ನು ಜಾಗೃತಿ ಕಾರ್ಯಕ್ರಮ ಮತ್ತು ಅರಿವು ಮೂಡಿಸುವ ಮುಖಾಂತರ ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಇನ್ನು ಎರಡನೇ ತಡೆಗಟ್ಟಲಾರದ ಕಿವುಡುತನವನ್ನು ತಡೆಯಲು ಸಾಧ್ಯವಿಲ್ಲದಿದ್ದರೆ ಅಂತಹ ರೋಗಿಗಳಿಗೆ ಸೂಕ್ತವಾಗಿ ಚಿಕಿತ್ಸೆ ಅಥವಾ ಸಲಕರಣೆಗಳ ಮುಖಾಂತರ ಕಿವುಡುತನದ ತೀವ್ರತೆಯನ್ನು ಕಡಿತಗೊಳಿಸಿ ಅವರಿಗೆ ಮಾನಸಿಕ ಧೈರ್ಯ ತುಂಬಿ ಅವರನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ಉದಾತ್ತ ಉದ್ದೇಶವನ್ನು ಹೊಂದಿದೆ. ಒಟ್ಟಿನಲ್ಲಿ ಜಗತ್ತಿನ ಕಟ್ಟಕಡೆಯ ವ್ಯಕ್ತಿಗೂ ಕಿವಿ ಆರೈಕೆ ಮತ್ತು ಆರೋಗ್ಯದ ಬಗ್ಗೆ ವಿಶೇಷ ಮಾಹಿತಿ ನೀಡಿ ಅರಿವು ಮೂಡಿಸಿ ಕಿವುಡುತನ ಬಾರದಂತೆ ಮಾಡುವ ಮಹತ್ತರ ಸದುದ್ದೇಶವನ್ನು ವಿಶ್ವ ಶ್ರವಣ ದಿನಾಚರಣೆ ಹೊಂದಿದೆ. ಮುಂದವರಿಯುತ್ತಿರುವ ರಾಷ್ಟ್ರಗಳಲ್ಲಿ ಕಿತ್ತು ತಿನ್ನುವ ಬಡತನ, ಅನಕ್ಷರತೆ ಮತ್ತು ಮೂಲ ಸೌಕರ್‍ಯಗಳಾದ ಶುದ್ಧ ಗಾಳಿ, ಬೆಳಕು, ನೀರಿನ ಕೊರತೆ ಹಾಗೂ ಸಾಕಷ್ಟು ಪರಿಣಿತ ಕಿವಿ ತಜ್ಞರ ಲಭ್ಯತೆಯ ಕೊರತೆಯಿಂದಾಗಿ ಕಿವಿ ಸಂಬಂಧಿ ರೋಗಗಳು ಹೆಚ್ಚು ಕಂಡು ಬರುತ್ತದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇತ್ತೀಚೆಗೆ ಹೆಚ್ಚುತ್ತಿರುವ ಶಬ್ಧ ಮಾಲಿನ್ಯ ಕೂಡ ಕಿವುಡುತನಕ್ಕೆ ಹೆಚ್ಚು ಕಾರಣವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕಿವಿಗುಗ್ಗೆ
ಪಂಚೇಂದ್ರಿಯಗಳಾದ ನಾಲಗೆಯಿಂದ ನಾವು ರುಚಿಯನ್ನು ಅಸ್ಪಾಧಿಸಿ, ಕಣ್ಣುಗಳಿಂದ ಬಾಹ್ಯ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ, ಚರ್ಮಗಳಿಂದ ಸ್ವರ್ಶ ಜ್ಞಾನವನ್ನು ಅನುಭವಿಸಿ, ಮೂಗುಗಳಿಂದ ವಾಸನೆಯನ್ನು ಗೃಹಿಸಿ, ಕಿವಿಗಳಿಂದ ಕೇಳಿ ಜೀವನದ ಪ್ರತಿ ಕ್ಷಣವನ್ನು ಅಸ್ಪಾಧಿಸುತ್ತೇವೆ ಮತ್ತು ಅನುಭವಿಸುತ್ತೇವೆ. ಈ ಎಲ್ಲಾ ಅಂಗಗಳಲ್ಲಿಯೂ ಕಿವಿ ಬಹಳ ಸಾಧುವಾದ ಅಂಗ. ಕಣ್ಣು ಮೂಗುಗಳಂತೆ ಕಿವಿಗಳಿಗೆ ರಾಜಾತಿಥ್ಯ ಬೇಡ. ಕಣ್ಣು ಬಹಳ ನಾಜೂಕಿನ ಅಂಗವಾಗಿದ್ದು ಎಷ್ಟು ಸೇವೆ ಮಾಡಿದರೂ ಸಾಲದು. ಇನ್ನು ಮೂಗಂತೂ ಬಹಳ ಮುಟ್ಟಿದರೆ ಮುನಿ ಜಾತಿಗೆ ಸೇರಿದ ಅಂಗ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಲರ್ಜಿ ಉಂಟಾಗಿ ಮೂಗಿನಿಂದ ನೆಗಡಿ ಸೊರಲ್ಪಡುತ್ತದೆ. ಈ ನಿಟ್ಟಿನಲ್ಲಿ ಕಿವಿ ಬಹಳ ಸಾಧು ಅಂಗ ಎಂದರೂ ತಪ್ಪಲ್ಲ. ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಕಿವಿಗುಗ್ಗೆಯನ್ನು ತೆಗೆದರೆ ಸಾಕು ಬೇರೆ ಯಾವ ರಾಜಾತಿಥ್ಯವೂ ಕಿವಿಗೆ ಅಗತ್ಯವಿಲ್ಲ.

ಏನಿದು ಕಿವಿಗುಗ್ಗೆ ?
ಆಂಗ್ಲ ಭಾಷೆಯಲ್ಲಿ ಕಿವಿಗುಗ್ಗೆಗೆ ಸೆರುಮೆನ್ ಎಂದು ಕರೆಯಲಾಗುತ್ತದೆ. ಇದೊಂದು ಕಂದು ಅಥವಾ ಹಳದಿ ಮಿಶ್ರಿತ ಬಣ್ಣದ ಮೇಣದಂತಹಾ ವಸ್ತುವಾಗಿದ್ದು ಹೊರಕಿವಿಯು ಕರ್ಣನಾಳದ ಹೊರಭಾಗದಲ್ಲಿರುವ ಜೀವಕೋಶಗಳಿಂದ ಉತ್ಪಾದನೆಯಾಗುವ ಜಿಡ್ಡು ಪದಾರ್ಥವಾಗಿರುತ್ತದೆ. ಇದೊಂದು ಜಿಡ್ಡು ಗುಗ್ಗೆಯಾಗಿದ್ದು ಕಿವಿಯ ಒಳಭಾಗದ ಚರ್ಮವನ್ನು ರಕ್ಷಿಸುತ್ತದೆ. ಅದೇ ರೀತಿ ಕಿವಿಯು ಕರ್ಣನಾಳವನ್ನು ಶುಚಿಗೊಳಿಸುತ್ತದೆ ಮತ್ತು ಒಳಭಾಗದ ನೀರಿನಾಂಶವನ್ನು ಕಾಪಾಡುತ್ತದೆ. ಅದೇ ರೀತಿ ಬ್ಯಾಕ್ಟೀರಿಯಾ, ಫಂಗಸ್ ಸಣ್ಣ ಕೀಟಾಣುಗಳು ಮತ್ತು ನೀರಿನಿಂದ ಕಿವಿಯ ಒಳಭಾಗವನ್ನು ರಕ್ಷಿಸುತ್ತದೆ. ಬರೀ ಮನುಷ್ಯರಲ್ಲಿ ಮಾತ್ರವಲ್ಲದೆ ಸಸ್ತನಿಗಳಲ್ಲಿಯೂ ಈ ಮೇಣ ಸ್ರವಿಸಲ್ಪಡುತ್ತದೆ. ತಿಮಿಂಗಿಲಗಳಲ್ಲಿ ಈ ಕಿವಿಗುಗ್ಗೆ ಕಾಲಕಾಲಕ್ಕೆ ಶೇಖರಣೆಯಾಗುತ್ತಲೇ ಹೋಗುತ್ತದೆ. ತಿಮಿಂಗಿಲಗಳಿಗೆ ಹಲ್ಲಿಲ್ಲದ ಕಾರಣದಿಂದ ಈ ತಿಮಿಂಗಿಲಗಳ ವಯಸ್ಸನ್ನು ಕಿವಿಗುಗ್ಗೆಗಳ ಪ್ರಮಾಣ ಮತ್ತು ಗಾತ್ರಕ್ಕೆ ಅನುಸರಿಸಿ ನಿರ್ಧರಿಸಲಾಗುತ್ತದೆ ಮತ್ತು ತಿಮಿಂಗಿಲಗಳ ಕಿವಿಗುಗ್ಗೆ ಭಯಂಕರವಾದ ವಾಸನೆ ಹೊಂದಿರುತ್ತದೆ. ಮನುಷ್ಯರಲ್ಲಿ ಈ ಮೇಣಕ್ಕೆ ಒಂದು ವಿಶೇಷ ವಾಸನೆ ಇದ್ದು, ಇರುವೆ ಜಿರಲೆಗಳನ್ನು ವಿಕರ್ಷಿಸಿ ನಾವು ಮಲಗಿರುವಾಗ ಕಿವಿಯನ್ನು ರಕ್ಷಿಸುತ್ತದೆ. ಅದೇ ರೀತಿ ಕಿವಿಯೊಳಗೆ ನೀರು ಹಾಗೂ ನೀರಿನ ಜೊತೆ ಕ್ರಿಮಿ ಒಳಸೇರದಂತೆ ಈ ಜಿಡ್ಡು ಕಿವಿಗುಗ್ಗೆ ತಡೆಯುತ್ತದೆ. ಕಿವಿಗುಗ್ಗೆಯನ್ನು ತೆಗೆಯಲೇಬೇಕಾದ ಅನಿವಾರ್ಯತೆ ಇಲ್ಲ. ಆದರೆ ಅತಿಯಾಗಿ ಗುಗ್ಗೆ ಬೆಳೆದಿದ್ದಲ್ಲಿ ಅಥವಾ ಕಿವಿಯನ್ನು ಮುಚ್ಚುವಷ್ಟು ಗುಗ್ಗೆ ಉಂಟಾದಲ್ಲಿ ಈ ಗುಗ್ಗೆಯನ್ನು ತೆಗೆಸತಕ್ಕದ್ದು. ಕಿವಿಯೊಳಗೆ ಅನಗತ್ಯವಾಗಿ ಪಿನ್‌ಗಳನ್ನು, ಹೆಡ್‌ಫೋನು, ಶ್ರವಣ ಸಾಧನ, ಹತ್ತಿಯ ಕಣಗಳನ್ನು ತೂರಿಸಬಾರದು. ಇವುಗಳ ಬಳಕೆಯಿಂದಲೇ ಜಾಸ್ತಿ ಮೇಣ ಉತ್ಪತ್ತಿಯಾಗಿ ಕಿವಿ ಬಂದಾಗಬಹುದು.
ಈ ಗುಗ್ಗೆಗಳಲ್ಲಿ ಎರಡು ವಿಧಗಳಿವೆ. ಒಂದು ಒಣಗುಗ್ಗೆ (ಅಮೇರಿಕಾ ಮತ್ತು ಏಷ್ಯಾದ ಜನರಲ್ಲಿ) ಮತ್ತು ತೇವಗುಗ್ಗೆ, (ಆಪ್ರಿಕಾ ಮತ್ತು ಯುರೋಪಿಯನ್ಸ್) ಯಾವ ರೀತಿಯ ಗುಗ್ಗೆ ಎಂಬುದು ವಂಶವಾಹಿನಿ ಜೀನ್‌ಗಳಲ್ಲಿಯೇ ನಿರ್ಧಾರವಾಗುತ್ತದೆ.
ನಮ್ಮ ಕಿವಿಯೊಳಗಿನ ಗುಗ್ಗೆಯನ್ನು ಸ್ಚಚ್ಚಗೊಳಿಸಲು ಪ್ರಕೃತಿಯೇ ಒಂದು ಸ್ವಚ್ಚತಾ ನಿಯಮವನ್ನು ಮಾಡಿಕೊಂಡಿದೆ. ಕರ್ಣನಾಳದ ಒಳಭಾಗದ ಜೀವಕೋಶಗಳು ವಯಸ್ಸಾದಂತೆ ಹೊರ ಭಾಗಕ್ಕೆ ಚಲಿಸಿ ತಮ್ಮ ಜೊತೆ ಈ ಗುಗ್ಗೆಗಳನ್ನು ಕಿವಿಯಿಂದ ಹೊರಹಾಕುತ್ತದೆ. ಒಟ್ಟಿನಲ್ಲಿ ನಾವು ಕಿವಿಗುಗ್ಗೆ ತೆಗೆಯಲೇಬೇಕೆಂಬ ಅನಿವಾರ್ಯತೆ ಇಲ್ಲ. ಆದರೆ ಕೆಲವೊಮ್ಮೆ ಈ ನೈಸರ್ಗಿಕ ಪ್ರಕ್ರಿಯೆಗೆ ತೊಡಕಾಗಿ ದೊಡ್ಡ ಪ್ರಮಾಣದಲ್ಲಿ ಕಿವಿಗುಗ್ಗೆ ತುಂಬಿಕೊಂಡು ನೋವು, ತುರಿಕೆ, ಅಸಹನೆ, ಕಿವಿ ಕೆಳದಂತಾಗುವುದು, ಕಿವಿಯೊಳಗೆ ಸದ್ದು, ತಲೆ ಸುತ್ತುವುದು ಮತ್ತು ಕೆಮ್ಮು ಕೂಡಾ ಕಾಣಿಸಬಹುದು. ತಕ್ಷಣವೇ ವೈದ್ಯರ ಬಳಿ ತೋರಿಸಿ ಮಾರ್ಗದರ್ಶನ ಪಡೆದುಕೊಳ್ಳತಕ್ಕದ್ದು.

ಹೇಗೆ ತೆಗೆಯುವುದು?
ಹಿಂದಿನ ಕಾಲದಲ್ಲಿ ಮನೆ ಮದ್ದು ಮಾಡಿ ಈ ಗುಗ್ಗೆಯನ್ನು ತೆಗೆಯಲಾಗುತ್ತಿತ್ತು. ಉಗುರು ಬೆಚ್ಚಗಿನ ಹರಳೆಣ್ಣೆ, ಆಲಿಮ್ ಎಣ್ಣೆಯನ್ನು ಬಳಸುತ್ತಿದ್ದರು. ಆದರೆ ವೈದ್ಯರ ಬಳಿ ತೋರಿಸುವುದೇ ಸೂಕ್ತ. ಈ ರೀತಿ ಎಣ್ಣೆ ಬಳಸಿದಾಗ ಮೇಣ ಕರಗಿ ದ್ರವ್ಯವಾಗುತ್ತದೆ ಎಂಬ ನಂಬುಗೆಯೂ ಇದೆ. ಯಾವುದೇ ಕಾರಣಕ್ಕೂ ಕೈಗೆ ಸಿಕ್ಕಿದ ಪೆನ್, ಕಡ್ಡಿ, ಸ್ಕ್ರೂಡ್ರೆವರ್, ಬೆಂಕಿಕಡ್ಡಿ, ಪನ್ಸಿಲ್‌ನ ಹಿಂಭಾಗ, ಪೆನ್ಸಿಲ್‌ನ ಟೋಪಿ ಮುಂತಾದ ಯಾವುದೇ ವಸ್ತುಗಳನ್ನು ಕಿವಿಯೊಳಗೆ ಹಾಕಲೇ ಬೇಡಿ.
ಮೆಡಿಕಲ್ ಶಾಪ್‌ಗಳಲ್ಲಿ ಈ ಮೆಣ (ಗುಗ್ಗೆ) ಕರಗಿಸುವ ಔಷಧಿ ಲಭ್ಯವಿದ್ದು ದಿನಕ್ಕೆ ೩ ರಿಂದ ೪ ಬಾರಿ ೫ ರಿಂದ ೬ ದಿನ ಬಳಸಿದಲ್ಲಿ ಕಿವಿ ಸ್ವಚ್ಚವಾಗುತ್ತದೆ. ಆದರೆ ತುಂಬಾ ಗುಗ್ಗೆ ಇದ್ದಲ್ಲಿ ವೈದ್ಯರೇ ತೆಗೆಯುವುದು ಉತ್ತಮ. ನುರಿತ ವೈದ್ಯರು ೨ರಿಂದ ೫ ನಿಮಿಷದಲ್ಲಿ ಈ ಗುಗ್ಗೆಯನ್ನು ತೆಗೆಯಬಲ್ಲದು. ಕೆಲವೊಮ್ಮೆ ವೈದ್ಯರು ಸಿರಿಂಜಿನ ಮೂಲಕ ಕಿವಿಯೊಳಗೆ ನೀರು ಹಾಯಿಸಿ ಅಥವಾ ಇನ್ನಾವುದೇ ಔಷಧಿ ದ್ರಾವಣ ಹಾಯಿಸುವ ಮುಖಾಂತರ ಎಲ್ಲ ಮೇಣವನ್ನು ತೆಗೆದು ಸ್ವಚ್ಚಗೊಳಿಸುತ್ತಾರೆ.
ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ಸಿಗುವ ಇಯರ್ ಬಡ್ಸ್ (ಕಿವಿ ಶುಭ್ರಗೊಳಿಸುವ ಹತ್ತಿಯುಂಡೆಯ ಕಡ್ಡಿ) ಎಂಬುದನ್ನು ಬಳಸಲೇ ಬಾರದು. ಅದು ಬಳಸುವುದರಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಇಯರ್‌ಬಡ್ಸ್‌ಗಳಿಂದಾಗಿ ಮೇಣ ಮತ್ತಷ್ಟು ಕಿವಿ ಒಳಗೆ ಹೋಗುವ ಸಾಧ್ಯತೆಯೂ ಇದೆ. ಬಳಸಲೇ ಬೇಕಿದಲ್ಲಿ ಆಸ್ಪತ್ರೆಯಲ್ಲಿ ಸರಿಯಾಗಿ ಶುಚಿಗೊಳಿಸಿದ ಇಯರ್ ಬಡ್ಸ್‌ಗಳನ್ನು ಬಳಸತಕ್ಕದ್ದು. ಸಿಕ್ಕ ಸಿಕ್ಕಲ್ಲಿ, ಕಿವಿಯೊಳಗೆ ಸಿಕ್ಕಿದ ವಸ್ತುಗಳನ್ನು ತುರುಕುವುದು ಅತೀ ಅಪಾಯಕಾರಿಯಾದ ಚಟ. ಈ ಚಟಕ್ಕೆ ಸೂಕ್ತ ಮದ್ದು ತೆಗೆದುಕೊಳ್ಳಲೇ ಬೇಕು. ಇಲ್ಲವಾದಲ್ಲಿ ಕಿವಿ ತಮಟೆ ಹರಿಯುವ ಮತ್ತು ಸೋಂಕು ತಗಲುವ ಎಲ್ಲಾ ಸಾಧ್ಯತೆಗಳೂ ಇದೆ.

ಕೊನೆಮಾತು :
ನೆನಪಿಡಿ : ಕಿವಿಯ ಕರ್ಣನಾಳದೊಳಗಿನ ಚರ್ಮ ಬಹಳ ನಾಜೂಕಾಗಿರುತ್ತದೆ. ಕಿವಿಯೊಳಗೆ ಇಯರ್ ಬಡ್ಸ್ ಹಾಕಿ ಜೋರಾಗಿ ತಿರುಗಿಸುವುದರಿಂದ ಮೇಣವನ್ನು ತೆಗೆಯುವುದರ ಜೊತೆಗೆ ಕರ್ಣನಾಳದ ಚರ್ಮದ ಮೇಲಿನ ಸೂಕ್ಮ ಜಿಡ್ಡು ಪದರವನ್ನು ನಾಶಪಡಿಸುವ ಸಾಧ್ಯತೆ ಇರುತ್ತದೆ. ಹಾಗಾದಾಗ ಬ್ಯಾಕ್ಟೀರಿಯಾಗಳು ಸುಲಭವಾಗಿ ಕಿವಿಗಳ ಒಳಭಾಗವನ್ನು ತಲುಪಿ ಸೋಂಕು ಉಂಟು ಮಾಡುವ ಸಾಧ್ಯತೆಯೂ ಇರುತ್ತದೆ. ತುಂಬಾ ಜೋರಾಗಿ ತುರುಕಿದಲ್ಲಿ ತಮಟೆಗಳೂ ಹಾನಿಯಾಗಬಹುದು. ನಿಧಾನವಾಗಿ ನಾಜೂಕಾಗಿ ಇಯರ್ ಬಡ್ಸ್ ಅತೀ ಅಗತ್ಯವಿದ್ದಲ್ಲಿ ಮಾತ್ರ ಬಳಸಬೇಕು. ಮೇಣ ಗಟ್ಟಿ ಇದ್ದಲ್ಲಿ ಶುದ್ಧ ಉಗುರು ಬೆಚ್ಚಗಿನ ನೀರು ಅಥವಾ ಹೈಡ್ರೊಜನ್ ದ್ರಾವಣ ಬಳಸಬಹುದು. ವರ್ಷದಲ್ಲಿ ಒಮ್ಮೆಯಾದರೂ ಕಿವಿಯ ತಜ್ಞರ ಬಳಿ ತೋರಿಸಿಕೊಂಡು ಕಿವಿ ಸ್ವಚ್ಛಗೊಳಿಸುವುದರಲ್ಲಿಯೇ ಜಾಣತನ ಅಡಗಿದೆ.

 


ಡಾ|| ಮುರಲೀ ಮೋಹನ್ ಚೂಂತಾರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here